ಕೋಲಾರ (ನವೆಂಬರ್ 03); ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನೆನ್ನೆಯಷ್ಟೆ ಕೋಲಾರದಲ್ಲಿ ಪತ್ರಿಕಾಗೋಷ್ಠಿ ನಡಸಿದ್ದ ವರ್ತೂರು ಪ್ರಕಾಶ್, ನನ್ನನ್ನ ಹಣಕ್ಕಾಗಿಯೇ ಕಿಡ್ನಾಪ್ ಮಾಡಿ ಹೆದರಿಸಿದ್ದಾರೆ. ಇದು ಸುಪಾರಿ ಹಂತಕರು ಮಾಡಿದ್ದಲ್ಲ ಎಂದು ಹೇಳಿಕೆ ನೀಡಿದ್ದರು. ಇನ್ನು ಘಟನೆಯ ಪ್ರಮುಖ ಸಾಕ್ಷಿಗಳಾಗಿರೊ ಕಾರು ಚಾಲಕ ಸುನಿಲ್ ಹಾಗೂ ಕಿಡ್ನಾಪರ್ಸ್ ಗೆ ಹಣ ತಲುಪಿಸಿದ, ನಯಾಜ್ ರನ್ನ ಕೋಲಾರ ಗ್ರಾಮಾಂತರ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಕಿಡ್ನಾಪ್ ನಡೆದ ನವೆಂಬರ್ 25 ರಂದು ಸಂಜೆ 6.50 ರ ಸಮಯದಲ್ಲಿ ಕಾರು ಚಾಲಕ ಸುನೀಲ್ ಜೊತೆಗೆ ಬೆಂಗಳೂರು ಕಡೆಗೆ ಕಾರಲ್ಲಿ ಹೋಗುವ ವೇಳೆ, ಎರಡು ಕಾರಲ್ಲಿ ಬಂದು ಅಡ್ಡಗಟ್ಟಿದ ದುಷ್ಕರ್ಮಿಗಳು ಮನಬಂದಂತೆ ಇಬ್ಬರು ಮೇಲೂ ಹಲ್ಲೆ ನಡೆಸಿ ಕಿಡ್ನಾಪ್ ಮಾಡಿದ್ದಾಗಿ ವರ್ತೂರು ಪ್ರಕಾಶ್ ನೆನ್ನೆ ಹೇಳಿಕೆ ನೀಡಿದ್ದರು.
ಇದೀಗ ಚಾಲಕ ಸುನೀಲ್ ನನ್ನ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು, ನಂತರ ಅಜ್ಞಾತ ಸ್ತಳದಲ್ಲಿ ವಿಚಾರಣೆ ನಡೆಸಿದ್ದಾರೆ. ಇನ್ನು ಕಿಡ್ನಾಪರ್ಸ್‍ಗೆ ಕೋಲಾರದ ನರಸಾಪುರ ಕಾಫಿಡೇ ಬಳಿ 48 ಲಕ್ಷ ಹಣ ತಂದುಕೊಟ್ಟ ವರ್ತೂರು ಪ್ರಕಾಶ್ ಆಪ್ತ ನಯಾಜ್‍ನನ್ನು ಪೊಲೀಸರು ನೆನ್ನೆ ರಾತ್ರಿಯೇ ವಿಚಾರಣೆ ನಡೆಸಿ ವಾಪಾಸ್ ಕಳಿಸಿದ್ದಾರೆ. ಹಣಕ್ಕಾಗಿ ಕಿಡ್ನಾಪರ್ಸ್ ಬೇಡಿಕೆ ಇಟ್ಟಾಗ ಹಲವು ಸ್ನೇಹಿತರಿಗೆ ಪೋನ್ ಕರೆ ಮಾಡಿದ್ದ ವರ್ತೂರು ಪ್ರಕಾಶ್ 50 ಲಕ್ಷ ಹಣ ಹೊಂದಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆಪ್ತನಾದ ನಯಾಜ್ ಮೂಲಕ ಕಿಡ್ನಾಪರ್ಸ್ ಗೆ ಹಣ ತಲುಪುವಂತೆ ವ್ಯವಸ್ಥೆ ಮಾಡಿದ್ದರು. ಇದೀಗ ಇಬ್ಬರು ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕೋಲಾರ ಪೊಲೀಸ್ ಇಲಾಖೆಗೆ ಕೇಸ್ ವರ್ಗಾವಣೆ ಹಿನ್ನಲೆ, ಕಿಡ್ನಾಪ್ ನಡೆದ ವರ್ತೂರು ಪ್ರಕಾಶ್ ಅವರ ಜಂಗಾಲಹಳ್ಳಿಯ ತೋಟದ ಮನೆಗೆ, ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಹಾಗೂ ಹೆಚ್ಚುವರಿ ಎಸ್ಪಿ, ಡಿವೈಎಸ್ಪಿ ಭೇಟಿ ನೀಡಿ ವೀಕ್ಷಿಸಿದ್ದು, ಕಾರು ಅಡ್ಡಗಟ್ಟಿದ್ದಾರೆ ಎನ್ನಲಾದ ಸ್ತಳವನ್ನ ಪರಿಶೀಲನೆ ನಡೆಸಿದ್ದಾರೆ. ಕಿಡ್ನಾಪ್ ಪ್ರಕರಣ ಭೇದಿಸಲು ಕೋಲಾರ ಡಿವೈಎಸ್ಪಿ ಸಾಯಿಲ್ ಬಾಗ್ಲಾ ನೇತೃತ್ವದಲ್ಲಿ ನಾಲ್ಕು ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ 18 ಗೆ ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಹೇಳಿಕೆ ನೀಡಿದ್ದು, ವಿಚಾರಣೆಯಲ್ಲಿ ಈಗಾಗಲೇ ಹಲವು ಮಾಹಿತಿ ಕಲೆಹಾಕಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ನಡೆಯಲಿದೆ. ತನಿಖೆಗೆ ಬೆಂಗಳೂರು ಪೊಲೀಸರು ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಸಚಿವರ ಕಿಡ್ನಾಪ್ ಕೇಸ್ ಸುತ್ತ ಅನುಮಾನಗಳ ಹುತ್ತ;
ಹಣಕ್ಕಾಗಿಯೇ ನನ್ನನ್ನು ಕಿಡ್ನಾಪ್ ಮಾಡಿದ್ದಾರೆಂದು ಈಗಾಗಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ತಿಳಿಸಿದ್ದಾರೆ. ಆದರೆ ಕೇಸ್ ನಲ್ಲಿ ಎದ್ದಿರುವ ಹಲವು ಅನುಮಾನಗಳು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಮೂರು ಆಯಾಮಗಳಲ್ಲಿ ತನಿಖೆ ನಡೆಸುವ ಸಾಧ್ಯತೆಯಿದೆ.
ಮೊದಲನೆಯದಾಗಿ, ವರ್ತೂರು ಪ್ರಕಾಶ್ ಆರ್ಥಿಕ ವ್ಯವಹಾರಗಳ ತನಿಖೆ ಮಾಡುವುದು. ಎರಡನೆಯದಾಗಿ, ಕಿಡ್ನಾಪ್ ಪ್ರಕರಣದ ಸಾಕ್ಷಿಯಾದ ಚಾಲಕ ಸುನಿಲ್ ತಪ್ಪಿಸಿಕೊಂಡು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ, ಆಸ್ಪತ್ರೆಯಿಂದ ಡಿಸ್ಚಾರ್ಜ್ ನಂತರ ಕಾಣೆಯಾಗಿದ್ದ. ಇನ್ನು ಹಣ ಹೊಂದಿಸಿಕೊಂಡು ಕಿಡ್ನಾಪರ್ಸ್ ಗೆ 50 ಲಕ್ಷ ಹಣವನ್ನ ನಯಾಜ್ ಎನ್ನುವರು ನೀಡಿದರ ಬಗ್ಗೆಯು ವಿಚಾರಣೆ ನಡೆಯಲಿದೆ. ಮೂರನೆಯದಾಗಿ, ಕಿಡ್ನಾಪ್ ಗೂ ಮುನ್ನ, ಕಿಡ್ನಾಪ್ ನಂತರ ವರ್ತೂರು ಪ್ರಕಾಶ್ ಅವರ ಪೋನ್ ಕರೆಗಳ ಕುರಿತು ತನಿಖೆಯನ್ನ ಪೊಲೀಸರು ನಡೆಸಲಿದ್ದಾರೆ ಎನ್ನುವ ಮಾಹಿತಿಯು ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ