ಗದಗ: ರೈತ (Farmer) ದೇಶದ ಬೆನ್ನೆಲುಬು ಅಂತಾರೆ. ಆದರೆ ಪ್ರತಿ ಹಂತದಲ್ಲೂ ರೈತರು ಶೋಷಣೆಗೆ ಒಳಗಾಗ್ತಾನೆ ಇದ್ದಾರೆ. ಅದರಲ್ಲೂ ಹೂ ಬೆಳೆದ ರೈತರ (Flower Farmers) ಜೀವನ ಹೂವಿನಂತೆ ಅರಳುವ ಬದಲು ವ್ಯಾಪಾರಸ್ಥರು, ದಲ್ಲಾಳಿಗಳು, ಪ್ರಕೃತಿ ವಿಕೋಪಕ್ಕೆ ಸಿಲುಕಿ ಜೀವನ ಬಾಡಿದಂತಾಗಿದೆ. ತೂಕಕ್ಕಿಂತಲು ಹೆಚ್ಚು ಹೂ ನೀಡಬೇಕು ಅಂತ ವ್ಯಾಪಾರಸ್ಥರು. ತುಟ್ಟಿ ದಿನಮಾನ, ಸೂಕ್ತ ಬೆಲೆ ಸಿಗ್ತಿಲ್ಲದ ಸಂದರ್ಭದಲ್ಲಿ ನಾವ್ಯಾಕೆ ಹೆಚ್ಚಿಗೆ ಕೊಡಬೇಕು ಅಂತ ರೈತರು. ರೈತರು ಹಾಗೂ ವ್ಯಾಪಾರಸ್ಥರ ಜಟಾಪಟಿ ಮುದ್ರಣ ಕಾಶಿ ಗದಗದಲ್ಲಿ ಆರಂಭವಾಗಿದೆ.
ಹೌದು ಗದಗ ಎಪಿಎಂಸಿ ಫ್ಲವರ್ ಮಾರುಕಟ್ಟೆಯಲ್ಲಿ ಹೂ ಬೆಳೆದ ರೈತರು ಹಾಗೂ ವ್ಯಾಪಾರಸ್ಥರ ನಡುವೆ ಬುಧವಾರ ಕೆಲಕಾಲ ಜಟಾಪಟಿ ನಡೆಯಿತು. ಇದರಿಂದ ರೈತರ ಹೂ ಮಾರಾಟವಾಗದೆ ಹಾಗೆ ಉಳಿದವು. ಕಾರಣ, 10 ಕೆಜಿ ಹೂವಿಗೆ 2 ಕೆಜಿ ಎಕ್ಸ್ಟ್ರಾ ಹೂ ಕೊಡಬೇಕು. 1 ಕ್ವಿಂಟಲ್‌ಗೆ 20 ಕೆಜಿ ಹೂ ಹೆಚ್ಚುವರಿಯಾಗಿ ಕೊಡಬೇಕು ಎಂಬುದು ವ್ಯಾಪಾರಸ್ಥರ ಒತ್ತಾಯ. ಕಡಿಮೆ ಬೆಲೆಗೆ ಖರೀದಿಸಿ, ಮತ್ತೆ 10 ಕೆಜಿ ಹೂವಿಗೆ 2 ಕೆಜಿ ಹೆಚ್ಚುವರಿ ಹೂವು, ಒಂದು ಕ್ವಿಂಟಲ್ ಗೆ 20 ಕೆಜಿ ಹೆಚ್ಚುವರಿ ಕೊಡಬೇಕು ಎಂಬುದು ಯಾವ ನ್ಯಾಯ. ರೈತರಿಗೆ ಸೂಕ್ತ ಬೆಲೆ ಇಲ್ಲ, ತುಟ್ಟಿ ದಿನಮಾನ, ಮತ್ತೊಂದೆಡೆ ದಲ್ಲಾಳಿಗಳು, ಗ್ರಾಹಕರು, ವ್ಯಾಪಾರಸ್ಥರ ಕಮಿಷನ್. ಈ ಎಲ್ಲದರ ನಡುವೆ ಪ್ರಕೃತಿ ವಿಕೋಪ ಬೇರೆ. ಉತ್ತಿ, ಬಿತ್ತಿ, ಬೆಳೆದು, ಸೂಕ್ತ ಬೆಲೆ ಸಿಗದೆ ಸಾಲದ ಸುಳಿಗೆ ಸಿಕ್ಕ ಸಂದರ್ಭದಲ್ಲಿ ರೈತರು ಮತ್ತಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಹೀಗೆ ಆದ್ರೆ ರೈತ ಬದುಕುವುದಾದ್ರೂ ಹೇಗೆ ಎಂಬ ಕಳವಳ ವ್ಯಕ್ತಪಡಿಸುತ್ತಿದ್ದಾರೆ ನೊಂದ ರೈತ ಶರಣಪ್ಪ ಅವರು.
ಗದಗ ಎಪಿಎಂಸಿ ಫ್ಲವರ್ ಮಾರುಕಟ್ಟೆಗೆ ಲಕ್ಕುಂಡಿ, ಸಂಭಾಪೂರ, ಕದಾಂಪೂರ, ಜಂತ್ಲಿ, ಶಿರೂರ, ಅಡವಿ ಸೋಮಾಪೂಲರ ಸೇರಿದಂತೆ ಹತ್ತಾರು ಹಳ್ಳಿಯ ಹೂ ಬೆಳೆದ ರೈತರು ಇಲ್ಲಿಗೆ ಬರ್ತಾರೆ. ಮೊದಲು ಕೈ ತಕ್ಕಡಿಯಿದ್ದ ಸಂದರ್ಭದಲ್ಲಿ ಮೋಸದಿಂದ ರೈತರಿಗೆ ತುಂಬಾನೆ ನಷ್ಟವಾಗುತ್ತಿತ್ತು. ಅದನ್ನು ತಪ್ಪಿಸಲು ಕಂಪ್ಯೂಟರ್ ಮಷಿನ್ ಜಾರಿಗೊಳಿಸಲಾಯಿತು. ಈಗ ತೂಕದಲ್ಲಿ ಮೋಸ ಮಾಡಲಾಗದು. ಆದ್ರೆ 10 ಕೆಜಿಗೆ ಹೂವಿಗೆ 2 ಕೆಜಿ ಎಕ್ಸ್ಟ್ರಾ ಕೊಡಬೇಕು ಎಂಬ ಹೊಸ ಖ್ಯಾತಿ ವ್ಯಾಪಾರಸ್ಥರದ್ದಾಗಿದೆ. ಇದು ಹಸಿ ವಸ್ತು ಆದ್ದರಿಂದ ಖರೀದಿ ಮಾಡಿ, ತೂಕಕ್ಕೆ ತೂಕ ಕೊಟ್ರೆ ನಮಗೆ ನಷ್ಟವಾಗುತ್ತೆ. ಮಾರ್ಕೆಟ್‌ನಲ್ಲಿ ಅಂದು ಹೂ ಕಡಿಮೆ ಮಾರಾಟವಾದ್ರೆ ವ್ಯಾಪಾರಸ್ಥರು ನಷ್ಟ ಅನುಭವಿಸಬೇಕಾಗುತ್ತೆ. ಹಾಗಾಗಿ ತೂಕಕ್ಕಿಂತ ಹೆಚ್ಚು ಹೂ ಬೇಕು ಎಂಬುದು ವ್ಯಾಪಾರಸ್ಥರ ಒತ್ತಾಯವಾಗಿದೆ.
ರೈತರು ಒಂದಲ್ಲಾ ಒಂದು ಸಂಕಷ್ಟಗಳನ್ನು ಎದುರಿಸುತ್ತಾನೆ ಬಂದಿದ್ದಾರೆ. ದಲ್ಲಾಳಿಗಳು, ವ್ಯಾಪಾರಸ್ಥರ, ಗ್ರಾಹಕರ ಕೈಗೆ ಸಿಕ್ಕು ಸದಾ ಶೋಷಣೆಗೆ ಒಳಪಡ್ತಿರುವುದು ಇಂದು ನಿನ್ನೆಯದಲ್ಲಾ. ರೈತರು ಹಾಗೂ ವ್ಯಾಪಾರಸ್ಥರ ನಡುವೆ ಹೂ ಮಾರಾಟವಾಗದೇ ಹಾಗೆ ಕೊಳೆತಿವೆ. ಎಪಿಎಂಸಿ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ರೈತರ ನೆರವಿಗೆ ದಾವಿಸುತ್ತಾರಾ? ಇನ್ನು ಮುಂದಾದರು ರೈತರ ಶೋಷಣೆ ತಪ್ಪುತ್ತಾ? ರೈತರ ಬೆಳೆಗೆ ಸೂಕ್ತ ಬೆಲೆ ಸಿಗುತ್ತಾ? ಕಾದು ನೋಡಬೇಕಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ