ಗದಗ: ಮಹಾಮಾರಿ ಕೊರೋನಾ ವೈರಸ್ ಮುದ್ರಣ ಕಾಶಿ ಗದಗ ಜಿಲ್ಲೆಯಲ್ಲಿ ಪರಾಕ್ರಮ ಮುಂದುವರಸಿದೆ. ಮೊದಲು ಕೇವಲ 60 ಪ್ರಕರಣಗಳು ಮಾತ್ರ ಜಿಲ್ಲೆಯಲ್ಲಿ ಕಂಡು ಬಂದಿದ್ದವು. ಆದರೆ ಕಳೆದ 15 ದಿನದಲ್ಲಿ ಪ್ರತಿನಿತ್ಯ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ 176 ಕೊರೋನಾ ಸೋಂಕಿತರಿದ್ದಾರೆ.
ಗದಗ ಜಿಲ್ಲೆಯ ಗದಗ ತಾಲೂಕು, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ, ರೋಣ ತಾಲೂಕಿನ ಹಳ್ಳಿ ಹಳ್ಳಿಯಲ್ಲಿಯೂ ಕೊರೋನಾ ಸೋಂಕಿತರು ಕಂಡು ಬರುತ್ತಿದ್ದಾರೆ. ಅದರಲ್ಲೂ ಮುಂಡರಗಿ ಪಟ್ಟಣದಲ್ಲಿ ಕೇವಲ ಒಂದು ವಾರದಲ್ಲಿ 42 ಜನರಿಗೆ ಮಾರಕ ಸೋಂಕು ತಗುಲಿದೆ. ಗದಗ ನಗರದ ಜಿಮ್ಸ್ ಕೊವಿಡ್- 19 ಆಸ್ಪತ್ರೆ ಭರ್ತಿಯಾಗಿದ್ದು, ಕೊರೋನಾ ರೋಗಿಗಳನ್ನು ಗದಗ ಮಲ್ಲಸಮುದ್ರದ ಮೊರಾರ್ಜಿ ವಸತಿ ಶಾಲೆ ಹಾಗೂ ಮುಂಡರಗಿ ತಾಲೂಕಿನ ಹೀರೆವಡ್ಡಟ್ಟಿಯ ಮೊರಾರ್ಜಿ ಶಾಲೆಯಲ್ಲಿ 30 ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೊರೊನಾ ರೋಗಿಗಳಿಗೆ ತೀವ್ರವಾದ ಬೇರೆ ಬೇರೆ ಕಾಯಿಲೆಗಳಿದ್ದರೆ ಅವರಿಗೆ ಮಾತ್ರ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ಹೇಳಿದ್ದಾರೆ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ನಿತ್ಯ ಹೆಚ್ಚಳವಾಗುತ್ತದ್ದಂತೆ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಅವರು ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ಮೂರು ದಿನಗಳ ಕಾಲ ಕೊರೋನಾ ಕುರಿತು ಜನ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಮದುವೆ ಕಾರ್ಯದಲ್ಲಿ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೊರೋನಾ ನಿಯಂತ್ರಣ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದು, ಕೋವಿಡ್- 19 ನಿಯಮ ಉಲ್ಲಂಘನೆ ಮಾಡಿದರೆ ಸೂಕ್ತ ಕ್ರಮ ಕೈಗೊಳಿ ಅಂತಾ ಸೂಚನೆ ಸಹ ನೀಡಿದ್ದಾರೆ.
ಇದನ್ನು ಓದಿ: ಎರಡನೆ ಬಾರಿ ಆಸ್ಪತ್ರೆಯಿಂದ ಪರಾರಿಯಾದ ಕೊರೋನಾ ಸೋಂಕಿತನನ್ನು ಪೊಲೀಸರಿಗೆ ಹಿಡಿದುಕೊಟ್ಟ ಗ್ರಾಮಸ್ಥರು
ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಜಿಮ್ಸ್ ಆಸ್ಪತ್ರೆ ಭರ್ತಿಯಾಗಿದ್ದರಿಂದ ಅನಿವಾರ್ಯವಾಗಿ ಮೊರಾರ್ಜಿ ವಸತಿ ಶಾಲೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ವೆಂಟಿಲೇಟರ್ ಸೌಕರ್ಯ ಇರುವ ಹೆರಿಗೆ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳನ್ನಾಗಿ ಪರಿವರ್ತನೆ ಮಾಡುತ್ತೇವೆ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಅವರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ