ಶ್ರೀರಾಮುಲು ಕರೆದ ಸಭೆಗೆ ಗೈರು; ಮುನಿಸು ಹೊರಹಾಕಿದರಾ ಚಿತ್ರದುರ್ಗದ ನಾಲ್ವರು ಬಿಜೆಪಿ ಶಾಸಕರು?

ಚಿತ್ರದುರ್ಗದ ಜಿಲ್ಲೆಯಲ್ಲಿರುವ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯವರೇ 6 ಶಾಸಕರಿದ್ದಾರೆ. ಇವರ ಪೈಕಿ ನಾಲ್ವರು ಸಚಿವ ಸ್ಥಾನ ಸಿಗದೇ ಅಸಮಾಧಾನಗೊಂಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕರೆದ ಸಭೆಗೆ ಈ ನಾಲ್ವರು ಗೈರಾಗುವ ಮೂಲಕ ಕೋಪ ತೋರ್ಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ನೇತೃತ್ವದಲ್ಲಿ ಸಭೆ

ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ನೇತೃತ್ವದಲ್ಲಿ ಸಭೆ

  • Share this:
ಚಿತ್ರದುರ್ಗ: ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸರ್ಕಾರದಲ್ಲಿ ಚಿತ್ರದುರ್ಗ ಜಿಲ್ಲೆಗೆ ಸಚಿವ ಸ್ಥಾನ ಸಿಗುತ್ತದೆ ಅನ್ನೋ ನೀರೀಕ್ಷೆ ಹುಸಿಯಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯ ನಾಲ್ವರು ಸಚಿವಾಕಾಂಕ್ಷಿಗಳ ನಡೆ ಸರ್ಕಾರ, ಹಾಗು ಸಿಎಂ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಮುನಿಸಿಕೊಂಡಂತೆ ಗೋಚರಿಸುತ್ತಿದೆ. ಮೊನ್ನೆ ನಡೆದ ಕೋವಿಡ್ ನಿಯಂತ್ರಣ ಕುರಿತ ಸಭೆಗೆ ಹಿರಿಯ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಪೂರ್ಣಿಮಾ ಶ್ರೀನಿವಾಸ್, ಎಂ. ಚಂದ್ರಪ್ಪ, ಗೂಳಿಹಟ್ಟಿ ಶೇಖರ್  ಭಾಗವಹಿಸದೆ ತಮ್ಮ ಮುನಿಸನ್ನ ಹೊರ ಹಾಕಿದ್ದಾರೆ. ಶಾಸಕರ ವಿಶ್ವಾಸದಲ್ಲಿ ಜಿಲ್ಲೆಯ ರಕ್ಷಣೆಗೆ ತಯಾರಿ ಮಾಡುವ ನಿರೀಕ್ಷೆ ಇಟ್ಟು ಸಭೆ ನಡೆಸಿದ ಸಚಿವ ಶ್ರೀರಾಮುಲುಗೆ ಶಾಸಕರ ಗೈರು ಹಾಜರಿ ಹಿರಿಸುಮುರಿಸು ಉಂಟು ಮಾಡಿದೆ ಎಂಬ ಚರ್ಚೆ ಚಿತ್ರದುರ್ಗ ರಾಜಕೀಯ ವಲಯಗಳಲ್ಲಿ ಜೋರಾಗಿಯೇ ಕೇಳಿ ಬರುತ್ತಿದೆ.

ರಾಜ್ಯ ರಾಜಕಾರಣದಲ್ಲಿ ಅಧಿಕಾರಕ್ಕಾಗಿ ರಾಜಕೀಯ ಮೇಲಾಟಗಳು ನಡೆಯುತ್ತಲೇ ಬಂದಿವೆ. ಮುಂದೆ ಪಕ್ಷ ಸಂಘಟನೆಗೆ ರಾಜಕೀಯ ಪಕ್ಷಗಳು ಒಂದೊಂದು ಲೆಕ್ಕಾಚಾರ ಹಾಕಿದ್ರೆ ಇತ್ತ ರಾಜಕಾರಣಿಗಳು ಮಂತ್ರಿ, ಮುಖ್ಯಮಂತ್ರಿ ಗದ್ದುಗೆ ಏರುವುದಕ್ಕೆ ರಣ ತಂತ್ರಗಳನ್ನ ಹೆಣೆಯುತ್ತಲೇ ಇರುತ್ತಾರೆ. ಇದೀಗ ಬಿಎಸ್​ವೈ ಸರ್ಕಾರ ಹೋಗಿ ಬೊಮ್ಮಾಯಿ ಸರ್ಕಾರ ಬಂದಿದೆ. ಆದರೆ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆಯೋಕೆ ನಡೆದ ಶಾಸಕರ ಕಸರತ್ತು, ಹಗ್ಗ ಜಗ್ಗಾಟ ಮಾತ್ರ ಇನ್ನೂ ಮುಗಿದಿಲ್ಲ. ಸದ್ಯಕ್ಕೆ ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ.

ಕಳೆದ ಬಿಎಸ್​ವೈ ಸರ್ಕಾರದಲ್ಲಿ ಜಿಲ್ಲಾ ಕೋಟದಲ್ಲಿ ಚಿತ್ರದುರ್ಗ ಬಿಜೆಪಿ ಹಿರಿಯ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಬೋವಿ ಕೋಟಾದಲ್ಲಿ ಗೂಳಿಹಟ್ಟಿ ಶೇಖರ್, ಎಂ.ಚಂದ್ರಪ್ಪ, ಮಹಿಳಾ ಮತ್ತು ಯಾದವ ಕೋಟಾದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ಕೊಡಿ ಅಂತ ಮನವಿ ಮಾಡಿದ್ದರು. ಆದರೆ ಎಲ್ಲಾ ಲೆಕ್ಕಾಚಾರಗಳನ್ನ ಅಳೆದು, ತೂಗಿ ಜಿಲ್ಲಾ ಕೋಟಾ ಒಂದನ್ನೇ ಪರಿಗಣಿಸಿ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡಿದ್ದರು. ಆದಾಗಿದ್ದೇ ತಡ ಹಿರಿಯ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ, ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ್ದರು. ಇತ್ತ ಗೂಳಿಹಟ್ಟಿ ಶೇಖರ್, ಎಂ ಚಂದ್ರಪ್ಪ, ಪೂರ್ಣಿಮಾ ಶ್ರೀನಿವಾಸ್ ಕೂಡಾ ಬರೀ ಹೊರಗಿಂದ ಬಂದು ಶಾಸಕರಾದವರಿಗೆ ಸಚಿವ ಸ್ಥಾನ ಕೊಡ್ತಾರೆ. ಅವರಿಗೆ ಜಿಲ್ಲೆಯ ಬಗ್ಗೆ ಖಾಳಜಿ ಇರೋದಿಲ್ಲ. ಜಿಲ್ಲೆ ಅಭಿವೃದ್ಧಿ ಆಗಿಲ್ಲ ಅನ್ನೋ ಬೇಸರ ವ್ಯಕ್ತಪಡಿಸಿದ್ದರು. ಕೂಡಲೇ ಇವರನ್ನ ಆಗಿನ ಸಿಎಂ ಯಡಿಯೂರಪ್ಪ ಸಮಾಧಾನ ಮಾಡಿದ್ದರು.

ಇದನ್ನೂ ಓದಿ: Satish Reddy- ಶಾಸಕ ಸತೀಶ್ ರೆಡ್ಡಿಯ 2 ಕಾರುಗಳನ್ನ ರಾತ್ರೋರಾತ್ರಿ ಸುಟ್ಟುಹಾಕಿದ ದುಷ್ಕರ್ಮಿಗಳು

ಆದರೆ, ಇದೀಗ ಬಿಎಸ್​ವೈ ಸರ್ಕಾರ ಹೋಗಿ ಬೊಮ್ಮಾಯಿ ಸರ್ಕಾರ ಬಂದಿದೆ. ಇವರ ಸರ್ಕಾರದಲ್ಲಿ ಹಿರಿಯರ ಶಾಸಕರ ಕೋಟಾದಲ್ಲಿ ಜಿಹೆಚ್ ತಿಪ್ಪಾರೆಡ್ಡಿ, ಮಹಿಳಾ ಕೋಟಾದಲ್ಲಿ, ಪೂರ್ಣಿಮಾ, ಬೋವಿ ಕೋಟಾದಲ್ಲಿ ಗೂಳಿಹಟ್ಟಿ ಶೇಖರ್, ಎಂ ಚಂದ್ರಪ್ಪ ಸಚಿವ ಸ್ಥಾನದ ನೀರೀಕ್ಷೆ ಇಟ್ಟುಕೊಂಡಿದ್ರು. ಅದಕ್ಕಾಗಿ ಬೆಂಗಳೂರು, ದೆಹಲಿಗೆ ಹೋಗಿ ಪಕ್ಷದ ವರಿಷ್ಟರನ್ನ ಕಂಡು ಸಚಿವ ಸ್ಥಾನಕ್ಕಾಗಿ ಮನವಿ ಮಾಡಿದ್ರು. ಇವರ ಮನವಿಗೆ ಕೇಂದ್ರ ಮತ್ತು ರಾಜ್ಯದ ನಾಯಕರು ಪೂರಕವಾಗಿ ಸ್ಪಂದಿಸಿದ್ದರು. ಕೇಂದ್ರದ ನಾಯಕರ ಸ್ಪಂದನೆ ಜಿಲ್ಲೆಯಲ್ಲಿನ ಸಚಿವಾಕಾಂಕ್ಷಿ ಶಾಸಕರಿಗೆ ಸಚಿವರಾಗೋ ನಿರೀಕ್ಷೆಯನ್ನ ಮತ್ತಷ್ಟು ಗಟ್ಟಿಗೊಳಿಸಿತ್ತು‌. ಆದರೆ ಪಕ್ಷದಲ್ಲಿ ನಡೆದ ಆಂತರಿಕ ಬೆಳವಣಿಗೆಗಳಲ್ಲಿ ಅದೇನೇನು ಬದಲಾವಣೆಗಳಾದವೋ ಗೊತ್ತಿಲ್ಲ, ಚಿತ್ರದುರ್ಗ ಜಿಲ್ಲೆಯ ಐವರು ಬಿಜೆಪಿ ಶಾಸಕರಲ್ಲಿ ಕೇವಲ ಬಿ. ಶ್ರೀರಾಮುಲುಗೆ ಸಚಿವ ಸ್ಥಾನ ಫಿಕ್ಸ್ ಆಗಿದ್ದಾಯ್ತು. ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದೂ ಆಯ್ತು. ಇದರಿಂದ ಇನ್ನುಳಿದ ಜಿಲ್ಲೆಯ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ಕೈ ತಪ್ಪಿದ್ದು ಸಹಿಸಲಾಗದ ಬೇಸರ ತರಿಸಿದೆ.

ಸಚಿವ ಸ್ಥಾನ ಸಿಗದಿದ್ದಕ್ಕೆ ಎಲ್ಲರೂ ಅವರದೇ ದಾಟಿಯಲ್ಲಿ ಬೇಸರ ವ್ಯಕ್ತಪಡಿಸಿದರು. ಆದರೆ, ಪಕ್ಷ ಮತ್ತು ಸರ್ಕಾರದ ಜೊತೆ ಕೈ ಜೋಡಿಸಿ ಕೆಲಸ ಮಾಡುತ್ತೇವೆ ಅನ್ನೋ ಮಾತನ್ನೂ ಹಳಿದರು. ಆದರೆ ಮೊನ್ನೆಯಷ್ಟೆ ಮುಂಬರುವ ಕೋವಿಡ್ ಮೂರನೇ ಅಲೆ ನಿಯಂತ್ರಣ ಕುರಿತು ಸಚಿವ ಶ್ರೀರಾಮುಲು ಮಾಡಿದ ಅಧಿಕಾರಿಗಳ ಸಭೆಗೆ ಯಾವೊಬ್ಬ ಶಾಸಕರೂ ಹಾಜರಾಗಲಿಲ್ಲ.  ಶಾಸಕರ ಭಾಗವಹಿಸುವಿಕೆಯ ನೀರೀಕ್ಷೆಯಲ್ಲಿದ್ದ ಸಚಿವ ಶ್ರೀರಾಮುಲುಗೆ ಜಿಲ್ಲೆಯ ನಾಲ್ವರೂ ಶಾಸಕರ ಗೈರು ಹಾಜರಿ ನಿಜಕ್ಕೂ ಅಚ್ಚರಿ ಎನಿಸಿತ್ತು. ಇದೀಗ ಸಾರ್ವಜನಿಕ ವಲಯದಲ್ಲಿ ಸಚಿವಸ್ಥಾನ ಸಿಗದಿದ್ದಕ್ಕೆ ಶಾಸಕರು ಸಿಟ್ಟಾಗಿದ್ದಾರೆ ಎಂಬ ಚರ್ಚೆಗೆ ಕಾರಣವಾಗಿದೆ.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: