• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಖಾಸಗಿ ಬಂದರು ನಿರ್ಮಾಣಕ್ಕಾಗಿ 500ಕ್ಕೂ ಹೆಚ್ಚು ಪೊಲೀಸರೊಂದಿಗೆ ಶೆಡ್ ತೆರವು; ಹೊನ್ನಾವರ ಮೀನುಗಾರರ ತೀವ್ರ ಆಕ್ರೋಶ!

ಖಾಸಗಿ ಬಂದರು ನಿರ್ಮಾಣಕ್ಕಾಗಿ 500ಕ್ಕೂ ಹೆಚ್ಚು ಪೊಲೀಸರೊಂದಿಗೆ ಶೆಡ್ ತೆರವು; ಹೊನ್ನಾವರ ಮೀನುಗಾರರ ತೀವ್ರ ಆಕ್ರೋಶ!

ಹೊನ್ನಾವರದಲ್ಲಿ ಮೀನುಗಾರರ ಶೆಡ್ ತೆರವು ಮಾಡುತ್ತಿರುವುದು.

ಹೊನ್ನಾವರದಲ್ಲಿ ಮೀನುಗಾರರ ಶೆಡ್ ತೆರವು ಮಾಡುತ್ತಿರುವುದು.

ಖಾಸಗಿ ಕಂಪನಿಯ ಅಭಿವೃದ್ಧಿಗೆ ಮೀನುಗಾರರ ಮೂಲ‌ ನೆಲೆಯನ್ನೇ ಕಸಿದುಕೊಳ್ಳಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕು.

  • Share this:

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ  ಖಾಸಗಿ  ಬಂದರು ನಿರ್ಮಾಣ ಯೋಜನೆಯ ಭಾಗವಾಗಿ ಕೈಗೊಂಡ ರಸ್ತೆ ನಿರ್ಮಾಣಕ್ಕೆ ಮೀನುಗಾರರ ಶೆಡ್ ಗಳನ್ನು ತೆರವುಗೊಳಿದ್ದು ಸಿಡಿದೆದ್ದ ಮೀನುಗಾರರು ಬೃಹತ್ ಪ್ರತಿಭಟನೆ ನಡೆಸಿದರು. ಹೊನ್ನಾವರ ತಾಲ್ಲೂಕಿನ ಕಾಸರಕೋಡು ಟೊಂಕದಲ್ಲಿ ಉದ್ದೇಶಿತ ಖಾಸಗಿ ವಾಣಿಜ್ಯ ಬಂದರಿನ ಕೆಲ ಅಭಿವೃದ್ದಿ ಕಾಮಗಾರಿಗೆ ಮುಂದಾಗಿದ್ದು ಮೀನುಗಾರರ ಶೆಡ್​ಗಳನ್ನ ತೆರವು ಮಾಡಿದೆ.


ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಕಾಸರಕೋಡು ಟೊಂಕಾ ಭಾಗದ ಶರಾವತಿ ನದಿ ಅಳಿವೆ ಪ್ರದೇಶದಲ್ಲಿ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಹೊನ್ನಾವರ ಪ್ರೈವೇಟ್ ಪೋರ್ಟ್ ಲಿಮಿಟೆಡ್ ಕಂಪೆನಿ ವತಿಯಿಂದ ವಾಣಿಜ್ಯ ಬಂದರು ನಿರ್ಮಿಸಲಾಗುತ್ತಿದೆ. ಸರ್ಕಾರ ವಾಣಿಜ್ಯ ಬಂದರು ನಿರ್ಮಾಣಕ್ಕೆ 93 ಎಕರೆ ಜಮೀನು ಮಂಜೂರು ಮಾಡಿದೆ. ಕೆಲ ತಿಂಗಳ ಹಿಂದೆ ವಾಣಿಜ್ಯ ಬಂದರು ಕಾಮಗಾರಿ ಪ್ರಾರಂಭಿಸಿ ಸ್ಥಳೀಯರ ತೀವ್ರ ವಿರೋಧದಿಂದ ಕೈ ಬಿಟ್ಟಿದ್ದ ಕಂಪೆನಿ ಇದೀಗ ಅಧಿಕಾರಿಗಳ ನೇತೃತ್ವದಲ್ಲಿ ಬಂದರು ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮುಂದಾಗಿದೆ. ಇಂದು ಬೆಳ್ಳಂಬೆಳಿಗ್ಗೆ 500ಕ್ಕೂ ಹೆಚ್ಚು ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಜೆಸಿಬಿಗಳನ್ನು ತಂದು ಹತ್ತಾರು ಶೆಡ್ ಗಳನ್ನು ಉರುಳಿಸಲಾಗಿದೆ. ಸುರಿಯುವ ಮಳೆಯನ್ನೂ ಲೆಕ್ಕಿಸದೇ ಪೊಲೀಸರು ಕೊರೋನಾದಂತಹ ಸಂದಿಗ್ಧ ಪರಿಸ್ಥಿಯಲ್ಲಿ ಅಮಾನವೀಯವಾಗಿ ವರ್ತಿಸುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬಂತು. ಈ ಹಿನ್ನಲೆಯಲ್ಲಿ ಆಕ್ರೋಶಗೊಂಡ ಮೀನುಗಾರರು ಪ್ರತಿಭಟನೆಗೆ ಮುಂದಾಗಿದ್ದು ಕೆಲವರು ಆತ್ಮಹತ್ಯೆಗೆ ಯತ್ನಿಸುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದರು.


ಇನ್ನು ಕಾಸರಕೋಡು, ಮಲ್ಲುಕುರ್ವಾ ಪ್ರದೇಶದಲ್ಲಿ ಸುಮಾರು 600ಕ್ಕೂ ಹೆಚ್ಚು ಕುಟುಂಬಗಳು ಮೀನುಗಾರಿಕೆಯನ್ನು ನಂಬಿ ಬದುಕುತ್ತಿವೆ. ಸರ್ಕಾರ ಸ್ಥಳೀಯರಿಗೆ ಸ್ಪಷ್ಟ ಮಾಹಿತಿ ನೀಡದೆ ಕಾಮಗಾರಿ ನಡೆಸುತ್ತಿದೆ. ಇಂದು ರಸ್ತೆ ಕಾಮಗಾರಿ ಕೈಗೊಂಡು ಮುಂದಿನ ದಿನಗಳಲ್ಲಿ ಅಭಿವೃದ್ಧಿ ನೆಪದಲ್ಲಿ ಮೀನುಗಾರರನ್ನು ಸಂಪೂರ್ಣ ಒಕ್ಕಲೆಬ್ಬಿಸುವ ಹುನ್ನಾರ ನಡೆಸಲಾಗಿದೆ ಎಂಬ ಆತಂಕ ಎದುರಾಗಿದೆ. ಆದ್ದರಿಂದ ಕೂಡಲೇ ಈ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.


ಇದನ್ನು ಓದಿ: ಸುಶಾಂತ್‌ ಸಿಂಗ್‌ ಜೀವನಾಧಾರಿತ ನ್ಯಾಯ್ ಚಿತ್ರ ವೀಕ್ಷಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳು ಹೇಳಿದ್ದೇನು?


ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು ಈ ಮೊದಲೇ ಸ್ಥಳೀಯ ಮೀನುಗಾರರೊಂದಿಗೆ ಸಭೆ ನಡೆಸಿ ಬಂದರು ನಿರ್ಮಾಣಕ್ಕಾಗಿ ಶೆಡ್​ ತೆರವು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಇದೀಗ ತೆರವಿಗೆ ಮುಂದಾಗಲಾಗಿದೆ. ಜನರು ಮೊದಲಿನಿಂದಲು ಇಲ್ಲಿಯೇ ವಾಸಿಸುತ್ತಿರುವ ಕಾರಣ ಸಹಜವಾಗಿ ಜಾಗದ ನಂಟು ಹೊಂದಿದ್ದಾರೆ. ಆದರೆ ಈಗಾಗಲೇ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಇದಕ್ಕೆ ಮಾಜಿ ಶಾಸಕರಿಂದಲೂ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು ಮೀನುಗಾರರ ಬದುಕಿಗೆ ಮಾರಕವಾದ ಯೋಜನೆಯನ್ನ ಕೈಬಿಡುವಂತೆ ಒತ್ತಾಯಿಸಿದ್ದಾರೆ.


ಒಟ್ಟಾರೆ ಕೊರೋನಾ ಸಂದರ್ಭದಲ್ಲಿ ಕಾಸರಕೋಡು ಮೀನುಗಾರಿಕಾ ಪ್ರದೇಶದಲ್ಲಿ ಖಾಸಗಿ ವಾಣಿಜ್ಯ ಬಂದರು ಅಭಿವೃದ್ಧಿಗೆ ಮುಂದಾಗಿರುವುದು ಮೀನುಗಾರರಿಗೆ ಒಕ್ಕಲೆಬ್ಬಿಸುವ ಆತಂಕ ಎದುರಾಗಿದೆ. ಖಾಸಗಿ ಕಂಪನಿಯ ಅಭಿವೃದ್ಧಿಗೆ ಮೀನುಗಾರರ ಮೂಲ‌ ನೆಲೆಯನ್ನೇ ಕಸಿದುಕೊಳ್ಳಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದ್ದು ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನ ಕಾದು ನೋಡಬೇಕು.


ನ್ಯೂಸ್​​​18 ಕನ್ನಡ ಕಳಕಳಿ: ರಾಜ್ಯದಲ್ಲಿ ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಗುಂಪುಗೂಡುವುದು, ಹೊರಗೆ ಅಡ್ಡಾಡುವುದನ್ನು ನಿಲ್ಲಿಸಬೇಕು.


  • ವರದಿ: ದರ್ಶನ್ ನಾಯ್ಕ್

Published by:HR Ramesh
First published: