ಚಾಮರಾಜನಗರ (ಆ.01) ಸುತ್ತಲು ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟಗುಡ್ಡ, ನಡುವೆ ನಳನಳಿಸುತ್ತಿರುವ ಸೂರ್ಯಕಾಂತಿ ಬೆಳೆ. ಅಬ್ಬಾ ಇಂಥಹ ದೃಶ್ಯ ನೋಡಿದ್ರೆ ಯಾರು ತಾನೇ ಮನಸೋಲಲ್ಲ. ಹಾಗೆ ಹೂವಿನ ಸೌಂದರ್ಯಕ್ಕೆ ಮನಸೋತು ಹೂಗಳ ಮಧ್ಯೆ ನಿಂತು ಪ್ರವಾಸಿಗರು ಒಂದೆಡೆ ಸೆಲ್ಫಿ ತೆಗೆದುಕೊಳ್ಳುತ್ತಿದ್ರೆ, ಇನ್ನೊಂದೆಡೆ ಇದನ್ನೆ ಬಂಡವಾಳ ಮಾಡಿಕೊಂಡಿರುವ ರೈತರು ಸೆಲ್ಫಿ ಪ್ರಿಯರಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಅಪರೂಪದ ಘಟನೆ ನಡೆಯುತ್ತಿರುವುದು ಚಾಮರಾಜನಗರ ಜಿಲ್ಲೆಯ ಮೂಲಕ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಯಲ್ಲಿ.
ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಪೂರ್ವ ಮುಂಗಾರು ಮಳೆಯಾಗಿದೆ. ಹಾಗಾಗಿ ಗುಂಡ್ಲುಪೇಟೆ ತಾಲೂಕಿನಲ್ಲಿ ಭರ್ಜರಿ ಸೂರ್ಯಕಾಂತಿ ಬೆಳೆದು ನಿಂತಿದೆ. ಇನ್ನು ಗುಂಡ್ಲುಪೇಟೆಯಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 67 ಇದೆ. ಇನ್ನೊಂದೆಡೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳ ಜಮೀನುಗಳಲ್ಲಿ ರೈತರು ಬೆಳೆದಿರುವ ಸೂರ್ಯಕಾಂತಿ ಬೆಳೆ ಕಂಗೊಳಿಸುತ್ತಿದೆ. ಸೂರ್ಯಕಾಂತಿಯ ಸೌಂದರ್ಯ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ.
ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಈ ಹೆದ್ದಾರಿಗಳಲ್ಲಿ ಸಂಚರಿಸುವ ಪ್ರವಾಸಿಗರನ್ನು ಸೂರ್ಯಕಾಂತಿ ತನ್ನ ಅಂದಚಂದದಿಂದ ಕೈ ಬೀಸಿ ಕರೆಯುತ್ತಿದೆ. ಕಣ್ಣಿಗೆ ತಂಪು ನೀಡುವ ಹಳದಿ ಹೂವಿಗೆ ಮನಸೋತ ಪ್ರವಾಸಿಗರು ರಸ್ತೆ ಬದಿ ತಮ್ಮ ವಾಹನಗಳನ್ನು ನಿಲ್ಲಿಸಿ ಸೂರ್ಯಕಾಂತಿ ಹೊಲಗಳಿಗೆ ಲಗ್ಗೆ ಇಡುತ್ತಿದ್ದಾರೆ. ಕಣ್ಣಿಗೆ ಮತ್ತು ಮನಕ್ಕೆ ತಂಪನ್ನುಂಟು ಮಾಡುವ ಸೂರ್ಯಕಾಂತಿ ಹೂಗಳನ್ನು ತಮ್ಮ ಮೊಬೈಲ್ ಗಳ ಮೂಲಕ ಸೆರೆ ಹಿಡಿಯುತ್ತಿದ್ದಾರೆ. ಹೂಗಳ ನಡುವೆ ನಿಂತು ಗ್ರೂಪ್ ಫೋಟೋ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಿದ್ದಾರೆ.
ಪ್ರವಾಸಿಗರ ಸೆಲ್ಫಿ ಕ್ರೇಜ್ನಿಂದ ಕೆಲವೆಡೆ ಸೂರ್ಯಕಾಂತಿ ಬೆಳೆ ಹಾನಿಗೀಡಾಗಿವೆ. ಫೋಟೋ ಹಾಗು ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಜನರು ಸೂರ್ಯಕಾಂತಿ ಗಿಡಗಳನ್ನು ಮುರಿದು ಹಾಳು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಹಾಗಾಗಿ ಈ ನಷ್ಟ ತಪ್ಪಿಸಿಕೊಳ್ಳಲು ಸೂರ್ಯಕಾಂತಿ ಬೆಳೆದ ರೈತರು ಒಳ್ಳೆಯ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಸೆಲ್ಫಿ ತೆಗೆದುಕೊಳ್ಳಲು ಬರುವ ಪ್ರವಾಸಿಗರಿಗೆ ಕೆಲವೆಡೆ 50 ರೂಪಾಯಿ ಮತ್ತೆ ಕೆಲವೆಡೆ 10 ರೂಪಾಯಿ ದರ ನಿಗದಿಪಡಿಸಿದ್ದಾರೆ. ಯಾರೇ ಆಗಲಿ ಸೂರ್ಯಕಾಂತಿ ಹೊಲದಲ್ಲಿ ಫೋಟೋ ಅಥವಾ ಸೆಲ್ಪಿ ತೆಗೆದುಕೊಳ್ಳಲು ಜಮೀನಿನ ರೈತನಿಗೆ ಶುಲ್ಕ ನೀಡಬೇಕು.
ಇದನ್ನೂ ಓದಿ: ನಂದಿಬೆಟ್ಟದ ತಪ್ಪಲಿನಲ್ಲಿ ಧಮ್ಮಾರೋ ಧಮ್.. ಮದ್ಯ-ಹುಕ್ಕಾ, ಮ್ಯೂಸಿಕ್ ಹಾಕಿಕೊಂಡು ಕಿಡಿಗೇಡಿಗಳ ಮೋಜುಮಸ್ತಿ
ಪ್ರತಿದಿನ ನೂರಾರು ಪ್ರಯಾಣಿಕರು ಸಂಚರಿಸುತ್ತಾರೆ. ಅದರಲ್ಲೂ ವೀಕೆಂಡ್ ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಫೋಟೋ ತೆಗೆದುಕೊಳ್ಳುವ ಆತುರದಲ್ಲಿ ನಾವು ಕಷ್ಟಪಟ್ಟು ಬೆಳೆದ ಬೆಳೆಯನ್ನು ತುಳಿದು ಹಾಳುಮಾಡುತ್ತಿದ್ದಾರೆ. ಹಾಗಾಗಿ ಶುಲ್ಕ ವಿಧಿಸುವ ಉಪಾಯ ಮಾಡಿದ್ದೇವೆ ಎಂದು ಕನ್ನೇಗಾಲದ ಯುವ ರೈತ ಅಭಿಷೇಕ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸೂರ್ಯಕಾಂತಿ ಹೊಲಗಳಲ್ಲಿ ಫೋಟೋ ತೆಗೆದುಕೊಳ್ಳಲು ದರ ನಿಗಧಿಪಡಿಸಿರುವುದರಿಂದ ಒಂದೆಡೆ ರೈತರಿಗೆ ವರಮಾನವೂ ಬಂದಂತೆ ಆಗುತ್ತಿದೆ. ಇನ್ನೊಂದೆಡೆ ರೈತರಿಗೆ ತಮ್ಮ ಬೆಳೆಯನ್ನು ಕಾದು ರಕ್ಷಣೆ ಮಾಡಿದಂತೆ ಆಗುತ್ತಿದೆ. ಒಟ್ಟಾರೆ ಈ ಬಾರಿ ಉತ್ತಮವಾಗಿ ಬೆಳೆದಿರುವ ಸೂರ್ಯಕಾಂತಿ ಬೆಳೆ ತನ್ನ ಅಂದಚಂದದಿಂದ ಪ್ರವಾಸಿಗರಿಗೆ ಮುದ ನೀಡುತ್ತಿದೆ. ಪ್ರವಾಸಿಗರು ಫೋಟೋ ತೆಗೆಯುವ ಭರದಲ್ಲಿ ಹಾಳಾಗುವ ಬೆಳೆಯ ನಷ್ಟವನ್ನು ಫೋಟೋಗೆ ಶುಲ್ಕ ವಿಧಿಸುವ ಮೂಲಕ ರೈತರು ತುಂಬಿಕೊಳ್ಳಲು ಮುಂದಾಗಿರುವುದು ಶ್ಳಾಘನೀಯವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ