2019ರಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಇನ್ನೂ ಸಿಗದ ಪರಿಹಾರ; ದನದ ಕೊಟ್ಟಿಗೆಯಲ್ಲಿ ಸಂತ್ರಸ್ತರ ವಾಸ

ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅತ್ತ ಪರ್ಯಾಯ ವ್ಯವಸ್ಥೆಗಳಿಲ್ಲದೇ ದನದ ಹಟ್ಟಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಕುಟುಂಬಗಳ ಬಗ್ಗೆ ಸರ್ಕಾರ ಕಣ್ಣೆತ್ತಿ ನೋಡುವ ಕಾರ್ಯ ಮಾಡಬೇಕಾಗಿದೆ.

ನೆರೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರ ಶೋಚನೀಯ ಬದುಕು.

ನೆರೆಯಿಂದ ಮನೆ ಕಳೆದುಕೊಂಡ ನಿರಾಶ್ರಿತರ ಶೋಚನೀಯ ಬದುಕು.

  • Share this:
ಕಾರವಾರ; ರಾಜ್ಯದಲ್ಲಿ ಅದೆಷ್ಟೋ ಕುಟುಂಬಗಳು ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡು ವರ್ಷಗಳು ಕಳೆದಿವೆ. ಆದರೆ ಬಹುತೇಕ ಸಂತ್ರಸ್ತರಿಗೆ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಗಂಗಾವಳಿ ನದಿ ಪ್ರವಾಹಕ್ಕೆ ಸಿಲುಕಿದ ಕೊಡ್ಸಣಿ ಗ್ರಾಮದ ಕೆಲ ಕುಟುಂಬಗಳಿಗೆ ಪರಿಹಾರ ಇನ್ನೂ ಸಿಕ್ಕಿಲ್ಲ. ಅತ್ತ ಪರಿಹಾರವೂ ಇಲ್ಲದೇ, ಮನೆಗಳನ್ನು ನಿರ್ಮಿಸಿಕೊಳ್ಳಲಾಗದೇ ಸಂತ್ರಸ್ತುರು ದನದ ಕೊಟ್ಟಿಗೆಯಲ್ಲಿ ವಾಸಮಾಡುವ ಶೋಚನೀಯ ಸ್ಥಿತಿ ಬಂದೊದಗಿದೆ.

2019 ಆಗಸ್ಟ್ 5ರಂದು ಉತ್ತರಕನ್ನಡ ಜಿಲ್ಲೆಯಾದ್ಯಂತ ಬಾರೀ ಮಳೆಯಾಗಿತ್ತು. ಅಂಕೋಲಾದ ಗಂಗಾವಳಿ ನದಿಯಲ್ಲಿ ಪ್ರವಾಹ ಬಂದು ನೂರಾರು ಮನೆಗಳಿಗೆ ನೀರು ನುಗ್ಗಿತ್ತು. ನೀರು ನುಗ್ಗಿದ ಪರಿಣಾಮವಾಗಿ ಬಡ ಹಾಲಕ್ಕಿ ಜನಾಂಗದವರ ಮನೆಗಳು ಕುಸಿದು ಬಿದ್ದಿತ್ತು. ಹೇಗೋ ಇಲ್ಲಿನ ಜನರು ತಮ್ಮ ದನಕರುಗಳು, ಮಕ್ಕಳೊಂದಿಗೆ ಸುರಕ್ಷಿತ ಪ್ರದೇಶದಲ್ಲಿ ಆಶ್ರಯ ಪಡೆದಿದ್ದರು. ಆದರೆ ಇದೀಗ ಪ್ರವಾಹ ಬಂದು ಒಂದು ವರ್ಷ ನಾಲ್ಕು ತಿಂಗಳು ಕಳೆದಿವೆ. ಇದುವರೆಗೆ ಇಲ್ಲಿನ ಜನರಿಗೆ ಪರಿಹಾರ ದೊರಕಿಲ್ಲ. ಅತ್ತ ಮನೆಯೂ ಇಲ್ಲದೇ ಸಂತ್ರಸ್ತರು ದನದ ಕೊಟ್ಟಿಗೆಯಲ್ಲಿ ವಾಸ ಮಾಡುತ್ತಿರುವ ಶೋಚನೀಯ ಸ್ಥಿತಿ ಇದೆ.

ಗಂಗಾವಳಿ ನದಿ ತೀರದಲ್ಲಿ ಇರುವವರೆಲ್ಲರೂ ಬಡ ಹಾಲಕ್ಕಿ ಜನಾಂಗದವರೇ ಆಗಿದ್ದಾರೆ. ಪ್ರತಿ ಬಾರೀಯೂ ಇಲ್ಲಿ ಮಳೆಗಾಲದಲ್ಲಿ ಇಲ್ಲಿನ ಜನರು ಸಂಕಷ್ಟ ಅನುಭವಿಸ್ತಾರೆ. ಆದರೆ ಕಳೆದೆರಡು ವರ್ಷಗಳಿಂದ ಇಲ್ಲಿನ ಜನರು ಗಂಗಾವಳಿ ನದಿಯಲ್ಲಿ ಬರುತ್ತಿರುವ ಪ್ರವಾಹದಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ಬಾರೀ ಕೂಡ ಮನೆ ಕಳೆದುಕೊಂಡ ಸಣ್ಣಮ್ಮ ನಾಗಪ್ಪ ಗೌಡ, ದೇವು ನಾಗಪ್ಪ ಗೌಡ, ಸೋಮಿ ಸುರೇಶ ಗೌಡ ಎಂಬುವವರಿಗೆ ಸರ್ಕಾರದ ವತಿಯಿಂದ ಪರಿಹಾರ ನೀಡಿಲ್ಲ. ಪ್ರವಾಹ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದ ಜನಪ್ರತಿನಿಧಿಗಳು, ಅಧಿಕಾರಿಗಳು ಸಂತ್ರಸ್ತರ ವಾಸ್ತವ ಸ್ಥಿತಿ ನೋಡಿದ್ದಾರೆ. ತಮಗೆ ಪರಿಹಾರ ನೀಡುವಂತೆ ಇವರೆಲ್ಲರೂ ಮನವಿ ಕೂಡ ನೀಡಿದ್ದಾರೆ. ಆದರೆ ಯಾವುದೇ ಪರಿಹಾರ ದೊರಕಿಲ್ಲ.

ಇದನ್ನು ಓದಿ: ಅತ್ಯಾಚಾರಕ್ಕೆ ಯತ್ನಿಸಿ ಬಾಲಕಿಯ ಬರ್ಬರ ಹತ್ಯೆ; ನ್ಯಾಯಕ್ಕೆ ಆಗ್ರಹಿಸಿ ಮಂಡ್ಯ ಎಸ್​ಪಿ ಕಚೇರಿ ಎದುರು ಪ್ರತಿಭಟನೆ

ಅತ್ತ ಇರುವ ಮನೆಗಳನ್ನ ಕಳೆದುಕೊಂಡು ಕುಟುಂಬದವರೊಂದಿಗೆ ದನದ ಕೊಟ್ಟಿಗೆಯಲ್ಲಿ ವಾಸವಾಗಿದ್ದಾರೆ. ಈಗ ಇರುವ ಮಣ್ಣಿನ ಮನೆ ಕೂಡ ಯಾವ ಸಂದರ್ಭದಲ್ಲಿ ಬೀಳುತ್ತೋ ಗೊತ್ತಿಲ್ಲ. ತಮಗೆ ಎಲ್ಲಿಯಾದರೂ ಸೂಕ್ತ ವ್ಯವಸ್ಥೆ ಮಾಡಿ ಎಂದು ಸಂತ್ರಸ್ತರು ಮನವಿ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ವಿಚಾರಿಸಿದರೇ ತಾವೂ ಈಗಾಗಲೇ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪರಿಹಾರ ಅಂತಾ ಲಕ್ಷ ರೂಪಾಯಿ ನೀಡಿದ್ದೇವೆ. ಅನಧಿಕೃತ ಮನೆಗೆ ಅಧಿಕೃತ ಜಾಗಕ್ಕೆ ತೆರಳುತ್ತೇನೆಂದವರಿಗೆ ಐದು ಲಕ್ಷ ರೂಪಾಯಿ ನೀಡಲು ಸಿದ್ದರಿದ್ದೇವೆ. ಮನೆಗಳ ಜಿಪಿಎಸ್ ಮಾಡಿದವರಿಗೆ ಪರಿಹಾರ ನೀಡಿದ್ದೇವೆ. ತಮ್ಮ ಇಲಾಖೆಯಿಂದ ಸಿಬ್ಬಂದಿಗಳು ಸಮೀಕ್ಷೆ ಮಾಡಿದ್ದಾರೆ. ಆದರೆ ಈಗ ಸಂತ್ರಸ್ತರ ಮಾಹಿತಿ ಎಂಟ್ರಿ ಮಾಡುವ ಕೆಲಸ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರಕೃತಿ ವಿಕೋಪದಿಂದ ಮನೆಗಳನ್ನು ಕಳೆದುಕೊಂಡ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಅತ್ತ ಪರ್ಯಾಯ ವ್ಯವಸ್ಥೆಗಳಿಲ್ಲದೇ ದನದ ಹಟ್ಟಿಯಲ್ಲಿ ಶೋಚನೀಯ ಸ್ಥಿತಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಕುಟುಂಬಗಳ ಬಗ್ಗೆ ಸರ್ಕಾರ ಕಣ್ಣೆತ್ತಿ ನೋಡುವ ಕಾರ್ಯ ಮಾಡಬೇಕಾಗಿದೆ.
Published by:HR Ramesh
First published: