ಗದಗ: ಹಿರಿಯ ಜೀವ ತಮ್ಮವರನ್ನು ಅಗಲಿ, ದಿಕ್ಕು ದೆಸೆ ಇಲ್ಲದ ಸ್ಥಳವನ್ನು ತಲುಪಿದ್ದಳು. ಏನಾದರು ಕೇಳಬೇಕು ಅಂದ್ರೆ, ಭಾಷೆ ಬರೋದಿಲ್ಲ. ನಾ ಎಲ್ಲಿದ್ದೇನೆ ಎನ್ನುವ ಅರಿವು ಇಲ್ಲದೆ ಕಣ್ಣೀರು ಹಾಕುತ್ತಿದ್ದಳು ಆ ವೃದ್ಧೆ. ಮರುಭೂಮಿಯಲ್ಲಿ ಓಯಾಸಿಸ್ ಸಿಕ್ಕ ಹಾಗೇ ಆ ವೀರ ಯೋಧನ ಕಣ್ಣಿಗೆ ಆ ಹಿರಿಯ ಅಜ್ಜಿ ಕಂಡಿದ್ದಾಳೆ. ಅವಳ ಬಟ್ಟೆಯನ್ನು ನೋಡಿ ಈಕೆ ಕರುನಾಡಿನವಳು ಅಂತಾ ಹೋಗಿ ಮಾತನಾಡಿಸಿದರೆ, ಬರೀ ಕಣ್ಣೀರಿನ ಉತ್ತರ. ಕೊನೆಗೆ ಆ ವೀರ ಯೋಧ ಆ ಅಜ್ಜಿಯನ್ನು ಕರುಳ ಬಳ್ಳಿಗೆ ಸೇರಿಸಿದ್ದಾನೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕಂದಪೂರ ಗ್ರಾಮದ ಮುದಕಯ್ಯ ಹಿರೇಮಠ ಎನ್ನುವ ಯೋಧ ರಜೆಗಾಗಿ ತಮ್ಮೂರಿಗೆ ಬರುತ್ತಿದ್ದ. ಆದರೆ ದೆಹಲಿ ರೈಲು ನಿಲ್ದಾಣದಲ್ಲಿ ಇಳಕಲ್ ಸೀರೆ, ಕುಬ್ಬಸ ತೊಟ್ಟು ಕಣ್ಣೀರು ಹಾಕುತ್ತಾ ಕುಳಿತ್ತಿರುವ ಅಜ್ಜಿಯನ್ನು ನೋಡುತ್ತಾರೆ. ಅವಳು ಉತ್ತರ ಕರ್ನಾಟಕದ ಅಜ್ಜಿ ಇರಬಹುದು ಅಂತಾ ಹೋಗಿ ಮಾತನಾಡಿಸಿದರೆ. ಅಜ್ಜಿ ಬರೇ ಕಣ್ಣೀರು ಹಾಕುತ್ತಿದ್ದಳು. ಕನ್ನಡ ಭಾಷೆಯನ್ನು ಮಾತನಾಡುವವರನ್ನು ಕಂಡ ಮೇಲೆ ಅಜ್ಜಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಅಜ್ಜಿಗೆ ಉಪಹಾರ ನೀಡಿ ಸಮಾಧಾನದಿಂದ ಕೇಳಿದಾಗ, ಅಜ್ಜಿ ನಾನು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ದಾಸನಾಳ ಗ್ರಾಮದ ನಿವಾಸಿ, ಶಿವಮ್ಮ ಪಾಟೀಲ್ ಅಂತಾ ಹೇಳುತ್ತಾಳೆ. ಯೋಧ ಮುದಕಯ್ಯ ಹಿರೇಮಠ ಅವರ ಸ್ನೇಹಿತರ ಸಹಾಯದಿಂದ ಅಜ್ಜಿ ಮನೆಯ ವಿಳಾಸ ಪಡೆದು ಕಾಲ್ ಮಾಡಿ ಮಾಹಿತಿ ನೀಡುತ್ತಾನೆ. ತನ್ನೊಂದಿಗೆ ರೈಲಿನ ಮೂಲಕ ದೆಹಲಿಯಿಂದ ಬಾಗಲಕೋಟೆ ಜಿಲ್ಲೆಯ ರೈಲು ನಿಲ್ದಾಣಕ್ಕೆ ಕರೆದುಕೊಂಡು ಬಂದು, ಅವರ ಬಂಧುಗಳ ಹತ್ತಿರ ಅವಳನ್ನು ಒಪ್ಪಿಸಿ, ನಂತರ ಗದಗ ಜಿಲ್ಲೆಯ ಕಂದಪೂರ ಗ್ರಾಮಕ್ಕೆ ಬಂದಿದ್ದಾನೆ. ಪಾಪ ಭಾಷೆ ಬಾರದೆ ದಿಕ್ಕು ಕಾಣದ ಅಜ್ಕಿಯನ್ಮು ಅವರ ಸಂಬಂಧಿಕರಿಗೆ ಒಪ್ಪಿಸಿದ್ದು ಖುಷಿಯಾಗಿದೆ ಅಂತಾರೆ ಯೋಧರು.
ಇದನ್ನು ಓದಿ: ಇದೊಂದು ರಾಷ್ಟ್ರೀಯ ವಿಪತ್ತು ಅಂತ ಘೋಷಣೆ ಮಾಡಿ; ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಸಲಹೆ
ಇನ್ನು, 73 ವರ್ಷದ ಶಿವಮ್ಮ ಪಾಟೀಲ್ ತನ್ನ ಮೊಮ್ಮಗನೊಂದಿಗೆ ಸುಕ್ಷೇತ್ರವಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸಿದರು. ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮುಂಚೆಯೇ ಶಿವಮ್ಮ ಪಾಟೀಲ್ ತಪ್ಪಿಸಿಕೊಂಡಿದ್ದಾಳೆ. ಒಂದು ದಿನ ತಿರುಪತಿಯಲ್ಲಿ ತಮ್ಮವರನ್ನು ಹುಡಕಿದ್ದಾಳೆ. ಯಾರು ಸಿಗದಿದ್ದಾಗ ತಿರುಪತಿ ರೈಲು ನಿಲ್ದಾಣದಿಂದ ಕರ್ನಾಟಕದ ಟ್ರೇನ್ ಹತ್ತುವ ಬದಲಾಗಿ ದೆಹಲಿ ಟ್ರೇನ್ ಏರಿ ದೆಹಲಿ ತಲುಪ್ಪಿದ್ದಾಳೆ. ದೆಹಲಿಗೆ ಹೋದ ನಂತರ ಭಾಷೆ ಬಾರದೆ ದಿಕ್ಕು ಕಾಣದೆ ಬರಿ ಕಣ್ಣೀರು ಹಾಕುತ್ತಾ, ಎರಡು ದಿನ ಕಳೆದಿದ್ದಾಳೆ. ಅವಳ ಅದೃಷ್ಟ ಎನ್ನುವಂತೆ ರಜೆಗೆ ಬರುತ್ತಿದ್ದ ಮಾನವೀಯತೆ ಇರುವ ಯೋಧ ಮುದಕಯ್ಯ ಹಿರೇಮಠ, ಪಂಜಾಬ್ ನಿಂದ ರಜೆಗೆ ತಮ್ಮೂರಿಗೆ ಬರುತ್ತಿದ್ದ ಅವರ ಕಣ್ಣೀಗೆ ಕಂಡು ಈವಾಗ ತಮ್ಮ ಕರುಳು ಬಳ್ಳಿಯನ್ನು ಸೇರಿದ್ದಾಳೆ. ಅವರ ಸಂಬಧಿಕರ ಹತ್ತಿರ ಸೇರಿಸಿದ ಯೋಧನ ಕಾರ್ಯಕ್ಕೆ ಅಜ್ಜಿ ಧನ್ಯವಾದಗಳನ್ನು ಹೇಳಿದ್ದಾಳೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ