ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ಪರಾರಿಯಾಗಿದ್ದ ಕರಡಿ ತಿಂಗಳಾದರೂ ಸೆರೆಯಾಗಿಲ್ಲ. ಹಳ್ಳಿಗಳ ಸಮೀಪವೇ ಗಿರಕಿ ಹೊಡೆಯುತ್ತಿರುವ ಕರಡಿ ಮಾತ್ರ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸಿ ಪರಾರಿಯಾಗುತ್ತಿದೆ. ರಾತ್ರಿ ವೇಳೆ ಹಳ್ಳಿಗಳಿಗೆ ಲಗ್ಗೆ ಇಡುವ ಕರಡಿ ಬೆಳಗಾಗುವುದರೊಳಗೆ ಕಣ್ಮರೆಯಾಗುತ್ತಿದೆ. ಸಾರ್ವಜನಿಕರಲ್ಲಿ ಆತಂಕ ಶುರುವಾಗಿದ್ದು, ಖತರ್ನಾಕ್ ಕರಡಿ ಸೆರೆಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದ ರೆಸ್ಕ್ಯೂ ಸೆಂಟರ್ನಿಂದ ಕಳೆದ ತಿಂಗಳು 28ನೇ ತಾರೀಖು ಕರಡಿ ಪರಾರಿಯಾಗಿತ್ತು. ತುಮಕೂರಿನಿಂದ ರಕ್ಷಣೆ ಮಾಡಿ ತರಲಾಗಿದ್ದ ಕರಡಿಯನ್ನು ಬೋನ್ನಿಂದ ಪಂಜರಕ್ಕೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ಪರಾರಿಯಾಗಿತ್ತು. ಅಂದಿನಿಂದ ಹಳ್ಳಿ, ನಗರ ಪ್ರದೇಶ ಹೀಗೆ ಸಿಕ್ಕ ಸಿಕ್ಕ ಕಡೆ ದಾಂಗುಡಿ ಇಡುತ್ತಿರುವ ಕರಡಿ ಸುಮಾರು ಎಂಟು ಮಂದಿಯ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ಅದೃಷ್ಟವಶಾತ್ ಯಾರೋಬ್ಬರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಆದರೂ ಪದೇ ಪದೇ ಕರಡಿ ಜನವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಅರಣ್ಯ ಅಧಿಕಾರಿಗಳು ಕರಡಿ ಸೆರೆ ಹಿಡಿಯುವಲ್ಲಿ ವಿಫಲವಾಗಿದ್ದಾರೆ. ಕರಡಿ ಕಾಣಿಸಿಕೊಂಡ ಪ್ರದೇಶದಲ್ಲಿ ಕಾಟಾಚಾರಕ್ಕೆ ಎಂಬಂತೆ ಶೋಧ ನಡೆಸುತ್ತಾರೆ. ಕರಡಿ ಪತ್ತೆಯಾಗಿಲ್ಲ ಎಂದು ಸುಮ್ಮನೆ ಹೊರಟು ಹೋಗುತ್ತಾರೆ. ಕರಡಿಯನ್ನು ಸೆರೆ ಹಿಡಿಯಲು ಪ್ರಾಮಾಣಿಕ ಪ್ರಯತ್ನವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿಲ್ಲ ಎಂದು ಸಾರ್ವಜನಿಕ ಕಿರಣ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಆಂಟಿಬಯೋಟಿಕ್ ಪೌಡರ್ಗೆ Remdesivir ಲೇಬಲ್ ಹಚ್ಚಿ ಮಾರುತ್ತಿದ್ದ ಸ್ಟಾಫ್ ನರ್ಸ್
ಇನ್ನು, ಬನ್ನೇರುಘಟ್ಟ ಜೈವಿಕ ಉದ್ಯಾನವನದಿಂದ ತಪ್ಪಿಸಿಕೊಂಡು ಊರೂರು ಅಲೆಯುತ್ತಿರುವ ಕರಡಿಯನ್ನು ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ದಿನಕ್ಕೊಂದು ಗ್ರಾಮದ ಬಳಿ ಪ್ರತ್ಯಕ್ಷವಾಗುತ್ತಿರುವ ಕರಡಿ ಜನ ಸಾಮಾನ್ಯರಲ್ಲಿ ಎಲ್ಲಿಲ್ಲದ ಭೀತಿ ಮೂಡಿಸಿದೆ. ಪದೇ ಪದೇ ಹಳ್ಳಿಗಳ ಬಳಿ ಕರಡಿ ಕಾಣಿಸಿಕೊಳ್ಳುತ್ತಿರುವುದರಿಂದ ಕುರಿ ಮತ್ತು ದನಗಾಹಿಗಳು ಭಯದಲ್ಲಿ ಹೊಲ ಗದ್ದೆಗಳತ್ತ ಹೋಗಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ . ಈ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೂ ತರಲಾಗಿದ್ದು, ಇಲ್ಲಿಯವರೆಗೆ ಪುಂಡ ಕರಡಿ ಸೆರೆಯಾಗಿಲ್ಲ. ಹಾಗಾಗಿ ಅರಣ್ಯ ಅಧಿಕಾರಿಗಳು ನಿರ್ಲಕ್ಷ್ಯ ಬಿಟ್ಟು ಪುಂಡ ಕರಡಿಯನ್ನು ಕೂಡಲೇ ಸೆರೆ ಹಿಡಿದು ಜನರಲ್ಲಿ ಮನೆ ಮಾಡಿರುವ ಬೀತಿಯನ್ನು ದೂರ ಮಾಡಬೇಕಿದೆ ಎಂದು ಮತ್ತೊಬ್ಬ ಸಾರ್ವಜನಿಕ ಮಂಜುನಾಥ್ ಒತ್ತಾಯಿಸಿದ್ದಾರೆ.
ಒಟ್ಟಿನಲ್ಲಿ, ಕೊರೊನಾ ಅರ್ಭಟಕ್ಕೆ ಕಂಗಲಾಗಿರುವ ಆನೇಕಲ್ ತಾಲ್ಲೂಕಿನ ಜನ ಇದೀಗ ಕರಡಿ ಹಾವಳಿಗೆ ತತ್ತರಿಸಿ ಹೋಗಿದ್ದು, ಅದ್ಯಾವಾಗ ಕರಡಿ ಸೆರೆ ಹಿಡಿಯುತ್ತಾರೆ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಹಾಗಾಗಿ ಇನ್ನಾದರೂ ಅರಣ್ಯ ಅಧಿಕಾರಿಗಳು ಪುಂಡ ಕರಡಿಯನ್ನು ಸೆರೆ ಹಿಡಿಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಆದೂರು ಚಂದ್ರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ