• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಗದಗ ಜಿಲ್ಲೆಯಲ್ಲಿ ಗೋವಿನ ಜೋಳದ ರೈತರ ಗೋಳಾಟ; ಸೂಕ್ತ ಮಾರುಕಟ್ಟೆ ಇಲ್ಲದೇ ರೈತಾಪಿ ಜನರ ಪರದಾಟ

ಗದಗ ಜಿಲ್ಲೆಯಲ್ಲಿ ಗೋವಿನ ಜೋಳದ ರೈತರ ಗೋಳಾಟ; ಸೂಕ್ತ ಮಾರುಕಟ್ಟೆ ಇಲ್ಲದೇ ರೈತಾಪಿ ಜನರ ಪರದಾಟ

ಗೋವಿನ ಬಿಳಿ ಜೋಳ

ಗೋವಿನ ಬಿಳಿ ಜೋಳ

ರೈತರಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯಬೇಕು ಎನ್ನುವುದು ಬಿಳಿ ಗೋವಿನ ಜೋಳ ಬೆಳೆಗಾರರ ಆಗ್ರಹವಾಗಿದೆ. ಅನ್ನದಾತರು ಎಷ್ಟೇ ಕಷ್ಟ ಪಟ್ಟು ಬೆಳೆ ಬೆಳೆದರೂ ಅವರಿಗೆ ಮಾತ್ರ ಮಾರುಕಟ್ಟೆಯಲ್ಲಿ ಬೆಳೆದ ಬೆಳೆಗೆ ತಕ್ಕ ಶ್ರಮಕ್ಕೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

  • Share this:

ಗದಗ: ಯಾಕೋ ಗೊತ್ತಿಲ್ಲ ಬಯಲುಸೀಮೆ ನಾಡಿನ ರೈತರ ಹಣೆ ಬರಹವೇ ಸರಿ ಇಲ್ಲ. ಅತೀವೃಷ್ಟಿಯಿಂದ ಹಾನಿಯಾಗಿ ಅಳಿದುಳಿದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯು ಇಲ್ಲ. ಬೆಳೆದ ಬಿಳಿ ಗೋವಿನ ಜೋಳಕ್ಕೆ ಖರೀದಿಗಾರರು ಇಲ್ಲದೆ ಅನ್ನದಾತರು ಕಂಗಾಲಾಗಿದ್ದಾರೆ. ಕಳೆದ 25 ವರ್ಷಗಳಿಂದ ಪ್ರಮುಖ ಬೆಳೆಯಾಗಿ ಬಿಳಿ ಗೋವಿನ ಜೋಳ ಬೆಳೆಯುತ್ತಿದ್ದ, ರೈತರು ಗೋಳಾಡುತ್ತಿದ್ದಾರೆ. ಕೂಡಲೇ ಸರ್ಕಾರ ಗೋವಿನ ಜೋಳದ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿದ್ದಾರೆ ಈ ಭಾಗದ ರೈತರು.


ತಾನು ಬೆಳೆದ ಬೆಳೆ ತನ್ನ ಬದುಕು ಬಂಗಾರವಾಗಿಸುತ್ತದೆ ಎಂದು ನಂಬಿದ ಅನ್ನದಾತನಿಗೆ ಭಾರಿ ನಿರಾಸೆಯಾಗಿದೆ. ಬಿಳಿ ಗೋವಿನ ಜೋಳ ಬದುಕಿನಲ್ಲಿ ಬೆಳಕು ಚೆಲ್ಲುತ್ತೆ ಎಂಬ ವಿಶ್ವಾಸದಲ್ಲಿ ರೈತನಿಗೆ ಬಿಳಿ ಗೋವಿನ ಜೋಳ ಕೂಡ ಉತ್ತಮ ಧಾರಣೆ ನೀಡದ ಹಿನ್ನೆಲೆ ಬದುಕಿಗೆ ಕತ್ತಲೆ ಆವರಿಸಿದಂತಾಗಿದೆ. ಇದರಿಂದ ಉತ್ತಮ ಧಾರಣೆಯ ನಿರೀಕ್ಷೆಯಲ್ಲಿದ್ದ ರೈತರು ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದಾರೆ.


ಹೌದು... ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ಈಗಾಗಲೇ ಉತ್ತಮ ಧಾರಣೆ ಸಿಗಬಹುದೆಂದು ನಂಬಿ ಕುಳಿತ ರೈತರು ಆತಂಕಕ್ಕೀಡಾಗಿದ್ದಾರೆ. ಈ ಗ್ರಾಮದಲ್ಲಿ ಅತೀ ಹೆಚ್ಚಾಗಿ ಬಿಳಿ ಗೋವಿನ ಜೋಳ ಬೆಳೆಯುತ್ತಾರೆ. ಕಳೆದ ವರ್ಷ ಉತ್ತಮ ಮಳೆಯಾಗಿ ಸಮೃದ್ದಿ ಬೆಳೆಯು ಬಂದಿತ್ತು. ಜೊತೆಗೆ ಬೆಲೆಯು ಬಂದಿತ್ತು. ಆದರೆ ಈ ವರ್ಷ ಅತಿವೃಷ್ಟಿ ಯಿಂದಾಗಿ ಬೆಳೆಯು ಹಾನಿಯಾಗಿದೆ. ಜೊತೆಗೆ ಇಳುವರಿಯು ಕಡಿಮೆ ಬಂದಿದೆ. ಸಾಲ  ಮಾಡಿ ಬಿಳಿ ಗೋವಿನ ಜೋಳ ಬೆಳೆದ ರೈತರು, ಖರೀದಿದಾರರು ಇಲ್ಲದಿರುವ ಕಾರಣಕ್ಕೆ ಗೋಳಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಗೋವಿನ ಜೋಳದ ಬೆಳೆಗೆ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯುವಂತೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿಗಳಿಗೆ  ಮನವಿ ಮಾಡಿಕೊಂಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಅನ್ನದಾತನ ಅಳಲು. ಸರ್ಕಾರ ನಮಗೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎನ್ನುವುದು ರೈತರ ಆಗ್ರಹವಾಗಿದೆ.


ಇದನ್ನು ಓದಿ: ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಅನುದಾನದ ಕೊರತೆ: 2 ವರ್ಷ ಕಳೆದರು ಪೂರ್ಣಗೊಂಡಿಲ್ಲ ಕಾಮಗಾರಿ


ಈಗಾಗಲೇ ಬಿಳಿ ಗೋವಿನಜೋಳ ಕೈಹಿಡಿಯಬಹುದೆಂಬ ನಂಬಿಕೆಯಿಂದ ಬೆಳೆದು ರಾಶಿ ಮಾಡಿ ನಮ್ಮ ಹೊಲಗಳಲ್ಲಿಯೇ ಹಾಕಿಕೊಂಡು ಕುಳಿತಿದ್ದೇವೆ. ಖರೀದಿದಾರರಿಲ್ಲದೇ ಹಾಗು ಉತ್ತಮ ಬೆಲೆ ಇಲ್ಲದ ಕಾರಣ ಬಿಳಿ ಗೋವಿನ ಜೋಳ ಬೆಳೆದು ಕಂಗಾಲಾಗಿದ್ದೇವೆ. ಸರ್ಕಾರವೇ ಖರೀದಿ ಕೇಂದ್ರ ತೆರೆದು ಬೆಂಬಲ ಬೆಲೆಗೆ ಗೋವಿನ ಜೋಳ ಖರೀದಿಸಬೇಕು.
ಗದಗ ಜಿಲ್ಲೆಯಲ್ಲಿ 84 ಸಾವಿರ ಹೆಕ್ಟೇರ್​ನಷ್ಟು ಗೋವಿನ ಜೋಳದ ಬೆಳೆ ಬೆಳೆದಿದ್ದಾರೆ. ಅದರಲ್ಲಿ 20 ಸಾವಿರ ಹೆಕ್ಟೇರ್ ನಷ್ಟು ಬಿಳಿ ಗೋವಿನ ಜೋಳ ಬೆಳೆಯಲಾಗಿದೆ. ಗದಗ, ಶಿರಹಟ್ಟಿ, ಮುಂಡರಗಿ, ನರಗುಂದ ಸೇರಿದಂತೆ ಜಿಲ್ಲೆಯಲ್ಲಿ ವಿವಿಧೆಡೆ ರೈತರು ಗೋವಿನ ಜೋಳ ಬೆಳೆದಿದ್ದಾರೆ. ಈ ವರ್ಷ ಸೂಕ್ತ ಬೆಳೆ ಸಿಗದೆ ಅನ್ನದಾತರ ಸಮೂಹ ಗೋಳಾಡುತ್ತಿದೆ. ಎಕರೆ ಗೋವಿನ ಜೋಳ ಬೆಳೆಯಲು ಸುಮಾರು 20 ಸಾವಿರ ಖರ್ಚು ಮಾಡಿದ್ದಾರೆ. ಖರ್ಚು ಮಾಡಿದ ಹಣ ಸಹ ಕೈಸೇರುವ ಲಕ್ಷಣ ಕಾಣುತ್ತಿಲ್ಲ ಎಂದು ರೈತರು ಪರದಾಡುತ್ತಿದ್ದಾರೆ. ಗೋವಿನ ಜೋಳವನ್ನು ರಾಶಿ ಮಾಡಿದ ಜಾಗದಿಂದ ಸಹ ತೆಗೆದಿಲ್ಲ. ಇದರಿಂದ ಜಮೀನಿನಲ್ಲಿಯೇ ಬೆಳೆ ಹಾನಿಯಾಗುತ್ತಿವೆ.


ರೈತರಿಗೆ ಸರ್ಕಾರ ಬೆಂಬಲ ಬೆಲೆ ನೀಡಿ ಖರೀದಿ ಕೇಂದ್ರ ತೆರೆಯಬೇಕು ಎನ್ನುವುದು ಬಿಳಿ ಗೋವಿನ ಜೋಳ ಬೆಳೆಗಾರರ ಆಗ್ರಹವಾಗಿದೆ. ಅನ್ನದಾತರು ಎಷ್ಟೇ ಕಷ್ಟ ಪಟ್ಟು ಬೆಳೆ ಬೆಳೆದರೂ ಅವರಿಗೆ ಮಾತ್ರ ಮಾರುಕಟ್ಟೆಯಲ್ಲಿ ಬೆಳೆದ ಬೆಳೆಗೆ ತಕ್ಕ ಶ್ರಮಕ್ಕೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

  • ವರದಿ: ಸಂತೋಷ ಕೊಣ್ಣೂರ

Published by:HR Ramesh
First published: