ಕೊಡಗಿನಲ್ಲಿ ಶಾಶ್ವತ ಪರಿಹಾರಕ್ಕಾಗಿ ಜೆಡಿಎಸ್ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ಸಂತ್ರಸ್ಥರು

ಕೊಡಗು ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಸಂತ್ರಸ್ಥರು ನಾಪೋಕ್ಲಿನ ಹಳೆ ತಾಲೂಕಿನಿಂದ ಮೂರ್ನಾಡುವರೆಗೆ 14 ಕಿಲೋ ಮೀಟರ್ ಕಾಲ್ನಡಿಗೆ ಜಾಥಾ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನೆರೆಗೆ ಮನೊಂದು ಕುಸಿದು ಬಿದ್ದಿರುವುದು

ನೆರೆಗೆ ಮನೊಂದು ಕುಸಿದು ಬಿದ್ದಿರುವುದು

  • Share this:
ಕೊಡಗು(ಜೂ.22): ಪ್ರವಾಹದಲ್ಲಿ ಮನೆ ಕಳೆದುಕೊಂಡು ವರ್ಷ ಕಳೆಯುತ್ತಾ ಬಂದಿದ್ದರೂ ಸಂತ್ರಸ್ಥರಿಗೆ ಮಾತ್ರ ಇಂದಿಗೂ ಸೂರಿನ ಮಾತಿರಲಿ ಕನಿಷ್ಠ ಪರಿಹಾರವೂ ಸಿಕ್ಕಿಲ್ಲ. ಮಳೆಗಾಲ ಮತ್ತೆ ಆರಂಭವಾಗಿದ್ದು, ನದಿ ತೀರದ ನೂರಾರು ಕುಟುಂಬಗಳಿಗೆ ತೀವ್ರ ಆತಂಕ ಸೃಷ್ಟಿಯಾಗಿದೆ. ಹೀಗಾಗಿಯೇ ಸಂತ್ರಸ್ಥರು ರಾಜಕೀಯ ಪಕ್ಷದ ಸಹಕಾರದಿಂದ 14 ಕಿ.ಮೀ ಮೀಟರ್ ಪಾದಯಾತ್ರೆ ನಡೆಸಿದರು.

ಕೊಡಗಿನ ಕುಲದೇವತೆ ಕಾವೇರಿ ನದಿ ಉಕ್ಕಿ ಹರಿದು ಜಿಲ್ಲಾ ವ್ಯಾಪ್ತಿಯಲ್ಲಿ ಹರಿಯುವ ನದಿ ಪಾತ್ರದಲ್ಲಿನ ಹತ್ತಾರು ಕುಟುಂಬಗಳು ಸಂಪೂರ್ಣ ಮುಳುಗಡೆಯಾಗಿದ್ದವು. ಮೂರು ತಾಲೂಕಿನ ಹಲವಾರು ಕುಟುಂಬಗಳು ಮನೆ ಮಠಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದವು. ನದಿಪಾತ್ರದ ಭೂಮಿಯಲ್ಲಿ ನಿರ್ಮಿಸಿದ್ದ ಮನೆಗಳು ಮುಳುಗಡೆಯಾಗಿದ್ದವು.

ಸರ್ಕಾರ ಪರಿಹಾರ ನೀಡಲು ಮೀನಾಮೇಷ ಎಣಿಸಿತು. ಹೀಗಾಗಿ ಬರೋಬ್ಬರಿ 65 ದಿನಗಳ ನಿರಂತರ ತೀವ್ರ ಹೋರಾಟ ನಡೆಸಿದ್ದ ಸೋಮವಾರಪೇಟೆ ತಾಲ್ಲೂಕಿನ ಬರಡಿ, ನೆಲ್ಯಹುದಿಕೇರಿ, ಕುಂಬಾರಗುಂಡಿ ಸೇರಿದಂತೆ ಹಲವು ಗ್ರಾಮಗಳ ನಿರಾಶ್ರಿತರು ನಿವೇಶನ ಪಡೆದುಕೊಳ್ಳುವ ಹಂತ ತಲುಪಿದ್ದರು.

ವಿರಾಜಪೇಟೆ ತಾಲ್ಲೂಕಿನ ಕೊಟ್ಟಮುಡಿ, ಕೊಂಡಂಗೇರಿ, ಗುಹ್ಯ, ಕಕ್ಕಟ್ಟುಕಾಡು, ಕರಡಿಗೋಡು ಸೇರಿದಂತೆ ಹಲವು ಗ್ರಾಮಗಳ ಜನರಿಗೆ ತಾತ್ಕಾಲಿಕ 10 ಸಾವಿರ ಪರಿಹಾರ ಬಿಟ್ಟರೆ ಮತ್ಯಾವುದೇ ಪರಿಹಾರ ಕೊಟ್ಟಿಲ್ಲ. ಬಿದ್ದು ಹೋದ ಮನೆಗಳ ಉಳಿದ ಗೋಡೆಗಳಿಗೆ ಬಿದಿರು ಬೊಂಬುಗಳನಿಟ್ಟು, ಟಾರ್ಪಲ್ ಮುಚ್ಚಿ ಅವುಗಳಲ್ಲಿ ಮತ್ತೆ ಬದುಕು ದೂಡುತಿದ್ದಾರೆ.

ಮಳೆಗಾಲ ಆರಂಭವಾಗಿರುವುದರಿಂದ ಅಲ್ಲಿಂದ ಜಾಗ ಖಾಲಿ ಮಾಡುವಂತೆ ಜಿಲ್ಲಾಡಳಿತ ನದಿ ತಟದ ಕುಟುಂಬಗಳಿಗೆ ಸೂಚನೆ ನೀಡಿದೆ. ಆದರೆ ಸಂತ್ರಸ್ಥರು ಮನೆ ಬಾಡಿಗೆಯೂ ಇಲ್ಲದೆ ಪರ್ಯಾಯ ವ್ಯವಸ್ಥೆಯೂ ಇಲ್ಲದೆ ಎಲ್ಲಿಗೆ ಹೋಗೋದು. ಮತ್ತೆ ಪ್ರವಾಹ ಬಂದರೆ ನಾವು ಇಲ್ಲಿಯೇ ಸಾಯುತ್ತೇವೆ ಎಂದು ಸಂತ್ರಸ್ಥೆ ಸುಲೇಖಾ ನೋವಿನಿಂದ ಆಕ್ರೋಶ ಹೊರಹಾಕುತ್ತಿದರು.

ಒಂದೆಡೆ ಮಳೆಗಾಲ ಆರಂಭವಾಗಿ ಸಂತ್ರಸ್ಥರು ತೀವ್ರ ಆತಂಕದಲ್ಲೇ ಅತಂತ್ರ ಬದುಕು ನಡೆಸುತ್ತಿದ್ದರೆ, ಮತ್ತೊಂದೆಡೆ ಸಂತ್ರಸ್ಥರಿಗೆ ಪರಿಹಾರ ಮತ್ತು ಸೂರು ನೀಡದ ಸರ್ಕಾರದ ನೀತಿಯನ್ನು ಖಂಡಿಸಿ ಕೊಡಗು ಜಿಲ್ಲಾ ಜೆಡಿಎಸ್ ನೇತೃತ್ವದಲ್ಲಿ ಸಂತ್ರಸ್ಥರು ನಾಪೋಕ್ಲಿನ ಹಳೆ ತಾಲೂಕಿನಿಂದ ಮೂರ್ನಾಡುವರೆಗೆ 14 ಕಿಲೋ ಮೀಟರ್ ಕಾಲ್ನಡಿಗೆ ಜಾಥಾ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ :  ಕೊರೋನಾ ವಾರಿಯರ್ಸ್​ ಮೃತಪಟ್ಟರೆ 30 ಲಕ್ಷ ರೂ ವಿಮೆ : ರಾಜ್ಯ ಸರ್ಕಾರ ಆದೇಶ

ಹದಿನಾಲ್ಕು ಕಿಲೋ ಮೀಟರ್ ಪಾದಾಯಾತ್ರೆ ಉದ್ದಕ್ಕೂ ರಾಜ್ಯ ಸರ್ಕಾರದ ವಿಳಂಭ ನೀತಿ ವಿರುದ್ಧ ಘೋಷಣೆ ಕೂಗಿದರು. ಬಳಿಕ ಮೂರ್ನಾಡು ಪಟ್ಟಣದ ಸಮಾವೇಶಗೊಂಡು ಸರ್ಕಾರ ಒಂದು ವರ್ಷದಿಂದ ಸಂತ್ರಸ್ಥರನ್ನು ಕಡೆಗಣಿಸಿದೆ. ಕೂಡಲೇ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್ ಎಚ್ಚರಿಸಿದರು.

ಒಟ್ಟಿನಲ್ಲಿ ಹತ್ತು ತಿಂಗಳ ಹಿಂದೆ ಪ್ರವಾಹದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದರೆಂಬ ಕಾರಣಕ್ಕೆ ಇಂದಿಗೂ ಸೂರಿನ ಮಾತಿರಲಿ ಕನಿಷ್ಠ ಪರಿಹಾರವನ್ನೂ ನೀಡಿಲ್ಲ. ಆದರೆ. ಮತ್ತೆ ಪ್ರವಾಹ ಎದುರಾಗಬಹುದೆಂದು ಜಾಗ ಖಾಲಿ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡುತ್ತಿರುವುದಕ್ಕೆ ಆಕ್ರೋಶವೂ ವ್ಯಕ್ತವಾಗಿದೆ. ಇನ್ನಾದರೂ ಸರ್ಕಾರ ಸಂತ್ರಸ್ಥರ ವಿಷಯದಲ್ಲಿ ಕಣ್ಣು ತೆರೆಯುತ್ತಾ ಕಾದು ನೋಡಬೇಕಿದೆ.
First published: