ಡಯಾಲಿಸಿಸ್ ಮಾಡಲು ಜನರಿಂದ ಲೂಟಿ ಹೊಡೆಯುತ್ತಿದ್ದಾರೆ: ಹೆಚ್ ಡಿ ರೇವಣ್ಣ

ಜಿಲ್ಲೆಯಲ್ಲಿ 108 ತುರ್ತು ಚಿಕಿತ್ಸಾ ವಾಹನದ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಖಾಸಗಿ ಆಸ್ಪತ್ರೆಗಳಿಂದ 5 ಸಾವಿರ ಹಣ ಪಡೆದು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲು ಮಾಡುತ್ತಿದ್ದಾರೆ

ಮಾಜಿ ಸಚಿವ ಹೆಚ್. ಡಿ. ರೇವಣ್ಣ

ಮಾಜಿ ಸಚಿವ ಹೆಚ್. ಡಿ. ರೇವಣ್ಣ

  • Share this:
ಹಾಸನ(ನವೆಂಬರ್​. 26): ಹೊಳೆನರಸೀಪುರದಲ್ಲಿ ಡಯಾಲಿಸಿಸ್ ಮಾಡಲು ಸರ್ಕಾರದ ಅನುಮತಿ‌ ಮೇರೆಗೆ ಖಾಸಗಿ ಕ್ಲಿನಿಕ್ ನಡೆಸುತ್ತಿರುವ ಪ್ರಿಯಾ ಶೆಟ್ಟಿ ಎಂಬುವವರ ಮಾಲೀಕತ್ವದ ಡಯಾಲಿಸಿಸ್ ಗೆ ಸರ್ಕಾರ 1200 ರೂ ನಿಗದಿ ಮಾಡಿದ್ದರು. 1500 ಶುಲ್ಕ ವಸೂಲಿ ಮಾಡುತ್ತಿದ್ದು, ಇಲ್ಲಿಗೆ ಬರುವ ರೋಗಿಗಳು ಗ್ಲೌಸ್ ಹಾಗೂ ಔಷಧಗಳನ್ನು ತಂದು ಹಣವನ್ನು ಸಹ ಪಾವತಿಸಬೇಕಾಗಿದೆ ಎಂದು ಮಾಜಿ ಸಚಿವ ಹೆಚ್ ಡಿ.ರೇವಣ್ಣ ಆರೋಪಿಸಿದರು. ಹಾಸನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಹೆಚ್ ಡಿ ರೇವಣ್ಣ ಗಂಭೀರ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ಈ ಕುರಿತು ತನಿಖೆ ನಡೆಸಿ ವರದಿ ನೀಡುವುದಾಗಿ ಹಾಗೂ ಮಾಲೀಕರ ವಿರುದ್ಧ ಕ್ರಮ ಜರುಗಿಸುವುದಾಗಿ ತಿಳಿಸಿದರು. ಜಿಲ್ಲೆಯಲ್ಲಿ 108 ತುರ್ತು ಚಿಕಿತ್ಸಾ ವಾಹನದ ಸಿಬ್ಬಂದಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಖಾಸಗಿ ಆಸ್ಪತ್ರೆಗಳಿಂದ 5 ಸಾವಿರ ಹಣ ಪಡೆದು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲು ಮಾಡುತ್ತಿದ್ದಾರೆ. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಹಾಗೂ ಅಪಘಾತಕ್ಕೀಡಾದ ವ್ಯಕ್ತಿಗಳಿಗೆ ತೊಂದರೆಯಾಗಿದೆ ಎಂದರು.

108 ವಾಹನ ಪ್ರತಿ ತಾಲೂಕು- ಜಿಲ್ಲಾ ಕೇಂದ್ರಗಳಲ್ಲಿ ಇರುವಂತಹ ಸರ್ಕಾರಿ ಆಸ್ಪತ್ರೆಗಳಿಗೆ ಬಂದು ಚಿಕಿತ್ಸೆ ಇಲ್ಲದಿದ್ದ ಪಕ್ಷದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಗಳಿಗೆ ಸೂಚಿಸುವಂತೆ ನಿರ್ದೇಶನ ನೀಡಲು ರೇವಣ್ಣ ಒತ್ತಾಯಿಸಿದರು.

ಸರ್ಕಾರಿ ವೈದ್ಯರ ಮೇಲೆ ರೋಗಿಗಳ ಸಂಬಂಧಿಗಳಿಂದ ಕೆಲವೊಮ್ಮೆ ಹಲ್ಲೆಗಳು ನಡೆಯುತ್ತಿದ್ದು ಆರೋಗ್ಯ ಕೇಂದ್ರದಲ್ಲಿ ಪೊಲೀಸರನ್ನು ನಿಯೋಜಿಸುವಂತೆ ಶಾಸಕರೆಲ್ಲರೂ ಒತ್ತಾಯಿಸಿದರು ಹಾಗೂ ಪಾಳಿಯಂತೆ ಮೂರು ಜನ ಪೊಲೀಸ್ ಕಾನ್ಸ್​​ಟೇಬಲ್​​​​ಗಳನ್ನು ಆರೋಗ್ಯ ಇಲಾಖೆಯ ಬಂದೋಬಸ್ತ್ ವ್ಯವಸ್ಥೆಗೆ ನೇಮಿಸುವಂತೆ ಒತ್ತಾಯಿಸಿದರು .

ಜಿಲ್ಲೆಯಲ್ಲಿ ಆಯುಷ್ ಇಲಾಖೆ ಆಯಸ್ಸು ಹೆಚ್ಚಿಸಲು ಅಥವಾ ಕಡಿಮೆ ಮಾಡಲೊ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಸಭೆಯಲ್ಲಿ ಹೇಳುವ ಮೂಲಕ ಸಭೆಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು. ನಿಮ್ಮ ಇಲಾಖೆ ಸಚಿವ ಗೋಪಾಲಯ್ಯ ಅವರ ಆಯಸ್ಸನ್ನು ಹೆಚ್ಚಿಸುವುದೆ ಎಂದು ಬೇಲೂರು ಆಯುಷ್ ಇಲಾಖೆ ಅಧಿಕಾರಿಯ ಕಾಲೆಳೆದರು. ನಿವೇಶನ ದಾನ ನೀಡಿದ ವ್ಯಕ್ತಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಹಾಕಿಸದೆ ಆಯುಷ್ ಕೇಂದ್ರ ಉದ್ಘಾಟನೆ ಮಾಡುತ್ತೀರಿ ಅಲ್ಲದೆ ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ಪಡೆಯದೆ ಕಾರ್ಯಕ್ರಮ ಯೋಚಿಸುತ್ತೀರಿ ಎಂದು ರೇವಣ್ಣ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸ್ಥಳೀಯ ಶಾಸಕರನ್ನು ವಿಶ್ವಾಸಕ್ಕೆ ಪಡೆದು ಕಾರ್ಯಕ್ರಮ ರೂಪಿಸುವಂತೆ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಸರ್ಕಾರದ ಯೋಜನೆ ಅನುಷ್ಠಾನ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಲ್ಲಿ ಸರ್ಕಾರ ಯೋಜನೆಗಳನ್ನು ತಂದಿದ್ದು ಇವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸು ವಂತೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ರೈತರ ಅನುಕೂಲಕ್ಕಾಗಿ ಫಸಲ್ ಭೀಮಾ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ. ಆದರೆ, ರೈತರಿಂದ ಕಂತನ್ನು ಕಟ್ಟಿಸಿಕೊಂಡು ಬೆಳೆ ಹಾನಿ ಸಂಭವಿಸಿದ ನಂತರ ಸಮರ್ಪಕವಾಗಿ ವಿಮಾ ಕಂಪನಿಯಿಂದ ರೈತರಿಗೆ ವಿಮಾ ಹಣ ಬರುತ್ತಿಲ್ಲ. ವಿಮಾ ಕಂಪನಿಯಿಂದ ಜಿಲ್ಲೆಯಲ್ಲಿ ರೈತರಿಂದ ಕೋಟ್ಯಾಂತರ ರೂ ವಿಮಾ ಕಂತನ್ನು ಕಟ್ಟಿಸಿಕೊಳ್ಳಲಾಗಿದೆ ಆದರೆ ಬೆಳೆ ಹಾನಿ ಸಂಭವಿಸಿದರೆ ರೈತರಿಗೆ ಪರಿಹಾರ‌ ಹಣ ಬರುತ್ತಿಲ್ಲ ಎಂದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ  ಗಂಭೀರ ಆರೋಪ ಮಾಡಿದರು.

ಇದನ್ನೂ ಓದಿ : ವಿಜಯೇಂದ್ರ ಉಪ ಚುನಾವಣೆ ಗೆಲುವಿನ ರೂವಾರಿ- ಹಾಗಾದ್ರೆ ಮಂತ್ರಿಗಳು, ರಾಜ್ಯಾಧ್ಯಕ್ಷರು ಏನೂ ಅಲ್ಲ: ಬೇಳೂರು ಪ್ರಶ್ನೆ

ಇದುವರೆಗೆ ಜಿಲ್ಲೆಯಲ್ಲಿ ಫಸಲ್ ಭೀಮಾ ಯೋಜನೆಯಡಿ ಎಷ್ಟು ಪರಿಹಾರ ವಿತರಣೆಯಾಗಿದೆ ಹಾಗೂ‌ ಎಷ್ಟು ವಿಮಾ ಕಂತು ಕಟ್ಟಿಸಿಕೊಂಡಿದೆ ಎಂದು ಮಾಹಿತಿ ನೀಡುವಂತೆ ಜಂಟಿ ಕೃಷಿ ನಿರ್ದೇಶಕ ರವಿಕುಮಾರ್ ಅವರಿಗೆ ಸೂಚನೆ ನೀಡಿದರು. ಸೂಕ್ತ ಮಾಹಿತಿ ನೀಡಲು ವಿಫಲವಾದ ಅಧಿಕಾರಿಗಳಿಗೆ ಮುಂದಿನ ಸಭೆಯಲ್ಲಿ ಸೂಕ್ತ ಮಾಹಿತಿ ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರು ಸಹ ತಾಕೀತು ಮಾಡಿದರು.

ಜಿಲ್ಲೆಯಲ್ಲಿ ಹೆಚ್ಚು ಮಳೆಯ ಕಾರಣ ಆಗಸ್ಟ್ - ಅಕ್ಟೋಬರ್ ತಿಂಗಳಿನಲ್ಲಿ 4173 ಹೆಕ್ಟೆರ್ ಬೆಳೆ ನಾಶವಾಗಿದ್ದು 313 ಲಕ್ಷ ಎನ್ ಡಿ ಆರ್ ಎಫ್ ನಿಯಮಾನುಸಾರ ಪರಿಹಾರ ವಿತರಿಸುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ರವಿ ಅವರು ಮಾಹಿತಿ ನೀಡಿದರು.
Published by:G Hareeshkumar
First published: