ಜಾನುವಾರುಗಳಿಗೆ ಕಾಲು ಬಾಯಿ ರೋಗ; ಕೊರೊನಾ ನಡುವೆ ರೈತರಿಗೆ ಮತ್ತೊಂದು ಬರೆ!

ಗ್ರಾಮದ ಹಸು, ಕುರಿ ಮೇಕೆಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡಿದೆ. ಕಾಲು ಬಾಯಿ ರೋಗದಿಂದ ಹತ್ತಕ್ಕೂ ಅಧಿಕ ದನಗಳು ಸಾವನ್ನಪ್ಪಿದ್ದು , ಇಪ್ಪತ್ತಕ್ಕೂ ಅಧಿಕ ದನಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿ ಜರ್ಜರಿತವಾಗಿವೆ.

ದೇಸಿ ಹಸು

ದೇಸಿ ಹಸು

 • Share this:
  ಆನೇಕಲ್ : ಜಾನುವಾರುಗಳನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಬಡ ಜನತೆಗೆ ಕೊರೊನಾ ಲಗ್ಗೆಯಿಟ್ಟು ತಲ್ಲಣಗೊಳಿಸಿದೆ. ಮತ್ತೊಂದು ಕಡೆ ಜಾನುವಾರುಗಳಿಗೆ ವಕ್ಕರಿಸಿರುವ ಸಾಂಕ್ರಾಮಿಕ ರೋಗ ಜಾನುವಾರುಗಳನ್ನು ಒಂದರ ಮೇಲೊಂದರಂತೆ ಬಲಿ ಪಡೆಯುತ್ತ ಗ್ರಾಮದ ಜನತೆಗೆ ಯಮರೂಪಿಯಾಗಿದೆ. ಮಾರಕ ಕಾಲುಬಾಯಿ ರೋಗಕ್ಕೆ ಹತ್ತಾರು ಜಾನುವಾರುಗಳು ಸಾವಿಗೀಡಾಗಿದ್ದು, ರೈತರು ಗೋಳು ಕೇಳುವವರು ಇಲ್ಲವಾಗಿದೆ. 
  ಮಹಾ ಮಾರಿ ಕೊರೊನಾ ಕಾಟದ ನಡುವೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಅರಣ್ಯದಂಚಿನ ಗ್ರಾಮ‌ ಹಕ್ಕಿಪಿಕ್ಕಿ ಕಾಲೋನಿಯಲ್ಲಿ ಜಾನುವಾರುಗಳಲ್ಲಿ ಕಾಲುಬಾಯಿ ಕಾಣಿಸಿಕೊಂಡು ತಲ್ಲಣ ಮೂಡಿಸಿದೆ.

  ಸದ್ಯ ಹಕ್ಕಿಪಿಕ್ಕಿ ಕಾಲೋನಿ ಗ್ರಾಮದಲ್ಲಿ ಮೂವತ್ತಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.ಇದರ ನಡುವೆ ಗ್ರಾಮದ ಹಸು, ಕುರಿ ಮೇಕೆಗಳಲ್ಲಿ ಕಾಲು ಬಾಯಿ ರೋಗ ಕಾಣಿಸಿಕೊಂಡಿದೆ. ಕಾಲು ಬಾಯಿ ರೋಗದಿಂದ ಹತ್ತಕ್ಕೂ ಅಧಿಕ ದನಗಳು ಸಾವನ್ನಪ್ಪಿದ್ದು , ಇಪ್ಪತ್ತಕ್ಕೂ ಅಧಿಕ ದನಗಳು ಕಾಲುಬಾಯಿ ರೋಗಕ್ಕೆ ತುತ್ತಾಗಿ ಜರ್ಜರಿತವಾಗಿವೆ. ಆದರೆ ರೋಗ ಪೀಡಿತ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ಜೊತೆಗೆ ಈ ರೋಗದಿಂದಾಗಿ ಜಾನುವಾರುಗಳನ್ನೆ ನಂಬಿಕೊಂಡು ಬದುಕುತ್ತಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

  ಹಾಗಾಗಿ ಈ ಕೂಡಲೇ ಸರ್ಕಾರ ಈ ಕುರಿತು ಎಚ್ಚೆತ್ತುಕೊಳ್ಳಬೇಕೆಂಬುದು ಸ್ಥಳೀಯ ವಾಸಿ ಬೈರಮ್ಮನ ಅಗ್ರಹವಾಗಿದೆ . ಇನ್ನು ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗ ಸಾಂಕ್ರಾಮಿಕ ರೋಗವಾಗಿದೆ. ಈ ರೋಗ ಬಂದರೆ ಸಾಮಾನ್ಯವಾಗಿ ಜಾನುವಾರುಗಳು ಆಹಾರ ನಿಲ್ಲಿಸುತ್ತವೆ, ಜೊತೆಗೆ ಅವುಗಳ ಕಾಲಿನ ಗೊರಸು ಕೊಳೆಯುತ್ತದೆ . ಈ ಲಕ್ಷಣಗಳು ಇದೀಗ ಗ್ರಾಮದ ಬಹುತೇಕ ರಾಸುಗಳಲ್ಲಿ ಕಾಣಿಸಿದ್ದು ಅವುಗಳನ್ನ ಕಳೆದುಕೊಳುವ ಭೀತಿಯಲ್ಲಿ ಗ್ರಾಮಸ್ಥರು ಇದ್ದಾರೆ. ‌

  ಇದನ್ನೂ ಓದಿ: White Fungus: ಬ್ಲ್ಯಾಕ್ ಫಂಗಸ್ ಬೆನ್ನಲ್ಲೇ ವೈಟ್ ಫಂಗಸ್ ಪತ್ತೆ; ಅತ್ಯಂತ ಅಪಾಯಕಾರಿಯಾದ ಇದರ ಲಕ್ಷಣಗಳೇನು?

  ಅದ್ರಲ್ಲು ಹಕ್ಕಿಪಿಕ್ಕಿ ಕಾಲೋನಿ ವಾಸಿಗಳು ತಮ್ಮ ಜಾನುವಾರುಗಳನ್ನು ಮೇಯಿಸಲು ಬನ್ನೇರುಘಟ್ಟ ಅರಣ್ಯ ಆಸುಪಾಸಿನಲ್ಲಿ ಬಿಡುತ್ತಾರೆ . ಇದರಿಂದ ಸುತ್ತಮುತ್ತಲಿನ ಗ್ರಾಮಗಳ ಜಾನುವಾರುಗಳಿಗೆ ಈ ಸೋಂಕು ಹರಡುವ ಭೀತಿ ಸಹ ಇದ್ದು ,  ಈ ಮಾರಕ ಕಾಲುಬಾಯಿ ರೋಗ ಕಾಡು ಪ್ರಾಣಿಗಳಿಗೆ ತಗುಲಿದರೆ ವನ್ಯಜೀವಿಗಳನ್ನು ರಕ್ಷಣೆ ಮಾಡುವುದು ಕಷ್ಟವಾಗಲಿದೆ . ಜೊತೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಸ್ಯಾಹಾರಿ ಸಫಾರಿ ಸಹ ಹಕ್ಕಿಪಿಕ್ಕಿ ಕಾಲೋನಿಗೆ ಹೊಂದಿಕೊಂಡಂತೆ ಇದ್ದು , ಒಂದು ವೇಳೆ ಸಸ್ಯಹಾರಿ ಸಫಾರಿಗೆ ಕಾಲುಬಾಯಿ ರೋಗ ಹರಡಿದರೆ ಅಪರೂಪದ ವನ್ಯಜೀವಿಗಳು ಬಲಿಯಾಗುವ ಸಾದ್ಯತೆ ಇದೆ . ಹಾಗಾಗಿ ಕೂಡಲೇ ಪಶುವೈದ್ಯರು ಕಾಲುಬಾಯಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತ ಜಯರಾಮ್ ಒತ್ತಾಯಿಸಿದ್ದಾರೆ .

  ಒಟ್ನಲ್ಲಿ ಮಹಾಮಾರಿ ಕೊರೊನಾ ಜನರ ನಿದ್ದೆಗಡಿಸಿದೆ . ಇದೀಗ ಕಾಲುಬಾಯಿ ರೋಗ ಕಾಣಿಸಿಕೊಂಡು ಜಾನುವಾರುಗಳಿಗೆ ಮಾರಕವಾಗಿದ್ದು , ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಾಲುಬಾಯಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯ ಚಿಕಿತ್ಸೆ ಒದಗಿಸಬೇಕಿದೆ.

  ವರದಿ : ಆದೂರು ಚಂದ್ರು
  Published by:Kavya V
  First published: