• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • Ganesha Festival: ಒಂದೇ ಸೂರಿನಡಿ 4 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ; ಸರ್ಕಾರದ ಗೊಂದಲದ ನಿರ್ಧಾರದಿಂದ ಮಂಕಾದ ಮಾರಾಟ

Ganesha Festival: ಒಂದೇ ಸೂರಿನಡಿ 4 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಮಾರಾಟಕ್ಕೆ ಅವಕಾಶ; ಸರ್ಕಾರದ ಗೊಂದಲದ ನಿರ್ಧಾರದಿಂದ ಮಂಕಾದ ಮಾರಾಟ

ಗಣೇಶ

ಗಣೇಶ

ರಾಜ್ಯ ಸರ್ಕಾರ ಗಣೇಶ ಹಬ್ಬ ಆಚರಣೆ ವಿಚಾರದಲ್ಲಿ ಕೆಲ ಗೊಂದಲದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮನೆಯಲ್ಲಿ 2 ಅಡಿಗಿಂತ ಎತ್ತರವಾದ ಗಣೇಶ ಮೂರ್ತಿ ಕೂರಿಸುವಂತಿಲ್ಲ. ವಾರ್ಡಿನಲ್ಲಿ ನಾಲ್ಕು ಅಡಿಗಿಂತ ಎತ್ತರವಾದ ಮೂರ್ತಿ ಕೂರಿಸುವಂತಿಲ್ಲ ಎಂಬ ತೀರ್ಮಾನಕ್ಕೆ ಸಾಕಷ್ಟು ಟೀಕೆಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.

ಮುಂದೆ ಓದಿ ...
  • Share this:

ಗದಗ: (Gadaga) ಕೊರೋನಾ ನಂತರ ಈ ಬಾರಿ ಸರಳ ಗಣೇಶೋತ್ಸವ (Ganesha Festival) ಆಚರಣೆಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಅದ್ಧೂರಿ ಅಲ್ಲದಿದ್ರೂ ಸಂಪ್ರದಾಯ ಮುಂದುವರೆಸುವ ನಿಟ್ಟಿನಲ್ಲಿ  ಹಬ್ಬ ಆಚರಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದ್ರೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ, ತರಾತುರಿಯಲ್ಲೋ ಅಥವಾ ಗೊಂದಲದಲ್ಲೋ ಗೊತ್ತಿಲ್ಲ ವಿಘ್ನ ನಿವಾರಕನ ಹಬ್ಬಕ್ಕೆ ನಿಬಂಧನೆಗಳನ್ನ ಒಡ್ಡಿರೋ ಸರ್ಕಾರ ಈ ಬಾರಿ ಗಣಪತಿ ಹಬ್ಬವನ್ನ ಮಂಕಾಗಿಸಿದೆ. 


ಹೌದು, ಗದಗ ನಗರದ ಎಪಿಎಂಸಿಯ ವಿವೇಕಾನಂದ ಸಭಾಂಗಣದಲ್ಲಿ ಜಿಲ್ಲಾಡಳಿತ ಗಣೇಶನ ಖರಿದಿಸೋ ಗ್ರಾಹಕರಿಗೆ ಹಾಗೂ ಮಾರಾಟಗಾರರಿಗೆ ಅನುಕೂಲ ಆಗಲಿ ಅಂತ ಒಂದೇ ಸೂರಿನಡಿ ಸಾವಿರಾರು ವಿಗ್ರಹಗಳ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಇಷ್ಟೆಲ್ಲ ಕಲರ್ ಕಲರ್ ಗಣಪತಿಗಳು ಇದ್ರೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಗಣಪತಿ ತೆಗೆದುಕೊಳ್ಳೋಕೆ ಮುಂದೆ ಬರ್ತಿಲ್ಲ. ಇದಕ್ಕೆ ಕಾರಣ, ಸರ್ಕಾರದ ಗೊಂದಲ ಹಾಗೂ ತಡವಾದ ನಿರ್ಧಾರ. ಸರ್ಕಾರ ಕೊನೆ ಕ್ಷಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿದೆ. ಇದರಿಂದ ಮೂರ್ತಿ ತಯಾರಿಕರಿಗೇನೂ ದೊಡ್ಡಮಟ್ಟದ ಲಾಭ ಆಗಿಲ್ಲ‌ವಂತೆ. ಹೀಗಾಗಿ ಗಣೇಶ ವಿಗ್ರಹ ಉದ್ಯಮ ಚೇತರಿಕೆ ಕಾಣದೇ ಮಂಕಾಗಿ ಹೋಗಿದ್ದು ಕಳೆದ ವರ್ಷವೂ ಸೋತು ಕೈ ಕಟ್ಟಿ ಕುಳಿತಿದ್ದ ಗಣಪತಿ ತಯಾರಕರು, ಈ ವರ್ಷ ತಾವಂದುಕೊಂಡಂತೆ ಗಣಪತಿಗಳ ಮಾರಾಟ ಮಾಡೋಕೆ ಆಗ್ತಿಲ್ಲ‌. 11 ದಿನ ಮುಂಚಿತವಾಗಿಯೇ ಈ ನಿರ್ಧಾರ ಪ್ರಕಟಿಸಿದ್ದರೆ ಗಣೇಶ ಮೂರ್ತಿಗಳ ವಿಗ್ರಹ ಮಾರಾಟ ದ್ವಿಗುಣಗೊಳ್ತಿತ್ತು. ನಾವು ಖರ್ಚು ಮಾಡಿದ ಅಸಲಾದರೂ ನಮ್ಮ ಕೈ ಸೇರ್ತಿತ್ತು ಅನ್ನೊದು ಗಣೇಶ ಮೂರ್ತಿ ತಯಾರಕರ ಅಳಲಾಗಿದೆ.


ಗಣೇಶ ಮೂರ್ತಿ ತಯಾರಕರು ಆರು ತಿಂಗಳ ಮುಂಚೆಯೇ ಕೆಲಸ ಪ್ರಾರಂಭಿಸುತ್ತಾರೆ. ಆದ್ರೆ ಸರ್ಕಾರ ಕೊನೆ ಕ್ಷಣದಲ್ಲಿ ಗಣೇಶೋತ್ಸವಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನ ಪ್ರಕಟಿಸಿದೆ. ದೊಡ್ಡ ಗಣೇಶನನ್ನ ಕೂರಿಸಿ ವಿಜೃಂಭಣೆಯಿಂದ ಹಬ್ಬ ಆಚರಿಸಬೇಕು ಎಂದವರು ಪುಟ್ಟ ಗಣೇಶನನ್ನು ಸ್ಥಾಪಿಸಿ ‌ಸಂಪ್ರದಾಯ ಮುಂದುವರೆಸುವ ನಿರ್ಧಾರ ಮಾಡಿರುವುದು ವ್ಯಾಪಾರ ವಹಿವಾಟಿನ ಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ಅಲ್ಲದೇ ರಾಜ್ಯ ಪರಿಸರ‌‌ ಮಾಲಿನ್ಯ ‌ನಿಯಂತ್ರಣ ಮಂಡಳಿ ಈ ಬಾರಿ ಹತ್ತು ಲಕ್ಷ ಅರಿಷಿಣ ಗಣಪತಿ ಅಭಿಯಾನ ಆರಂಭಿಸಿರೋದು ಬಡ ಕಲಾವಿದರ ಹೊಟ್ಟೆ ಮೇಲೆ ಹೊಡೆಯೋ ಕೆಲಸ ಅಂತ ಮಾರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.


ಇತ್ತ ಗಣೇಶ ಪ್ರತಿಷ್ಠಾಪಿಸೋ ಜನರೂ ಸಹ ಕರೋನಾ ನಂತರ ಈ ಬಾರಿ ಗಣಪನ ಹಬ್ಬವನ್ನು ಅತ್ಯಂತ ಸರಳ, ಸಂಪ್ರದಾಯಕವಾಗಿ ಆಚರಿಸ್ತಿವೆ ಅಂತಿದ್ದಾರೆ. ಜೊತೆಗೆ ದುಬಾರಿ ದುನಿಯಾದಲ್ಲಿ ಆಡಂಬರ, ವಿಜೃಂಭಣೆಗೆ ಮಾರುಹೋಗದೇ ಸರಳವಾಗಿ ಹಬ್ಬ ಆಚರಿಸುತ್ತೇವೆ ಅಂತಿದ್ದಾರೆ ಸ್ಥಳೀಯರು. ಇನ್ನು ನಗರದಲ್ಲಿ ಜಿಟಿಜಿಟಿ ಮಳೆಯಿಂದಾಗಿಯೂ ಹಳ್ಳಿಗರು ನಗರದತ್ತ ಮೂರ್ತಿ ಖರೀದಿಗೆ ಆಗಮಿಸುತ್ತಿಲ್ಲ. ಇತ್ತ  ದುಬಾರಿ ದುನಿಯಾ ನಡುವೆ ಜನರಿಗೆ ಆರ್ಥಿಕ ಸಂಕಷ್ಟವೂ ಎದುರಾಗಿದೆ. ಒಟ್ಟಾರೆ ಸರ್ಕಾರ ಕಾಟಾಚಾರಕ್ಕೆ ಹಬ್ಬ ಆಚರಣೆಗೆ ಅನುಮತಿ ನೀಡಿದಂತಾಗಿದ್ದು ಸಾಕಷ್ಟು ವಿಘ್ನಗಳ ನಡುವೆಯೇ ಗಣೇಶನ ಹಬ್ಬ ಆಚರಿಸುವಂತಾಗಿದೆ.


ಇದನ್ನು ಓದಿ: DK Shivakumar: ಇಷ್ಟು ಅಡಿಯ ಗಣೇಶನನ್ನು ಮಾತ್ರ ಕೂರಿಸಬೇಕು ಎಂದು ಹೇಳಲು ಇವರು ಯಾರು?; ಡಿ.ಕೆ. ಶಿವಕುಮಾರ್ ಪ್ರಶ್ನೆ


ರಾಜ್ಯ ಸರ್ಕಾರ ಗಣೇಶ ಹಬ್ಬ ಆಚರಣೆ ವಿಚಾರದಲ್ಲಿ ಕೆಲ ಗೊಂದಲದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮನೆಯಲ್ಲಿ 2 ಅಡಿಗಿಂತ ಎತ್ತರವಾದ ಗಣೇಶ ಮೂರ್ತಿ ಕೂರಿಸುವಂತಿಲ್ಲ. ವಾರ್ಡಿನಲ್ಲಿ ನಾಲ್ಕು ಅಡಿಗಿಂತ ಎತ್ತರವಾದ ಮೂರ್ತಿ ಕೂರಿಸುವಂತಿಲ್ಲ ಎಂಬ ತೀರ್ಮಾನಕ್ಕೆ ಸಾಕಷ್ಟು ಟೀಕೆಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ.


ವರದಿ: ಸಂತೋಷ ಕೊಣ್ಣೂರ

First published: