• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಹೊನ್ನಾವರದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರ ತೀವ್ರ ವಿರೋಧ!

ಹೊನ್ನಾವರದಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರರ ತೀವ್ರ ವಿರೋಧ!

ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ಜಾಗ.

ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ಜಾಗ.

ಇತ್ತೀಚೆಗೆ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಹೊನ್ನಾವರದ ಇಕೋ ಬೀಚ್ ಕೂಡ ಕಾಮಗಾರಿ ನಡೆಯುತ್ತಿರುವ ಸ್ಥಳದ 100 ಮೀಟರ್ ಹತ್ತಿರದಲ್ಲೇ ಇದೆ. ಒಂದುವೇಳೆ ಇದೆ ಮಾರ್ಗವಾಗಿ ಬಂದರಿಗೆ ಸಂಬಂಧಪಟ್ಟ ಕೆಲಸಗಳು ಪ್ರಾರಂಭವಾದರೆ ಇಕೋ ಬೀಚ್ ಗೆ ಸಿಕ್ಕಿರುವ ಮಾನ್ಯತೆ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ ಅಂತಾರೆ ಹಿರಿಯರು.

ಮುಂದೆ ಓದಿ ...
  • Share this:

ಕಾರವಾರ; ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಿರ್ಮಾಣವಾಗಲಿರುವ ಖಾಸಗಿ ವಾಣಿಜ್ಯ ಬಂದರು ಕಾಮಗಾರಿ ವಿರೋಧಿಸಿ ಇಂದು ಹೊನ್ನಾವರದ ಕಾಸರಕೋಡಿನ ಮೀನುಗಾರರು ಪ್ರತಿಭಟನೆ ನಡೆಸಿದರು. ಹೊನ್ನಾವರದ ಕಾಸರಕೋಡಿನ ವ್ಯಾಪ್ತಿಯಲ್ಲಿ ಎಚ್.ಪಿ.ಪಿ.ಎಲ್ ಪ್ರೈವೆಟ್ ಲಿಮಿಟೆಡ್ ಕಂಪನಿಯವರು ವಾಣಿಜ್ಯ ಬಂದರು ನಿರ್ಮಾಣಕ್ಕೆ ಕೈ ಹಾಕಿದ್ದು, ಸ್ಥಳೀಯ ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ. 2013ರಲ್ಲಿ ವಾಣಿಜ್ಯ ಬಂದರು ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದು ಅಂದಿನಿಂದ ಇಂದಿನವರೆಗೆ ಹಗ್ಗಾಜಗ್ಗಾಟ ನಡೆಯುತ್ತಿತ್ತು. ಆದರೆ ಇವತ್ತು ವಾಣಿಜ್ಯ ಬಂದರು ನಿರ್ಮಾಣದ ಭಾಗವಾಗಿ ರಸ್ತೆ ಕಾಮಗಾರಿ ಶುರುವಾಗಿದೆ. ಇದಕ್ಕೆ ಇಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಯಿತು. ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಯಾವುದೇ ಪೂರ್ವಾಪರ ಮಾಹಿತಿ ಇಲ್ಲದೆ ಮೀನುಗಾರಿಕೆಗೆ ತೊಂದರೆ ಆಗುವ ರೀತಿಯಲ್ಲಿ ಬಂದರು ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈ ಕಾಮಗಾರಿಯನ್ನು ಸರಕಾರ ಕೂಡಲೇ ನಿಲ್ಲಿಸಬೇಕೆಂದು ಸ್ಥಳೀಯ ಮೀನುಗಾರರು ಆಗ್ರಹಿಸಿದರು.


ಏನಿದು ಸಮಸ್ಯೆ?


2013ರಲ್ಲಿ ಬಂದರು ನಿರ್ಮಾಣದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಎಲ್ಲವೂ ಮುಗಿಯಿತು ಕಾಮಗಾರಿ ಆರಂಭ ಮಾಡೋದೆ ಎನ್ನುತ್ತಿರುವಾಗಲೇ ಇಲ್ಲಿನ ಸ್ಥಳೀಯ ಮೀನುಗಾರರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಂದಿನಿಂದ ಇಂದಿನವರೆಗೆ ಖಾಸಗಿ ಕಂಪನಿಯ ವಾಣಿಜ್ಯ ಬಂದರಿನ ಕನಸು ಕಮರಿ ಹೋಗಿತ್ತು. ಆದರೆ ಈಗ ಮತ್ತೆ ಕಂಪನಿ ಇಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಕೈ ಹಾಕಿದ್ದು ಕಾರ್ಯಚಟುವಟಿಕೆಗಳು ಗರಿಗೆದರುತ್ತಿವೆ. ಈ ವಿಚಾರ ತಿಳಿದ ಸ್ಥಳೀಯ ಮೀನುಗಾರರು ಪ್ರತಿರೋಧವಡ್ಡುತ್ತಿದ್ದಾರೆ.


ಖಾಸಗಿ ಬಂದರು ನಿರ್ಮಾಣ ವಿರೋಧಿಸಿ ಸ್ಥಳೀಯ ಮೀನುಗಾರರ ಪ್ರತಿಭಟನೆ.


ಬಂದರು ನಿರ್ಮಾಣ ಕಾಮಗಾರಿ ಪ್ರಾರಂಭವಾದಾಗಿನಿಂದ ತಮಗೆ ಸಮಸ್ಯೆಯಾಗುತ್ತದೆ ಎಂದು ಸಾಕಷ್ಟು ಪ್ರತಿಭಟನೆ ಮಾಡುತ್ತಾ ಬಂದಿದ್ದಾರೆ ಇಲ್ಲಿನ ಮೀನುಗಾರರು. ಆದರೆ ಇಂದು HPP ಕಂಪನಿಯು ರಸ್ತೆ ನಿರ್ಮಾಣಕ್ಕೆ ಮುಂದಾದಾಗ ಸ್ಥಳೀಯರು ಪ್ರತಿಭಟನೆಗೆ ಇಳಿದಿದ್ದಾರೆ. ಬಂದರು ನಿರ್ಮಾಣದಿಂದ ಮೀನುಗಾರಿಕೆ ಸಂಪೂರ್ಣ ಸ್ಥಗಿತವಾಗಬಹುದು ಎನ್ನುವುದು ಸ್ಥಳೀಯ ಮೀನುಗಾರರ ಆತಂಕಕ್ಕೆ ಕಾರಣವಾಗಿದೆ. ಹಾಗೆಯೇ ಈ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾದರೆ ವಾಹನಗಳ ಓಡಾಟ ಹೆಚ್ಚಾಗಿ ಇಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇಲ್ಲಿ ಕಡಲಾಮೆಗಳು ಮೊಟ್ಟೆ ಇಡುವ ಪ್ರದೇಶವಾದ್ದರಿಂದ ಜೀವ ವೈವಿಧ್ಯದ ಮೇಲೆ ಹಾನಿಯುಂಟಾಗುತ್ತದೆ ಎನ್ನಲಾಗಿದೆ. ಜತೆಗೆ ಸಾಂಪ್ರದಾಯಿಕ ‌ಮೀನುಗಾರಿಕೆ ನಶಿಸಿ ಹೋಗುವ ಆತಂಕ ಮೀನುಗಾರದ್ದಾಗಿದೆ.


ಇದನ್ನು ಓದಿ: Union Budget 2021: ರೈಲ್ವೆ ಇಲಾಖೆಗೆ ದಾಖಲೆಯ 1,10 ಲಕ್ಷ ಕೋಟಿ ರೂ. ಅನುದಾನ ಘೋಷಣೆ


ಕಡಲತೀರದಿಂದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಇಲ್ಲಿ ತಡೆಗೋಡೆ ನಿರ್ಮಾಣವಾಗಲಿದೆ. ಈ‌ ಹಿನ್ನಲೆಯಲ್ಲಿ ತಮ್ಮ ಮೀನುಗಾರಿಕಾ ಬೋಟ್ ಇಡುವುದು ಎಲ್ಲಿ ಎಂಬ ಪ್ರಶ್ನೆ ಮೀನುಗಾರರದ್ದು. ಯಾವುದೇ ಪೂರ್ವಾಪರ ಮಾಹಿತಿ ಅಥವಾ ನೋಟಿಸ್ ಜಾರಿ ಮಾಡದೆ ಏಕಾಏಕಿ ಕಂಪನಿಯವರು ರಸ್ತೆ ಕಾಮಗಾರಿ ಆರಂಭಿಸಿರುವುದಕ್ಕೆ ಸ್ಥಳೀಯ ಮೀನುಗಾರರ ಆಕ್ರೋಶದ ಕಟ್ಟೆ ಒಡೆದಿದೆ.


ಬ್ಲೂ ಪ್ಲ್ಯಾಗ್ ಬೀಚ್ ಗೆ ಹಾನಿ?


ಇತ್ತೀಚೆಗೆ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ ಪಡೆದ ಹೊನ್ನಾವರದ ಇಕೋ ಬೀಚ್ ಕೂಡ ಕಾಮಗಾರಿ ನಡೆಯುತ್ತಿರುವ ಸ್ಥಳದ 100 ಮೀಟರ್ ಹತ್ತಿರದಲ್ಲೇ ಇದೆ. ಒಂದುವೇಳೆ ಇದೆ ಮಾರ್ಗವಾಗಿ ಬಂದರಿಗೆ ಸಂಬಂಧಪಟ್ಟ ಕೆಲಸಗಳು ಪ್ರಾರಂಭವಾದರೆ ಇಕೋ ಬೀಚ್ ಗೆ ಸಿಕ್ಕಿರುವ ಮಾನ್ಯತೆ ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ ಅಂತಾರೆ ಹಿರಿಯರು. ಯಾಕೆಂದರೆ ಬ್ಲೂ ಫ್ಲ್ಯಾಗ್ ಕೆಲವೊಂದು ಮಾನದಂಡಗಳನ್ನು ಹೊಂದಿದ್ದು ಅದರಲ್ಲಿ ಮುಖ್ಯವಾಗಿ ಸ್ವಚ್ಛತೆ, ಸುರಕ್ಷತೆಯನ್ನು ಒಳಗೊಂಡಿದೆ. ಬಂದರಿನ ಚಟುವಟಿಕೆಗಳು ಇಲ್ಲಿಂದ ಪ್ರಾರಂಭವಾದರೆ ಇಕೋ ಬೀಚ್ ತನ್ನ ಸೌಂದರ್ಯ ಕಳೆದುಕೊಳ್ಳುವ ಜೊತೆಗೆ ಅಂತರಾಷ್ಟ್ರೀಯ ಮಾನ್ಯತೆ ಕಳೆದುಕೊಳ್ಳಬಹುದು ಎನ್ನಲಾಗಿದೆ. ಹೀಗೆ ಹತ್ತು ಹಲವು ಬಗೆಯಲ್ಲಿ ಸಮಸ್ಯೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಕೂಡಲೇ ಸರಕಾರ ಮಧ್ಯ ಪ್ರವೇಶಿಸಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಬ್ರೇಕ್ ಹಾಕಬೇಕಿದೆ ಎಂಬುದು ಸ್ಥಳೀಯರ ಆಗ್ರಹವಾಗಿದೆ.

Published by:HR Ramesh
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು