ಕೊರೋನಾ ಸೋಂಕಿಗೆ ಹೆತ್ತವರು ಬಲಿ, ತಬ್ಬಲಿಯಾದ 4 ವರ್ಷದ ಹೆಣ್ಣು ಮಗು; ಬೈಕ್​ನಲ್ಲೇ ವೃದ್ಧನ ಶವ ಸಾಗಣೆ

ವೃದ್ಧನ ಸಂಬಂಧಿಕರು ಕೊಳ್ಳೇಗಾಲದ ಪಿಎಫ್ಐ ಕಾರ್ಯಕರ್ತರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ತಕ್ಷಣ ಆಲಹಳ್ಳಿ ಗ್ರಾಮಕ್ಕೆ ಧಾವಿಸಿದ 8 ಮಂದಿ ಪಿಎಫ್ಐ  ಕಾರ್ಯಕರ್ತರು ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದಾರೆ. ಆದರೆ ಗ್ರಾಮಸ್ಥರು ಅದಕ್ಕೂ ಸಹ ತಕರಾರು ತೆಗೆದರು ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ ಅವರ ಸ್ವಂತ ಜಮೀನಿನಲ್ಲೂ ಸಹ ಹೂಳಲು ಆಕ್ಷೇಪಿಸಿದ್ದಾರೆ.

ಬೈಕ್​ನಲ್ಲಿ ವೃದ್ಧನ ಶವ ಸಾಗಿಸುತ್ತಿರುವುದು.

ಬೈಕ್​ನಲ್ಲಿ ವೃದ್ಧನ ಶವ ಸಾಗಿಸುತ್ತಿರುವುದು.

  • Share this:
ಚಾಮರಾಜನಗರ (ಮೇ 10)ಕೊರೋನಾ ಸೋಂಕಿನ ಆರ್ಭಟಕ್ಕೆ ಎಷ್ಟೋ ಕುಟುಂಬಗಳು ಬೀದಿ ಪಾಲಾಗಿವೆ. ಎಷ್ಟೋ ಮಂದಿ ಅನಾಥರಾಗಿದ್ದಾರೆ. ಮಾನವೀಯ, ಅಮಾನವೀಯ ಘಟನೆಗಳಿಗೂ ಕೊರೋನಾ ಕಾರಣವಾಗುತ್ತಿದೆ. ತಂದೆ -ತಾಯಿ ಇಬ್ಬರನ್ನೂ ಕಳೆದುಕೊಂಡು ನಾಲ್ಕು ವರ್ಷದ ಹೆಣ್ಣುಮಗು ತಬ್ಬಲಿಯಾಗಿರುವ ಮನಕಲಕುವ ಘಟನೆ ಚಾಮರಾಜನಗರ ತಾಲೂಕು ಕೊತ್ತಲವಾಡಿ ಗ್ರಾಮದಲ್ಲಿ ನಡೆದಿದೆ. ಇನ್ನೊಂದೆಡೆ ವಯೋವೃದ್ದರೊಬ್ಬರು  ಸಹಜವಾಗಿ ಮೃತಪಟ್ಟರೂ ಕೊರೋನಾ ಸೋಂಕು ಇರಬಹುದೆಂದು ಭಾವಿಸಿದ ಗ್ರಾಮಸ್ಥರು ಅವರ ಶವಸಂಸ್ಕಾರಕ್ಕೆ ಹೆಗಲು ಕೊಡದೆ ಕೊನೆಗೆ ಬೈಕ್ ನಲ್ಲಿ ಶವ ಸಾಗಿಸಿದ ಹೃದಯವಿದ್ರಾವಕ ಸಂಗತಿಯು ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆೆ.

ಕೊತ್ತಲವಾಡಿ ಗ್ರಾಮದಲ್ಲಿ ತಂದೆ- ತಾಯಿ ಇಬ್ಬರೂ ಕೊರೋನಾ ಸೋಂಕಿಗೆ ಬಲಿಯಾಗಿ ನಾಲ್ಕು ವರ್ಷದ ಹೆಣ್ಣು ಮಗು ತಬ್ಬಲಿಯಾಗಿದೆ. ಗ್ರಾಮದ ಗುರುಪ್ರಸಾದ್  ಹಾಗೂ ರಶ್ಮಿ ಎಂಬ ದಂಪತಿಗೆ ಕೊರೋನಾ ಪಾಸಿಟಿವ್ ಆಗಿ ಗುರುಪ್ರಸಾದ್  ಕಳೆದ ನಾಲ್ಕು ದಿನಗಳ ಹಿಂದೆಷ್ಟೇ ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಹೋಂ ಐಸೋಲೇಷನ್ ನಲ್ಲಿದ್ದ ಅವರ  ಪತ್ನಿ ರಶ್ಮಿ ಅವರು ಸಹ ಉಸಿರಾಟ ಸಮಸ್ಯೆಯಾಗಿ  ಮನೆಯಲ್ಲೇ ಮೃತಪಟ್ಟಿದ್ದಾರೆ. ಈ ದಂಪತಿಯ ನಾಲ್ಕು ವರ್ಷದ ಹೆಣ್ಣು ಮಗು ಅನಾಥವಾಗಿದೆ. ಈ ಮಗುವಿನ  ಅಜ್ಜ-ಅಜ್ಜಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ಆದರೆ ಇದ್ಯಾವುದರ ಪರಿವೆ ಇಲ್ಲದ ಈ ತಬ್ಬಲಿ ಮಗು ತನ್ನಷ್ಟಕ್ಕೆ ತಾನು ಆಟವಾಡಿಕೊಂಡಿದ್ದು‌ ಮನಕಲಕುವ ದೃಶ್ಯಕ್ಕೆ ಸಾಕ್ಷಿಯಾಗಿದೆ.

ತಂದೆ-ತಾಯಿ ಕಳೆದುಕೊಂಡ ಮಗು.


ಇನ್ನೂ ಚಾಮರಾಜನಗರ ತಾಲೂಕಿನ ಅಮಚವಾಡಿ ಗ್ರಾಮದಲ್ಲಿ ಒಂದೇ ಮನೆಯಲ್ಲಿ ಮೂವರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಹೋಂ ಐಸೋಲೇಷನ್ ನಲ್ಲಿದ್ದ ಗ್ರಾಮದ ಮುದ್ದುಮಲ್ಲಪ್ಪ (69) ಎಂಬುವರು ತೀವ್ರ ಉಸಿರಾಟ ಸಮಸ್ಯೆಯಿಂದ ಮನೆಯಲ್ಲೇ ನಾಲ್ಕು ದಿನಗಳ ಹಿಂದಷ್ಟೇ ಸಾವನ್ನಪ್ಪಿದ್ದರು. ಇವರ ಪುತ್ರ ಪ್ರಕಾಶ್ (47)ನಿನ್ನೆ  ಮೈಸೂರಿನ  ಖಾಸಗಿ ಆಸ್ಪತ್ರೆ ಯಲ್ಲಿ ಮೃತಪಟ್ಡಿದ್ದಾರೆ. ಇಂದು ಬೆಳಿಗ್ಗೆ ಮುದ್ದು ಮಲ್ಲಪ್ಪ ಅವರ ಮತ್ತೊಬ್ಬ ಪುತ್ರ  ಬಾಬು(45) ಎಂಬುವರು  ಸಾವನ್ನಪ್ಪಿದ್ದಾರೆ.

ಬೈಕ್ ನಲ್ಲಿ ಶವ ಸಾಗಣೆ

ಕೊರೋನಾ ಸೋಂಕು ಇರಬಹುದು ಎಂಬ ಭಯದಿಂದಾಗಿ  ಗ್ರಾಮಸ್ಥರು  ವೃದ್ಧರೊಬ್ಬರ ಶವಸಂಸ್ಕಾರಕ್ಕೆ  ಬಾರದೆ  ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಯಾರೂ ಶವಸಂಸ್ಕಾರಕ್ಕೆ ಮುಂದಾಗದಿದ್ದಾಗ ಕೊನೆಗೆ ಪಿಎಫ್ಐ ಕಾರ್ಯಕರ್ತರು ಬೈಕ್ ನಲ್ಲಿ ಶವ ಸಾಗಿಸಿ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಮಾನವೀಯತೆ ಮೆರೆದಿದಿದ್ದಾರೆ.

ಇದನ್ನು ಓದಿ: HD Kumaraswamy: ಲಾಕ್​ಡೌನ್ ಹೆಸರಲ್ಲಿ ಜನರ ಮೇಲೆ ದರ್ಪ ತೋರುವುದನ್ನು ನಿಲ್ಲಿಸಿ, ಪ್ಯಾಕೇಜ್ ಘೋಷಿಸಿ; ಹೆಚ್​.ಡಿ. ಕುಮಾರಸ್ವಾಮಿ ಒತ್ತಾಯ

ಕೊಳ್ಳೇಗಾಲ ತಾಲೂಕು ಟಗರಪುರದಲ್ಲಿ ಈ  ಘಟನೆ ನಡೆದಿದೆ. ಗ್ರಾಮದ ಮಹದೇವ ಎಂಬ ವೃದ್ದರು  ವಯೋಸಹಜವಾಗಿ ಮೃತಪಟ್ಟಿದ್ದರು. ಆದರೆ ಅವರಿಗೆ ಕೊರೋನಾ ಸೋಂಕು ಇರಬಹುದು ಎಂದು ಭಾವಿಸಿದ ಗ್ರಾಮಸ್ಥರು ವೃದ್ಧನ ಅಂತ್ಯ ಸಂಸ್ಕಾರಕ್ಕೆ  ಹಿಂದೇಟು ಹಾಕಿದ್ದಾರೆ. ಕೊನೆಗೆ ವೃದ್ಧನ ಸಂಬಂಧಿಕರು ಕೊಳ್ಳೇಗಾಲದ ಪಿಎಫ್ಐ ಕಾರ್ಯಕರ್ತರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ. ತಕ್ಷಣ ಆಲಹಳ್ಳಿ ಗ್ರಾಮಕ್ಕೆ ಧಾವಿಸಿದ 8 ಮಂದಿ ಪಿಎಫ್ಐ  ಕಾರ್ಯಕರ್ತರು ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಮುಂದಾಗಿದ್ದಾರೆ. ಆದರೆ ಗ್ರಾಮಸ್ಥರು ಅದಕ್ಕೂ ಸಹ ತಕರಾರು ತೆಗೆದರು ಎಂಬ ಆರೋಪ ಕೇಳಿಬಂದಿದೆ. ಇದಲ್ಲದೆ ಅವರ ಸ್ವಂತ ಜಮೀನಿನಲ್ಲೂ ಸಹ ಹೂಳಲು ಆಕ್ಷೇಪಿಸಿದ್ದಾರೆ.

ವಿಷಯ ತಿಳಿದು ಕೊಳ್ಳೇಗಾಲ ಪೊಲೀಸರು ಮಧ್ಯಪ್ರವೇಶ ಮಾಡಿ ಗ್ರಾಮದ ಹೊರವಲಯದಲ್ಲಿರುವ ಗೋಮಾಳದಲ್ಲಿ ಹೂಳಲು ಸ್ಥಳ ಸೂಚಿಸಿದ್ದಾರೆ. ಕೊನೆಗೆ  ಪಿಎಫ್ಐ ಸಂಘಟನೆಯ ಎಂಟು ಮಂದಿ  ಕಾರ್ಯಕರ್ತರು ಬೈಕ್ ನಲ್ಲಿ ಹೆಣ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ವರದಿ: ಎಸ್.ಎಂ.ನಂದೀಶ್
Published by:HR Ramesh
First published: