ಗದಗ: ಕಿಲ್ಲರ್ ಕೊರೋನಾ ಎರಡನೆ ಅಲೆ ರಾಜ್ಯಾದ್ಯಂತ ಆರ್ಭಟಿಸುತ್ತಿದೆ. ಕೊರೋನಾ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ನಾನಾ ಕಸರತ್ತು ಮಾಡ್ತಾಯಿದೆ. ಆದರೂ ಕೂಡ ಡೆಡ್ಲಿ ಕೊರೋನಾ ವೈರಸ್ ಮಾತ್ರ ನಿಯಂತ್ರಣ ಆಗುತ್ತಿಲ್ಲ. ನಿತ್ಯ ನೂರಾರು ಜನರು ಸಾವಿನ ಮನೆ ಸೇರುತ್ತಿದ್ದಾರೆ. ಇಂತಹ ವೇಳೆಯಲ್ಲಿ ಇಲ್ಲೊಂದು ಗ್ರಾಮ ಪಂಚಾಯತಿ ಮಾದರಿ ಕೆಲಸ ಮಾಡುತ್ತಿದ್ದು, ಮಹಾಮಾರಿ ಕೊರೋನಾ ನಿಯಂತ್ರಣ ಮಾಡಲು ತಮ್ಮದೆಯಾದ ಪ್ಲಾನ್ ಮಾಡಿಕೊಂಡಿದೆ.
ಕರುನಾಡಿನಲ್ಲಿ ಹೆಮ್ಮಾರಿ ಅಟ್ಟಹಾಸಕ್ಕೆ ನಿತ್ಯ ನೂರಾರು ಜನರು ತಮ್ಮ ಅಮೂಲ್ಯವಾದ ಪ್ರಾಣವನ್ನು ಬಿಡ್ತಾಯಿದ್ದಾರೆ. ವೆಂಟಿಲೇಟರ್, ಆಕ್ಸಿಜನ್ ಸಿಗದೆ ನಿತ್ಯ ಜನರು ಸಾವಿನ ಮನೆ ಸೇರುತ್ತಿದ್ದಾರೆ. ಹೌದು, ಈ ಕೊರೋನಾ ಎರಡನೇ ಅಲೆ ನಿಯಂತ್ರಣ ಮಾಡಲು ಸರ್ಕಾರ ಎಷ್ಟೇ ಕಠಿಣ ನಿಯಮ ಜಾರಿ ಮಾಡಿದರೂ, ಅವುಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಇದರ ನಡುವೆ ಗದಗ ತಾಲೂಕಿನ ಸೊರಟೂರು ಗ್ರಾಮ ಪಂಚಾಯತಿ ಮಾದರಿ ಕೆಲಸವನ್ನು ಮಾಡುತ್ತಿದೆ.
ಹೌದು, ಸೊರಟೂರು ಗ್ರಾಮ ಪಂಚಾಯತಿ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಿಕೊಳ್ಳಲಾಗಿದೆ. ಈ ಸಮಿತಿಯಲ್ಲಿ ಗ್ರಾಮ ಪಂಚಾಯತಿ, ಉಪಾಧ್ಯಕ್ಷ, ಪಿಡಿಓ, ಆಶಾಕಾರ್ಯಕರ್ತೆಯರು, ಅಂಗನವಾಡಿ ಟೇಚರ್, ಸರ್ಕಾರಿ ಶಾಲಾ ಶಿಕ್ಷಕರು ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಕೊರೋನಾ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸುವುದು, ಹಾಗೂ ಸಾಮಾಜಿಕ ಅಂತರ, ಹಾಗೂ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸುತ್ತಾರೆ. ಮಾಸ್ಕ್ ಧರಿಸದೆ ಓಡಾಡಿದರೆ ಅಂತಹವರಿಗೆ ದಂಡವನ್ನು ಸಹ ಹಾಕುತ್ತಿದ್ದಾರೆ. ಮುಂಜಾನೆಯೇ ಅಖಾಡಕ್ಕೆ ಇಳಿಯುವ ಈ ಟೀಮ್, 10 ಗಂಟೆಗೆ ಗ್ರಾಮವನ್ನು ಸಂಪೂರ್ಣ ಲಾಕ್ ಮಾಡಿಸುತ್ತಾರೆ.
ಇದನ್ನು ಓದಿ: ಕಳೆದ ವರ್ಷ ಸಹಾಯಕ್ಕೆ ಪ್ರಧಾನಿ ಮೋದಿಗೆ ಇಯು ನಾಯಕರ ಕೃತಜ್ಞತೆ; ಪ್ರಸ್ತುತ ಭಾರತಕ್ಕೆ ನೆರವಿನ ಪ್ರತಿಜ್ಞೆ
ಇನ್ನೂ ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಿಂದ ಬಂದಿರುವಂತಹ ಸುಮಾರು 150 ಜನರನ್ನು ಪತ್ತೆ ಮಾಡಿ, ಹೋಮ್ ಐಸೋಲೇಷನ್ ಮಾಡಿದ್ದಾರೆ. ನಿತ್ಯ ಗ್ರಾಮಕ್ಕೆ ಅಪರಿಚಿತರು ಬಂದರೆ ಈ ಟಾಸ್ಕ್ ಪೋಸ್ಟ್ ಸಮಿತಿ ಸದಸ್ಯರು ವಿಚಾರಣೆ ಮಾಡ್ತಾಯಿದ್ದಾರೆ. ಅಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ತೆರಳಿ ಕೊರೋನಾ ಕುರಿತು ಜಾಗೃತಿ ಮೂಡಿಸುತ್ತಾರೆ. ಆರೋಗ್ಯದಲ್ಲಿ ಏನಾದರೂ ಏರುಪೇರು ಆದ್ರೆ, ಅಶಾಕಾರ್ಯಕರ್ತೆಯರು ಅವರನ್ನು ಆಸ್ಪತ್ರೆಗೆ ರವಾನಿಸುವ ಕೆಲಸ ಮಾಡ್ತಾಯಿದ್ದಾರೆ. ಕೊರೋನಾ ನಿಯಂತ್ರಣ ಮಾಡುವಲ್ಲಿ ನಮ್ಮ ಗ್ರಾಮ ಪಂಚಾಯತಿ ಮಾದರಿ ಕೆಲಸ ಮಾಡುತ್ತಿದ್ದಾರೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ