• Home
  • »
  • News
  • »
  • district
  • »
  • ಯಮಲೋಕದಿಂದ ವಾಪಸ್​ ಬಂದ ಅನುಭವ; ಕೊರೋನಾ ಚೇತರಿಕೆ ಬಳಿಕ ಮಾಲೀಕಯ್ಯ ಗುತ್ತೇದಾರ್​ ಮಾತು

ಯಮಲೋಕದಿಂದ ವಾಪಸ್​ ಬಂದ ಅನುಭವ; ಕೊರೋನಾ ಚೇತರಿಕೆ ಬಳಿಕ ಮಾಲೀಕಯ್ಯ ಗುತ್ತೇದಾರ್​ ಮಾತು

ಮಾಲೀಕಯ್ಯ ಗುತ್ತೇದಾರ್

ಮಾಲೀಕಯ್ಯ ಗುತ್ತೇದಾರ್

ಆಸ್ಪತ್ರೆಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದಿರುವ ಮಾಲೀಕಯ್ಯ ಗುತ್ತೇದಾರ್, ಮಹಾತ್ಮಾಗಾಂಧಿ ಜಯಂತಿ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಅಲ್ಲಿಂದಲೇ ಸಂದೇಶ ಕಳುಹಿಸಿಕೊಟ್ಟಿದ್ದಾರೆ.

  • Share this:

ಕಲಬುರ್ಗಿ(ಅಕ್ಟೋಬರ್​. 02): ಕೊರೋನಾ ಎಂಥವರನ್ನೂ ಹೈರಾಣಾಗಿಸಿದೆ. ಹಲವಾರು ಜನ ಈ ಮಹಾಮಾರಿಗೆ ಜೀವ ತೆತ್ತಿದ್ದಾರೆ. ಕಲಬುರ್ಗಿಯಲ್ಲಿ ಕೊರೋನಾ ರುದ್ರನರ್ತನ ಮುಂದುವರೆದಿದೆ. ಅದಕ್ಕೆ ಜನ ಸಾಮಾನ್ಯನೂ ಒಂದೇ, ವಿವಿಐಪಿಯೂ ಒಂದೇ ಎನ್ನುವ ರೀತಿಯಲ್ಲಿ ಎಲ್ಲರನ್ನೂ ಬೆಂಬತ್ತಿದೆ. ತೀವ್ರ ತೊಂದರೆ ಕೊಟ್ಟು ಜನತೆಯನ್ನು ಹೈರಾಣಾಗಿಸಿದೆ. ಇಂತಹ ಕೊರೋನಾಕ್ಕೆ ಜಿಲ್ಲೆಯ ಇಬ್ಬರು ಮಾಜಿ ಸಚಿವರೂ ತೀವ್ರ ಸಂಕಷ್ಟಕ್ಕೆ ಗುರಿಯಾಗಿ ಚೇತರಿಸಿಕೊಳ್ಳಲಾರಂಭಿಸಿದ್ದಾರೆ. ಒಬ್ಬರ ನಂತರ ಮತ್ತೊಬ್ಬರು ಭಾವುಕರಾಗಿ ಮಾತನಾಡಿ ಅಭಿಮಾನಿಗಳಿಗೆ ಸಂದೇಶ ಕಳುಹಿಸಿದ್ದಾರೆ. ಕೊರೋನಾ ಸೋಂಕಿನಿಂದ ಹೈರಾಣಾಗಿ ಮಾಜಿ ಸಚಿವರೊಬ್ಬರು ಕಣ್ಣೀರು ಹಾಕಿದ ಬೆನ್ನ ಹಿಂದೆಯೇ ಕಲಬುರ್ಗಿಯಲ್ಲಿ ಮತ್ತೋರ್ವ ಮಾಜಿ ಸಚಿವರು ಕೊರೋನಾದಿಂದಾಗಿ ಯಮಲೋಕಕ್ಕೆ ಹೋಗಿ, ಅಭಿಮಾನಿಗಳ ಕರೆಯಿಂದ ವಾಪಸ್ಸಾದ ಅನುಭವವಾಗಿದೆ ಎಂದು ಭಾವುಕವಾಗಿ ನುಡಿದಿದ್ದಾರೆ. ಗದ್ಗದಿತರಾಗಿ ಕಣ್ಣೀರು ಹಾಕಿದವರು ಮಾಜಿ ಸಚಿವ ಹಾಗೂ ಖ್ಯಾತ ಕುಸ್ತಿಪಟು ರೇವುನಾಯಕ ಬೆಳಮಗಿ. ಇದೀಗ ಕೊರೋನಾ ಸೋಂಕು ತಗಲಿ ಯಮ ಲೋಕಕ್ಕೆ ಹೋಗಿ ವಾಪಸ್ಸಾದ ಅನುಭವವಾಗಿದೆ.


ಶತ್ರುವಿಗೂ ಇಂತಹ ಕಾಯಿಲೆ ಬರಬಾರದೆಂದು ಭಾವುಕವಾಗಿ ನುಡಿದವರು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ. ಕಳೆದ ತಿಂಗಳು ಕಲಬುರ್ಗಿಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲರಿಗೆ ಕೊರೋನಾ ಸೋಂಕು ದೃಢಪಟ್ಟ ನಂತರ ಅವರನ್ನು ಭೇಟಿ ಮಾಡಿದ್ದ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿತ್ತು.


ಆಸ್ಪತ್ರೆಯಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆದಿರುವ ಮಾಲೀಕಯ್ಯ ಗುತ್ತೇದಾರ್, ಮಹಾತ್ಮಾಗಾಂಧಿ ಜಯಂತಿ ಹಿನ್ನೆಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಅಲ್ಲಿಂದಲೇ ಸಂದೇಶ ಕಳುಹಿಸಿಕೊಟ್ಟಿದ್ದಾರೆ. ಮಹಾತ್ಮಾಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಶುಭಾಷಯ ಕೋರಿರುವ ಮಾಲೀಕಯ್ಯ, ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನೂ ನೀಡಿದ್ದಾರೆ.


ತಮಗೆ ಕೊರೋನಾ ದೃಢಪಟ್ಟು ಆಸ್ಪತ್ರೆ ಸೇರಿದ ನಂತರ ಯಮಯಾತನೆ ಅನುಭವಿಸಿದ್ದೇನೆ. ಒಂದರ್ಥದಲ್ಲಿ ಯಮಲೋಕಕ್ಕೆ ಹೋಗಿ ಬಂದ ಅನುಭವವಾಗಿದೆ. ನನ್ನ ಅಭಿಮಾನಿಗಳ ಪೂಜೆ ಪುನಸ್ಕಾರಗಳು ನನ್ನನ್ನು ಯಮಲೋಕದಿಂದ ವಾಪಸ್ ಕರೆಯಿಸಿವೆ. ನಾನು ಜನ ಸೇವೆಯನ್ನು ಮುಂದುವರೆಸಬೇಕೆಂಬುದು ದೇವರ ಇಚ್ಛೆಯೂ ಆಗಿರುವುದರಿಂದ ಸಾವಿನ ಮನೆಯಿಂದ ವಾಪಸ್ ಕರೆ ತಂದಿದ್ದಾನೆ ಎಂದು ಹೇಳಿದ್ದಾರೆ.


ಶೇ.95 ರಷ್ಟು ಗುಣಮುಖನಾಗಿದ್ದು, ಇನ್ನು ನಾಲ್ಕು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬರಲಿದ್ದೇನೆ. ಎಂದಿನಂತೆ ನಿಮ್ಮ ಸೇವೆ ಮುಂದುವರೆಸಲಿದ್ದೇನೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಎಂದಿರುವ ಮಾಲೀಕಯ್ಯ ಗುತ್ತೇದಾರ್, ಯಾರೂ ಕೊರೋನಾವನ್ನು ನಿರ್ಲಕ್ಷಿಸಬೇಡಿ. ನಿರ್ಲಕ್ಷಿಸಿದಷ್ಟು ಕೇಡು ಕಟ್ಟಿಟ್ಟ ಬುತ್ತಿ. ಸರ್ಕಾರ ಸೂಚಿಸಿರುವ ಮಾರ್ಗ ಸೂಚಿಗಳನ್ನು ಎಲ್ಲರೂ ಪಾಲನೆ ಮಾಡಬೇಕು.


ಇದನ್ನೂ ಓದಿ : ಗಾಂಧಿ ಕೊಂದ ಗೋಡ್ಸೆ ಬಿಜೆಪಿ, ಆರ್​ಎಸ್​​ಎಸ್​​​ನ ಆರಾಧ್ಯ ದೈವ : ಸಿದ್ದರಾಮಯ್ಯ ವಾಗ್ದಾಳಿ


ದೇಶದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಕೊರೋನಾ ಕಟ್ಟಿ ಹಾಕಲು ಮುಂದಿನ ದಿನಗಳಲ್ಲಿ ಖಂಡಿತಾ ಯಶಸ್ವಿಯಾಗುತ್ತಾರೆ. ಎಲ್ಲರೂ ಅವರಿಗೆ ಸಹಕರಿಸಬೇಕೆಂದು ಮಾಲೀಕಯ್ಯ ಗುತ್ತೇದಾರ್​ ಮನವಿ ಮಾಡಿದ್ದಾರೆ.


ನಿನ್ನೆಯಷ್ಟೇ ಮಾಜಿ ಸಚಿವ ರೇವುನಾಯಕ ಬೆಳೆಗಿ, ಕೊರೋನಾ ಸೋಂಕಿಗೆ ಹೈರಾಣಾಗಿ ಗದ್ಗದಿತರಾಗಿ ಕಣ್ಣೀರು ಹಾಕಿದ್ದರು. ಯಾರಿಗೂ ಈ ಕಾಯಿಲೆ ಬರಬಾರದು ಎಂದಿದ್ದರು.ಕೊರೋನಾನೆಗೆಟಿವ್ ಬಂದ ನಂತರವೂ ತೀವ್ರ ಉಸಿರಾಟದ ತೊಂದರೆಯಾಗುತ್ತಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದೇನೆ. ಯಾರೂ ಅಭಿಮಾನಿಗಳು ಮನೆಗೆ ಬರಬೇಡಿ ಎಂದು ಕೈಜೋಡಿಸಿ ಮನವಿ ಮಾಡಿದ್ದರು. ಇದೀಗ ಮತ್ತೋರ್ವ ಮಾಜಿ ಸಚಿವ ಭಾವುಕವಾಗಿ ಮಾತನಾಡಿದ್ದಾರೆ. ಶೀಘ್ರವೇ ಗುಣಮುಖರಾಗಿ ಬರೋದಾಗಿ ಸಿಹಿ ಸುದ್ದಿಯನ್ನೂ ನೀಡಿದ್ದಾರೆ.

Published by:G Hareeshkumar
First published: