ಚಾಮರಾಜನಗರ : ನಾಲ್ವರು ವನ್ಯಜೀವಿ ಬೇಟೆಗಾರರ ಬಂಧನ ; ಹುಲಿ ಚರ್ಮ, ಮೂಳೆ ವಶ

ಆರೋಪಿಗಳು

ಆರೋಪಿಗಳು

ವಶಪಡಿಸಿಕೊಂಡಿರುವ ಮಾಲಿನ ಪೈಕಿ ಹುಲಿಯ ಚರ್ಮ, ಉಗುರು  ಹಾಗು ಮೂಳೆಗಳಿವೆ. ಆದರೆ ಹುಲಿಯ ದಂತಗಳು ಕಾಣೆಯಾಗಿವೆ. ಅವುಗಳನ್ನು ಇನ್ಯಾರಿಗಾದರೂ ಮಾರಾಟ ಮಾಡಲಾಗಿದೆಯಾ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ

  • Share this:

ಚಾಮರಾಜನಗರ(ಆಗಸ್ಟ್. 21): ವನ್ಯಜೀವಿಗಳನ್ನು ಬೇಟೆಯಾಡಿ ಅವುಗಳ ಚರ್ಮ, ಉಗುರು ಹಾಗು ಮೂಳೆಗಳನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ನಾಲ್ವರು ವನ್ಯಜೀವಿ ಬೇಟೆಗಾರರನ್ನು ಬಂಧಿಸುವಲ್ಲಿ ಮಲೆಮಹದೇಶ್ವರ ವನ್ಯಧಾಮದ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹನೂರು ತಾಲೂಕು ನೆಲ್ಲಿಕತ್ರಿ ಸೋಲಿಗರ ಹಾಡಿಯ ಮಹದೇವ, ಕುಮಾರ, ಗೊಂಬೆಗಲ್ಲು ಸೋಲಿಗರ ಹಾಡಿಯ ರಂಗಸ್ವಾಮಿ ಹಾಗು ಮಹದೇವ ಎಂಬ ಬೇಟೆಗಾರರನ್ನು ಬಂಧಿಸಲಾಗಿದೆ


ಬಂಧಿತರಿಂದ  ಹುಲಿಯ ನಾಲ್ಕು ಉಗುರುಗಳು, ಒಂದು ಹುಲಿಯ  ದೇಹದ ಮೂಳೆಗಳು ಚಿರತೆಯ ಎರಡು ಉಗುರುಗಳು, ಎರಡು ಜಿಂಕೆಯ ಚರ್ಮ, ಒಂದು ಕಾಡು ಕುರಿಯ ಚರ್ಮ, ಎರಡು ಹಾರುವ ಅಳಿಲಿನ ಚರ್ಮ, ಸೀಳುನಾಯಿಯ ಚರ್ಮ ಹಾಗು ಮೂಳೆಗಳು, ಹಾಗು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಕೊಳ್ಳಲಾಗಿದೆ.


ವನ್ಯಜೀವಿಗಳಿಗೆ  ಬಂದೂಕಿನಿಂದ ಗುಂಡು ಹಾರಿಸಿ ಹಾಗು ಉರುಳು ಹಾಕಿ ಕೊಂದು ಅವುಗಳ ಚರ್ಮ, ಉಗುರು ಹಾಗು ಮೂಳೆಗಳನ್ನು ಮಾರಾಟ ಮಾಡಲು ಸಾಗಾಣೆ ಮಾಡುತ್ತಿದ್ದಾಗ ಬಿಳಿಗಿರಂಗನಬೆಟ್ಟದ ಗುಂಡಾಲ್ ಜಲಾಶಯದ ಬಳಿ ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ ಎಂದು ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.


ವನ್ಯಪ್ರಾಣಿಗಳ ಚರ್ಮ, ಉಗುರು ಹಾಗು ಮೂಳೆಗಳನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ  ವೈಲ್ಡ್ ಲೈಫ್ ಕ್ರೈಂ ಕಂಟ್ರೋಲ್ ಬ್ಯೂರೋ ಹಾಗು ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಅನುಸರಿಸಿ ಮಲೆಮಹದೇಶ್ವರ ವನ್ಯಜೀವಿ ವಿಭಾಗ ಹಾಗು ಬಿ.ಆರ್.ಟಿ. ಹುಲಿರಕ್ಷಿತ ಸಂರಕ್ಷಿತ ಪ್ರದೇಶದ ಅರಣ್ಯಾಧಿಕಾರಿಗಳು ಜಂಟಿ ಕಾರ್ಯಚರಣೆ ನಡೆಸಿ ಬಿಳಿಗಿರಂಗನ ಬೆಟ್ಟದ ಗುಂಡಾಲ್ ಜಲಾಶಯದ ಬಳಿ ಹೊಂಚು ಹಾಕಿ ಆರೋಪಿಗಳನ್ನು ಬಂಧಿಸಲಾಗಿದೆ.


ಇದನ್ನೂ ಓದಿ : Ganesha Festival 2020 : ವಿಜಯಪುರದಲ್ಲಿ ಸದ್ದಿಲ್ಲದೆ ನಡೆದಿದೆ ಪರಿಸರಕ್ಕೆ ಪೂರಕವಾದ ಗಣೇಶೋತ್ಸವ ಆಚರಣೆ


ವಶಪಡಿಸಿಕೊಂಡಿರುವ ಮಾಲಿನ ಪೈಕಿ ಹುಲಿಯ ಚರ್ಮ, ಉಗುರು ಹಾಗು ಮೂಳೆಗಳಿವೆ ಆದರೆ  ಹುಲಿಯ ದಂತಗಳು ಕಾಣೆಯಾಗಿವೆ. ಅವುಗಳನ್ನು ಇನ್ಯಾರಿಗಾದರೂ ಮಾರಾಟ ಮಾಡಲಾಗಿದೆಯಾ? ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ವನ್ಯಜೀವಿಗಳನ್ನು ಕೊಂದು ಅವುಗಳ ಚರ್ಮ, ಉಗುರು, ಮೂಳೆಗಳನ್ನು ಮಾರಾಟ ಮಾಡುವ ಜಾಲದಲ್ಲಿ ಇನ್ನೂ ಕೆಲವರು ಇರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.


ಅಷ್ಟು ಸುಲಭವಾಗಿ ಸಿಗದ ಹಾರುವ ಅಳಿಲನ್ನೇ ಬೇಟೆಯಾಡಿದ್ದಾರೆ ಎಂದರೆ ಇವರು ನಿಪುಣ ಹಾಗು ವೃತ್ತಿಪರ ಬೇಟೆಗಾರರೇ ಆಗಿದ್ದಾರೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.


ಪ್ರಾಣಿಗಳ ಚರ್ಮವನ್ನು ಹ್ಯಾಂಡ್ ಬ್ಯಾಗ್, ಡ್ರೆಸ್ ಮೆಟೀರಿಯಲ್, ಡೆಕೋರೆಟಿವ್ ಐಟಮ್ಸ್, ಫ್ಯಾಷನ್ ಮೆಟೀರಿಯಲ್ ಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹುಲಿಯ ಮೂಳೆಯನ್ನು ಚೀನೀಯರು ನಾನಾ ರೀತಿಯ ಆಯುರ್ವೇದ ಔಷಧಿ ತಯಾರಿಕೆಗೆ ಬಳಸುತ್ತಾರೆ ಹಾಗಾಗಿ ಹುಲಿಯ ಮೂಳೆಗೆ ಅಲ್ಲಿ ಭಾರೀ  ಬೇಡಿಕೆ ಇದೆ, ಅಲ್ಲದೆ ಹುಲಿಯ ಉಗುರು ಹಾಗು ದಂತಗಳನ್ನು  ತಾಯತ ಹಾಗು ಯಂತ್ರಗಳಲ್ಲಿ ಬಳಸುತ್ತಾರೆ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಬೇಟೆಗಾರರು ವನ್ಯಜೀವಿಗಳಿಗೆ ಕಂಟಕವಾಗಿದ್ದಾರೆ.

Published by:G Hareeshkumar
First published: