ಇನ್ನೂ ಬಣ್ಣ ಹಚ್ಚದ ಗಣಪ ; ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಘಟನೆಗಳ ಪಟ್ಟು

ದೇಶದ ಮೊದಲ ಕೊರೋನಾ ಸಾವು ಸಂಭವಿಸಿದ್ದ ಕಲಬುರ್ಗಿಯಲ್ಲಿ ಸೋಂಕಿನ ಜೊತೆ, ಸಾವಿನ ಸಂಖ್ಯೆಯೂ ತೀವ್ರ ಏರಿಕೆ ಕಂಡಿದೆ. ಹೀಗಿರಬೇಕಾದರೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಮೀನ-ಮೇಷ ಎಣಿಸುತ್ತಿದೆ.

news18-kannada
Updated:August 14, 2020, 6:55 PM IST
ಇನ್ನೂ ಬಣ್ಣ ಹಚ್ಚದ ಗಣಪ ; ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ಸಂಘಟನೆಗಳ ಪಟ್ಟು
ಗಣೇಶನ ಮೂರ್ತಿಗಳು
  • Share this:
ಕಲಬುರ್ಗಿ(ಆಗಸ್ಟ್​ .14 ): ಗಣೇಶ ಹಬ್ಬಕ್ಕೆ ಕೊರೋನಾ ಕಾರ್ಮೋಡ ಆವರಿಸಿದೆ. ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದರೂ ಹಬ್ಬದ ಸಡಗರ ಕಾಣಿಸುತ್ತಿಲ್ಲ. ಕಲಬುರ್ಗಿ ಜಿಲ್ಲಾಡಳಿತ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಈ ಬಾರಿ ಅನುಮತಿ ನೀಡುವುದು ಡೌಟ್. ಹೀಗಾಗಿ ಗಣೇಶ ಮೂರ್ತಿಗಳು ಇನ್ನೂ ಬಣ್ಣ ಹಚ್ಚಿಕೊಂಡಿಲ್ಲ. ಗೌರಿ-ಗಣೇಶ ಹಬ್ಬ ಹಿಂದೂಗಳ ಪಾಲಿನ ದೊಡ್ಡ ಹಬ್ಬಗಳಲ್ಲೊಂದು. ಪ್ರತಿ ವರ್ಷ ಗಣೇಶ ಚತುರ್ಥಿಗೆ ಮುನ್ನವೇ ನಾಡಿನೆಲ್ಲೆಡೆ ಸಡಗರ ಮನೆ ಮಾಡಿರುತ್ತದೆ. ಆದರೆ ಈ ಬಾರಿ ಮಾತ್ರ ಎಲ್ಲಿಯೂ ಸಡಗರವೇ ಕಾಣಿಸುತ್ತಿಲ್ಲ.

ಹಬ್ಬದ ಸಂಭ್ರಮದ ಮೇಲೆ ಕೊರೋನಾ ಕಾರ್ಮೋಡ ಆವರಿಸಿದೆ. ಹೀಗಾಗಿ ಗಣೇಶ ಇನ್ನೂ ಬಣ್ಣ ಹಚ್ಚಿಕೊಳ್ಳಲು ಹಿಂದೇಟು ಹಾಕುತ್ತಿದ್ದಾನೆ. ದೊಡ್ಡ ದೊಡ್ಡ ಗಣೇಶ ಮೂರ್ತಿಗಳು ನಿರ್ಮಾಣಗೊಂಡಿದ್ದರೂ, ಅವುಗಳಿಗೆ ಬಣ್ಣ ಹಚ್ಚಿಲ್ಲ. ಎರಡು-ಮೂರು ತಿಂಗಳು ಮುಂಚಿತವಾಗಿಯೇ ಬುಕ್ ಆಗುತ್ತಿದ್ದ ಗಣೇಶ ಮೂರ್ತಿಗಳಿಗೆ ಈ ಬಾರಿ ಬೇಡಿಕೆ ಇಲ್ಲದಂತಾಗಿದೆ. ಕಲಬುರ್ಗಿಯಲ್ಲಂತೂ ಒಂದೂ ಗಣೇಶ ಮೂರ್ತಿಗಳು ಇದುವರೆಗೂ ಬುಕ್ ಆಗಿಲ್ಲ ಎಂದು ಗಣೇಶ ಮೂರ್ತಿ ತಯಾರಕರು ಅಲವತ್ತುಕೊಳ್ಳುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಕಲಬುರ್ಗಿಯಲ್ಲಿ ಕೊರೋನಾ ವ್ಯಾಪಕವಾಗಿರುವುದು. ದೇಶದ ಮೊದಲ ಕೊರೋನಾ ಸಾವು ಸಂಭವಿಸಿದ್ದ ಕಲಬುರ್ಗಿಯಲ್ಲಿ ಸೋಂಕಿನ ಜೊತೆ, ಸಾವಿನ ಸಂಖ್ಯೆಯೂ ತೀವ್ರ ಏರಿಕೆ ಕಂಡಿದೆ. ಹೀಗಿರಬೇಕಾದರೆ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಜಿಲ್ಲಾಡಳಿತ ಮೀನ-ಮೇಷ ಎಣಿಸುತ್ತಿದೆ.

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಮೂರ್ತಿ ಸಿದ್ಧಪಡಿಸಿರುವ ತಯಾರಕರು, ತಲೆ ಮೇಲೆ ಕೈಹೊತ್ತು ಕೂಡುವಂತಾಗಿದೆ. ಕಾಪಾಡೋ ಗಣಪ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾನೆ ರಾಜಸ್ಥಾನ ಮೂಲದ ಗಣೇಶ ಮೂರ್ತಿ ತಯಾರಕ ಚತ್ರರಾಮ್.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ನಿರ್ಬಂಧ ವಿಧಿಸಲಾಗಿದೆ. ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕಲಬುರ್ಗಿ ಜಿಲ್ಲೆಯ ಸದ್ಯದ ಕೊರೋನಾ ಪರಿಸ್ಥಿತಿ ನೋಡಿದಾಗ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ನೀಡುವುದು ಬಹುತೇಕ ಅನುಮಾನ. ಇದಕ್ಕೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Darshan: ಟ್ರ್ಯಾಕ್ಟರ್ ಆಯ್ತು, ಈಗ ಎತ್ತಿನ ಬಂಡಿ ಏರಿ ರಸ್ತೆಗಿಳಿದ ಚಾಲೆಂಜಿಂಗ್ ಸ್ಟಾರ್ ದರ್ಶನ್​

ಬಾರ್, ರೆಸ್ಟೋರೆಂಟ್, ಮಾಲ್ ಗಳಿಗೆ ಅನುಮತಿ ನೀಡಲಾಗಿದೆ. ಹೀಗಿರಬೇಕಾದರೆ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಲ್ಲವೆಂದರೆ ಅರ್ಥವೇನು ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ. ಅವಕಾಶ ನೀಡಲಿ, ಬಿಡಲಿ, ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದಾಗಿ ಮುತಾಲಿಕ್ ಎಚ್ಚರಿಸಿದ್ದಾರೆ.
ಒಟ್ಟಾರೆ ಕೊರೋನಾ ಅಬ್ಬರದಲ್ಲಿ ಗಣೇಶ ಹಬ್ಬದ ಸಂಭ್ರಮ ಗೌಣವಾಗಲಾರಂಭಿಸಿದೆ. ಸಣ್ಣ ಗಣಪನಿಂದ ಹಿಡಿದು ಬೃಹತ್ ಗಾತ್ರದ ನೂರಾರು ಗಣೇಶ ಮೂರ್ತಿಗಳು ತಯಾರಿಕೆಗೆ ಸಿದ್ಧವಾಗಿ ನಿಂತಿದ್ದರೂ ಯಾರೂ ಬುಕ್ ಮಾಡುವವರೇ ಇಲ್ಲ. ಹೀಗಾಗಿ ಮೂರ್ತಿಗಳ ತಯಾರಕರೂ ಅವುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡುವ ಗೋಜಿಗೆ ಹೋಗುತ್ತಿಲ್ಲ. ಚಿಕ್ಕ ಚಿಕ್ಕ ಗಣೇಶ ಮೂರ್ತಿಗಳನ್ನು ಮಾತ್ರ ರೆಡಿಯಾಗಿ ಇಟ್ಟಿದ್ದು, ಗಣೇಶೋತ್ಸವ ಮನೆಗಳಲ್ಲಿ ಪ್ರತಿಷ್ಠಾಪನೆಗೆ ಮಾತ್ರ ಸೀಮಿತವಾಗುವ ಸಾಧ್ಯತೆಗಳಿವೆ.
Published by: G Hareeshkumar
First published: August 14, 2020, 6:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading