ಚಿಕ್ಕೋಡಿ(ಸೆಪ್ಟೆಂಬರ್. 17): ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿ ಭೀಕರ ಪ್ರವಾಹ ಬಂದು ಒಂದು ವರ್ಷ ಗತಿಸಿ ಮತ್ತೆ ಈ ವರ್ಷವೂ ಪ್ರವಾಹ ಬಂದು ಹೋದರು ಸಂತ್ರಸ್ಥರ ಬವಣೆ ಮಾತ್ರ ತಪ್ಪಿಲ್ಲ. ಸರಕಾರ ಪ್ರವಾಹ ಸಂತ್ರಸ್ಥರ ಪರಿಹಾರದ ಬಗ್ಗೆ ಸಾಕಷ್ಟು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ಆದರೆ, ಸಂತ್ರಸ್ಥರಿಗೆ ಸರಕಾರ ನೀಡಿರುವ ಭರವಸೆಗಳು ಭರವಸೆಗಳಾಗಿಯೇ ಉಳಿದಿವೆ. ಪರಿಹಾರದ ಹಣ ಸಿಗದೆ ಸಂತ್ರಸ್ಥರು ನಿರ್ಮಿಸಿರುವ ಮನೆಗಳು ಅರ್ಧಕ್ಕೆ ನಿಂತಿವೆ. ಸದ್ಯ ಉತ್ತರ ಕರ್ನಾಟಕದ ಪ್ರವಾಹಕ್ಕೆ ಒಂದು ವರ್ಷ ಆಗಿದೆ. ಪ್ರವಾಹ ಬಂದ ಸಂದರ್ಭದಲ್ಲಿ ಸಂತ್ರಸ್ಥರಿಗೆ ಯಾವುದೇ ತೊಂದರೆ ಆಗುವದಿಲ್ಲ, ಮನೆ ಕಳೆದುಕೊಂಡವರಿಗೆ ಸರಕಾರ ಮನೆ ನಿರ್ಮಿಸಲು 5 ಲಕ್ಷ ಪರಿಹಾರ ನೀಡುತ್ತೆ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿ ಹೋಗಿ ಒಂದು ವರ್ಷ ಕಳೆದಿದ್ದರೂ ಚಿಕ್ಕೋಡಿ, ರಾಯಬಾಗ ಹಾಗೂ ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ ಹಾಗೂ ಹುಕ್ಕೇರಿ ತಾಲೂಕಿನ ಹೀರಣ್ಯಕೇಶಿ ನದಿ ತೀರದ ಬಹುತೇಕ ಜನರು ಇನ್ನೂ ಸುರು ಇಲ್ಲದೆ ಪಡ ಬಾರದ ಕಷ್ಟ ಪಡುತ್ತಿದ್ದಾರೆ.
ಸರಕಾರ ನೀಡಿರುವ ಪರಿಹಾರ ಸಿಗದೆ ಒಡೆದ ಮನೆಗಳಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಸರಕಾರದ ಖಜಾನೆ ಖಾಲಿಯಾಗಿರುವ ಕಾರಣ ಬಾಕಿ ಬರಬೇಕಿದ್ದ ಪರಿಹಾರ ಸಿಗದೆ ಸರಕಾರ ನೀಡಿರುವ ಅರ್ಧ ಪರಿಹಾರದಿಂದ ಅರ್ಧ ಮನೆ ನಿರ್ಮಾಣ ಮಾಡಿಕೊಂಡು ಸಂತ್ರಸ್ಥರು ಪಡಬಾರದ ಕಷ್ಟ ಪಡುತ್ತಿದ್ದಾರೆ. ಸರಕಾರ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಲು ಹಣ ಬಿಡುಗಡೆ ಮಾಡುತ್ತೆ ಎಂದು ಹೇಳಿದ್ದರೂ ತಾಂತ್ರಿಕ ಸಮಸ್ಯೆಯ ನೆಪ ಹೇಳಿ ಸಾವಿರಾರು ಜನರಿಗೆ ಪರಿಹಾರ ಸಿಕ್ಕಿಲ್ಲ.
ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಸುಸ್ತಾಗಿರುವ ಬಡ ಜನ ಬೇಡಪ್ಪ ಸರಕಾರದ ಹಣ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಅದಲ್ಲದೆ ಒಂದು ಹಂತದ ಹಣ ಬಿಡುಗಡೆ ಆದ ಫಲಾನುಭವಿಗಳೂ ಎರಡನೇ ಕಂತು ಬಿಡುಗಡೆ ಆಗದ ಹಿನ್ನೆಲೆಯಲ್ಲಿ ಅರ್ಧಕ್ಕೆ ಮನೆಗಳ ನಿರ್ಮಾಣ ಕಾರ್ಯವನ್ನ ಸ್ಥಗಿತಗೊಳಿಸಿದ್ದಾರೆ. ಇನ್ನೂ ಈ ಬಗ್ಗೆ ಅಧಿಕಾರಿಗಳನ್ನ ಕೇಳಿದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ರಾಜೀವ ಗಾಂಧಿ ನಿಗಮದಿಂದ ಹಣ ಬಂದಿಲ್ಲ ಎನ್ನುತ್ತಾರೆ.
ಒಟ್ಟಿನಲ್ಲಿ ಸರಕಾರ ಪ್ರವಾಹ ಸಂತ್ರಸ್ಥರಿಗೆ ಹಣ ನೀಡಿದ್ದೆವೆ ಎಂದು ಹೇಳುತ್ತಲೆ ಇದೆ. ಆದರೆ, ಇತ್ತ ಕೃಷ್ಣಾ ಘಟಪ್ರಭಾ, ಮಲಪ್ರಭಾ ನದಿ ತೀರದ ಗ್ರಾಮದ ಸಂತ್ರಸ್ಥರ ಅಳಲು ಇನ್ನು ಮುಗಿದಿಲ್ಲ. ನೆರೆ ಬಂದು ಹೋಗಿ ವರ್ಷ ಕಳೆದರೂ ಸಹ ಸರಿಯಾದ ಸೂರು ನಿರ್ಮಾಣ ಮಾಡಿಕೊಳ್ಳಲು ಸಂತ್ರಸ್ಥರಿಗೆ ಇನ್ನೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನಾದರೂ ಸರ್ಕಾರದಿಂದ ಬರುವ ಪರಿಹಾರ ಬೇಗ ಬರಲಿ ಎನ್ನುವುದು ಸಂತ್ರಸ್ಥರ ಆಗ್ರಹ.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ