news18-kannada Updated:June 6, 2020, 10:10 AM IST
ಉಪ್ಪಿನ ರಾಶಿ
ಕಾರವಾರ(ಜೂ.06): ಉಪ್ಪಿಗಿಂತ ರುಚಿ ಬೇರೆಯಿಲ್ಲ ತಾಯಿಗಿಂತ ಬೇರೆ ಬಂಧುವಿಲ್ಲ. ಎಂಬ ಗಾದೆ ಮಾತಿನಂತೆ ಉತ್ತರ ಕನ್ನಡ ಜಿಲ್ಲೆಯ ಸಾಣಿಕಟ್ಟಾದಲ್ಲಿ ತಯಾರಾಗುವ ಉಪ್ಪಿಗೆ ರಾಜ್ಯದ್ಯಾಂತ ಭಾರಿ ಬೇಡಿಕೆ ಇದೆ. ಆದರೆ, ಇದೀಗ ಕೊರೋನಾ ಎಫೆಕ್ಟ್ ನಿಂದಾಗಿ ಉಪ್ಪಿನ ಉದ್ಯಮಕ್ಕೂ ಪೆಟ್ಟು ಬಿದ್ದಿದೆ. ಭಾರೀ ಬೇಡಿಕೆ ಇದ್ದ ಉತ್ತರ ಕನ್ನಡ ಜಿಲ್ಲೆಯ ಸಾಣಿಕಟ್ಟಾ ಉಪ್ಪು ಇಂದು ರಫ್ತಾಗದೇ ರಾಶಿ ರಾಶಿ ಶೇಖರಣೆಗೊಂಡು ಕರಗಿ ನೀರಾಗುತ್ತಿದೆ.
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಸಾಣಿಕಟ್ಟಾದಲ್ಲಿ ಪ್ರಾಕೃತಿಕವಾಗಿ ಬೆಳೆಯುವ ಉಪ್ಪು ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆ ಹೊರ ರಾಜ್ಯಗಳಲ್ಲೂ ಅತಿ ಹೆಚ್ಚು ಬೇಡಿಕೆ ಹೊಂದಿದೆ. ಇಲ್ಲಿನ ಸುತ್ತಮುತ್ತಲಿನ 50 ಎಕರೆ ಪ್ರದೇಶದಲ್ಲಿ ಉತ್ಪಾದಿಸಲಾಗುತ್ತಿದ್ದ ಉಪ್ಪು, ಇದೀಗ 1952ರಲ್ಲಿ ಆರಂಭಗೊಂಡ ನಾಗರಬೈಲ್ ಉಪ್ಪು ತಯಾರಕರ ಸಹಕಾರಿ ಸಂಘದ ಮೂಲಕ ಸುಮಾರು 450 ಎಕರೆ ಪ್ರದೇಶದಲ್ಲಿ ಉಪ್ಪು ಬೆಳೆಯಲಾಗುತ್ತಿದೆ.
ಸಾಮಾನ್ಯವಾಗಿ ಸೆಪ್ಟೆಂಬರ್ - ಅಕ್ಟೊಬರ್ ತಿಂಗಳಿನಲ್ಲಿ ಆರಂಭವಾಗುತ್ತಿದ್ದ ಉಪ್ಪು ತಯಾರಿಕೆ ಕಳೆದ ಬಾರಿ ಸುರಿದ ಮಹಾಮಳೆಯಿಂದಾಗಿ ಉತ್ಪಾದನೆ ತಡವಾಗಿ ಶುರುವಾಗಿತ್ತು. ಇದರ ಬೆನ್ನಲ್ಲೆ ರಾಜ್ಯಕ್ಕೂ ಕೊರೋನಾ ವಕ್ಕರಿಸಿದ ಪರಿಣಾಮ ಕೆಲ ದಿನಗಳ ಕಾಲ ಉಪ್ಪು ಉತ್ಪಾದನೆಯೇ ಬಂದಾಗುವಂತಾಗಿತ್ತು. ಆದರೆ, ಜೀವನಾವಶ್ಯಕ ವಸ್ತುಗಳಲ್ಲಿ ಬರುವ ಕಾರಣ ಉಪ್ಪು ಉತ್ಪಾದನೆ ಮತ್ತೆ ಮರಳಿ ಆರಂಭಿಸಲಾಗಿತ್ತು. ಆದರೆ, ಅನುಮತಿ ಸಿಕ್ಕ ಬಳಿಕ ನಿರಂತರವಾಗಿ ಉಪ್ಪಿನ ಉತ್ಪಾದನೆಯಾಗುತ್ತಿದೆ. ಸುಮಾರು 7 ಮೆಟ್ರಿಕ್ ಟನ್ ಉತ್ಪಾದನೆಯಾಗಿದೆ. ಆದರೆ, ಉತ್ಪಾದನೆಯಾದ ಉಪ್ಪು ರಫ್ತಾಗದೇ ಉಪ್ಪಿನ ರಾಶಿಯೇ ಶೇಖರಣೆಯಾಗಿದ್ದು ಕೊರೋನಾ ಕರಿನೆರಳು ಉಪ್ಪಿಗೂ ವಕ್ಕರಿಸಿದೆ.
ಇದನ್ನೂ ಓದಿ :
ಹುಬ್ಬಳ್ಳಿಯ ಹಿರಿಮೆಗೆ ಮತ್ತೊಂದು ಗರಿ- ವಾಣಿಜ್ಯ ನಗರದಲ್ಲಿ ನಿರ್ಮಾಣವಾಗುತ್ತಿದೆ ವಿಶ್ವದ ಅತಿ ಉದ್ದನೆಯ ರೈಲ್ವೆ ಪ್ಲಾಟ್ಫಾರ್ಮ್
ಇಲ್ಲಿ ಉತ್ಪಾದನೆಯಾದ ಉಪ್ಪನ್ನು ಉತ್ತರಕನ್ನಡ, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗೋವಾ ಭಾಗಗಳಿಗೆ ರಪ್ತು ಮಾಡಲಾಗುತ್ತಿತ್ತು. ಆದರೆ. ಈ ಭಾರಿ ಕೆಲ ದಿನಗಳವರೆಗೆ ರಫ್ತಿಗೆ ಲಾಕ್ ಡೌನ್ ಅಡ್ಡಿಯಾಗಿತ್ತು. ನಿರಂತರವಾಗಿ ಉಪ್ಪು ಉತ್ಪಾದನೆಯಾದ ಪರಿಣಾಮ ಸಾಣಿಕಟ್ಟಾದ ಉಪ್ಪಿನ ಶೇಖರಣೆ ಮನೆಗಳು ತುಂಬಿ ಹೊರಗಡೆ ರಾಶಿ ಮಾಡಲಾಗುತ್ತಿದೆ. ಹೀಗೆ ತಯಾರಾದ ಉಪ್ಪು ಸಂಗ್ರಹಣೆ ದೊಡ್ಡ ತಲೆನೋವಾಗಿದೆ. ಭಾರೀ ಬೇಡಿಕೆ ಇದ್ದ ಸಾಣಿಕಟ್ಟ ಉಪ್ಪು ಈಗ ನೀರಲ್ಲಿ ಕರಗಿಹೋಗಿದೆ, ಲಾಕ್ ಡೌನ್ ತಂದಿಟ್ಟ ಸಮಸ್ಯೆಗೆ ಉಪ್ಪಿನ ಉದ್ಯಮ ಕೂಡಾ ತಲೆಕೊಟ್ಟಿದೆ.
First published:
June 6, 2020, 10:04 AM IST