HOME » NEWS » District » FOUR PEOPLE DEATH FROM POWER SHOCK WHO INSTALL PEDAL AT THE PROGRAM RHHSN CANK

Shocking News | ಅಪಾರ್ಟ್​ಮೆಂಟ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕುವ ವೇಳೆ ವಿದ್ಯುತ್ ಸ್ಪರ್ಶಿಸಿ ನಾಲ್ವರು ಸಾವು; ಆರು ಮಂದಿಗೆ ಗಾಯ!

ಸಣ್ಣ ನಿರ್ಲಕ್ಷ್ಯ ನಾಲ್ವರು ಅಮಾಯಕರ ಜೀವಕ್ಕೆ ಕುತ್ತು ತಂದಿದ್ದು, ದುರಂತವೇ ಸರಿ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕು. ಜೊತೆಗೆ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕಿದೆ.

news18-kannada
Updated:April 7, 2021, 8:43 PM IST
Shocking News | ಅಪಾರ್ಟ್​ಮೆಂಟ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕುವ ವೇಳೆ ವಿದ್ಯುತ್ ಸ್ಪರ್ಶಿಸಿ ನಾಲ್ವರು ಸಾವು; ಆರು ಮಂದಿಗೆ ಗಾಯ!
ಸಾಂದರ್ಭಿಕ ಚಿತ್ರ
  • Share this:
ಆನೇಕಲ್: ನೆಲದ ತುಂಬೆಲ್ಲಾ ಹಸಿರು ಕಾರ್ಪೆಟ್. ಹಸಿರು ಕಾರ್ಪೆಟ್ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಚಪ್ಪಲಿಗಳು. ಅರ್ಧಕ್ಕೆ ನಿಂತಿರುವ ಪೆಂಡಾಲ್ ಸಮೀಪವೇ ನೇತಾಡುತ್ತಿರುವ ವಿದ್ಯುತ್ ತಂತಿಗಳು ಒಂದು ಕಡೆ. ಮತ್ತೊಂದು ಕಡೆ ಸಂಭ್ರಮಿಸಬೇಕಿದ್ದ ಸ್ಥಳದಲ್ಲಿ ವಿದ್ಯುತ್ ಸ್ಪರ್ಶಕ್ಕೆ ಸಿಲುಕಿ ಧಾರುಣವಾಗಿ ಸಾವನ್ನಪ್ಪಿರುವ ಅಮಾಯಕ ಕಾರ್ಮಿಕರ ಶವಗಳು. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸಮೀಪದ ಇಂಡ್ಲಬೆಲೆ ಬಳಿ ಸಮಾರಂಭಕ್ಕೆ ಪೆಂಡಾಲ್ ಹಾಕುವ ವೇಳೆ ವಿದ್ಯುತ್ ಅವಘಡ ಸಂಭವಿಸಿದ ನಾಲ್ವರು ಅಮಾಯಕ ಕಾರ್ಮಿಕರು ಬಲಿಯಾದ ದುರ್ಘಟನೆ ಇಂದು ನಡೆದಿದೆ. ಇದೊಂದು ದುರಂತ ಇಂದು ನಡೆಯದಿದ್ದರೆ ನಾಳೆ ಅಲ್ಲಿ ಎಲ್ಲಿಲ್ಲದ ಸಂಭ್ರಮ ಮನೆ ಮಾಡಬೇಕಿತ್ತು. ಗಣ್ಯಾತೀ ಗಣ್ಯರು ಅಲ್ಲಿಗೆ ಬಂದು ಸಂಭ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು. ಇಂದು ಅಲ್ಲಿ ಆಗಬಾರದ್ದು ಆಗಿ ಹೋಗಿ, ಸೂತಕದ ಛಾಯೆ ಅವರಿಸಿದೆ.

ಇಂಡ್ಲಬೆಲೆ ಗ್ರಾಮದ ಬಳಿ ಜಿಆರ್ ಸಂಸ್ಕೃತಿ ಕಂಪನಿಯವರು ಅಪಾರ್ಟ್ಮೆಂಟ್ ನಿರ್ಮಾಣದ ಲೋಕಾರ್ಪಣೆ ಕಾರ್ಯಕ್ರಮವನ್ನು ನಾಳೆ ಹಮ್ಮಿಕೊಂಡಿದ್ದು, ಹೊಸರೋಡಿನ ಉಷಾ ಕಿರಣ ಟೆಂಟ್ ಹೌಸ್ ಎಂಬುವವರಿಗೆ ಶಾಮಿಯಾನ ಹಾಕಲು ತಿಳಿಸಿದ್ದರು. ಅದರಂತೆ  ನಾಳಿನ ಕಾರ್ಯಕ್ರಮಕ್ಕೆ ಇಂದು ಬೆಳಗ್ಗೆಯೇ ಶಾಮಿಯಾನ ತಂದ ಕಾರ್ಮಿಕರು ಚೇರ್, ಪೆಂಡಾಲ್ ಪರಿಕರಗಳನ್ನು ಒಂದು ಕಡೆ ಇಳಿಸಿ, ಪೆಂಡಾಲ್ ಹಾಕಲು ಕಬ್ಬಿಣದ ಕಂಬಗಳನ್ನು ನಿಲ್ಲಿಸಿದ್ದಾರೆ. ಆದರೆ ಸಮೀಪದಲ್ಲಿಯೇ ಇದ್ದ 11 ಕೆವಿ ವಿದ್ಯುತ್ ತಂತಿ ಗಮನಿಸದೆ ಕಬ್ಬಿಣದ ಕಂಬಗಳನ್ನು ಪಕ್ಕಕ್ಕೆ ಸರಿಸಲು ಯತ್ನಿಸಿದ್ದಾರೆ. ಈ ವೇಳೆ ವಿದ್ಯುತ್ ತಗಲಿ ಸ್ಥಳದಲ್ಲಿಯೇ ನಾಲ್ವರು ಟೆಂಟ್ ಹೌಸ್ ಕಾರ್ಮಿಕರು ಮೃತಪಟ್ಟಿದ್ದಾರೆ. ಆಕಾಶ್, ಮಹಾದೇವ್, ವಿಷಕಂಠ, ಮತ್ತು ವಿಜಯ್ ಸಿಂಗ್ ಮೃತರು. ಉಳಿದ ಆರು ಮಂದಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ  ಎಂದು ಕೇಂದ್ರ ವಲಯ ಐಜಿ ಚಂದ್ರಶೇಖರ್ ತಿಳಿಸಿದ್ದಾರೆ.

ಅಪಾರ್ಟ್ಮೆಂಟ್ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ಪೆಂಡಾಲ್ ಹಾಕುವ ವೇಳೆ 11 ಕೆವಿ ವಿದ್ಯುತ್ ತಂತಿ ತಾಗಿ ನಾಲ್ವರು ಟೆಂಟ್ ಹೌಸ್ ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆಗೆ ಅತೀವ ಬೇಸರವಿದೆ. ಇಲ್ಲಿ ಯಾರದೇ ತಪ್ಪಿದ್ದರು ಶಿಕ್ಷೆಯಾಗಬೇಕು. ಮೃತಪಟ್ಟಿರುವ ಅಮಾಯಕ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು. ಜೊತೆಗೆ ಅಪಾರ್ಟ್ಮೆಂಟ್ ನಿರ್ಮಾಣ ಸಂಸ್ಥೆ, ಅಥವಾ ಬೆಸ್ಕಾಂ ಸೇರಿದಂತೆ ಯಾರದೇ ನಿರ್ಲಕ್ಷ್ಯ ಇದ್ದರೂ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜೇಶ್ ಒತ್ತಾಯಿಸಿದ್ದಾರೆ.

ಇದನ್ನು ಓದಿ: ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ಈಡೇರಿಸಿದರೆ ಮಾತ್ರ ಸಾರಿಗೆ ಸತ್ಯಾಗ್ರಹ ನಿಲ್ಲಿಸುತ್ತೇವೆ; ಕೋಡಿಹಳ್ಳಿ ಚಂದ್ರಶೇಖರ್!

ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿ ಚಂದ್ರಶೇಖರ್, ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಮತ್ತು ಅಡಿಷನಲ್ ಎಸ್ಪಿ ಲಕ್ಷ್ಮೀ ಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಂದಾಯ ಅಧಿಕಾರಿಗಳು ಮತ್ತು ಬೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಸದ್ಯ  ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪ್ರಾಥಮಿಕ ತನಿಖೆ ಪ್ರಗತಿಯಲ್ಲಿದ್ದು, ಅಪಾರ್ಟ್ಮೆಂಟ್ ನಿರ್ಮಾಣ ಸಂಸ್ಥೆಯ ಇಬ್ಬರು ಮ್ಯಾನೇಜರ್​ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಅಡಿಷನಲ್ ಎಸ್ಪಿ ಲಕ್ಷ್ಮೀ ಗಣೇಶ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಣ್ಣ ನಿರ್ಲಕ್ಷ್ಯ ನಾಲ್ವರು ಅಮಾಯಕರ ಜೀವಕ್ಕೆ ಕುತ್ತು ತಂದಿದ್ದು, ದುರಂತವೇ ಸರಿ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕು. ಜೊತೆಗೆ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರವನ್ನು ದೊರಕಿಸಿಕೊಡಬೇಕಿದೆ.ವರದಿ : ಆದೂರು ಚಂದ್ರು
Published by: HR Ramesh
First published: April 7, 2021, 8:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories