news18-kannada Updated:January 17, 2021, 7:15 AM IST
ಕಡಲ ತೀರದಲ್ಲಿ ಸೀಗಲ್ ಪಕ್ಷಿಗಳ ಗುಂಪು.
ಕಾರವಾರ: ಕಳೆದ ಕೆಲ ವರ್ಷಗಳಿಂದ ಕಣ್ಮರೆಯಾಗಿದ್ದ ಅಂಟಾರ್ಟಿಕಾ ಮೂಲದ ಸೀ-ಗಲ್ ಬಿಳಿ ಹಕ್ಕಿಗಳ ಗುಂಪೊಂದು ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ರವೀಂದ್ರನಾಥ್ ಟ್ಯಾಗೋರ್ ಕಡಲತೀರದ ಸಮೀಪ ಕಡಲಿನಲ್ಲಿ ಸ್ವಚ್ಛಂದವಾಗಿ ಮೀನು ಬೇಟೆ ನಡೆಸುತ್ತಿರುವ ದೃಶ್ಯ ಕಂಡು ಬಂದಿದೆ. ಇದರಿಂದ ಮೀನುಗಾರರ ಮೊಗದಲ್ಲಿ ಸಂತಸ ಮೂಡಿದೆ. ಅರಬ್ಬಿ ಸಮುದ್ರದಲ್ಲಿ ಕಳೆದ ಐದಾರು ವರ್ಷಗಳಿಂದ ಈ ಸೀ-ಗಲ್ ಹಕ್ಕಿಗಳು ಸಂಪೂರ್ಣವಾಗಿ ಮರೆಯಾಗಿ ಹೋಗಿದ್ದವು. ಇದರಿಂದ ಮತ್ಸ್ಯ ಕ್ಷಾಮದಂತಹ ಪರಿಸ್ಥಿತಿ ಉದ್ಭವವಾಗಿದ್ದು, ಮೀನುಗಾರರ ಆತಂಕಕ್ಕೆ ಕಾರಣವಾಗಿತ್ತು. ಪ್ರತಿ ವರ್ಷ ಈ ಹಕ್ಕಿಗಳು ಬಹಳ ಸಂಖ್ಯೆಯಲ್ಲಿ ಅರಬ್ಬಿ ಸಮುದ್ರಕ್ಕೆ ಬಂದರೆ ಸಮೃದ್ಧಿಯ ಸಂಕೇತ ಎಂಬುದು ಮೀನುಗಾರರ ಭಾವನೆಯಾಗಿದೆ. ಇವು ಸಮುದ್ರದಲ್ಲಿ ಮೀನು ಯಥೇಚ್ಛವಾಗಿರುವಲ್ಲಿ ವಿಹರಿಸುತ್ತಲೇ, ಮೀನು ಹಿಡಿಯುತ್ತವೆ. ಹೀಗಾಗಿ ಇವು ಸಮುದ್ರದ ಮೇಲೆ ಗುಂಪಾಗಿ ಕುಳಿತುಕೊಂಡಾಗ, ಮೀನುಗಾರರೇನಾದರೂ ಬಲೆ ಹಾಕಿದರೆ ಬುಟ್ಟಿಗಟ್ಟಲೆ ಮೀನು ಸಿಗುವುದಂತೂ ಗ್ಯಾರಂಟಿ ಎಂಬ ನಂಬಿಕೆ ಇದೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಮೀನುಗಾರರು ಈ ಹಕ್ಕಿಯ ಆಗಮನದ ನಿರೀಕ್ಷೆಯಲ್ಲಿರುತ್ತಾರೆ.
ಕಳೆದ ಐದಾರು ವರ್ಷಗಳಿಂದ ಈ ಹಕ್ಕಿಯು ಅರಬ್ಬಿ ಸಮುದ್ರದಲ್ಲಿ ಕಾಣುವುದು ಅಪರೂಪವಾಗಿತ್ತು. ಎರಡ್ಮೂರು ವರ್ಷಗಳಿಂದ ಸಂಪೂರ್ಣವಾಗಿ ಮರೆಯಾಗಿಯೇ ಹೋಗಿತ್ತು. ಇದು ಮೀನುಗಾರರಲ್ಲಿ ನಿರಾಶೆ ಮೂಡಿಸಿತ್ತು. ಆದರೆ ಇತ್ತೀಚೆಗೆ ಮಧ್ಯಾಹ್ನದ ಹೊತ್ತಲ್ಲಿ ಕಾರವಾರದ ರವೀಂದ್ರನಾಥ್ ಟ್ಯಾಗೋರ್ ಕಡಲ ತೀರದಿಂದ ಅನತಿ ದೂರದಲ್ಲಿಯೇ ಸೀ-ಗಲ್ ಹಕ್ಕಿಗಳ ಕಲರವ, ಸ್ವಚ್ಛಂದ ವಿಹಾರ ಕಣ್ಮನ ಸೆಳೆದಿದೆ. ಕಡಲತೀರದ ಮೇಲಿನಿಂದ ಸೂಕ್ಷ್ಮವಾಗಿ ಗಮನಿಸಿದವರಿಗೆ ಕಡಲಹಕ್ಕಿಗಳು ಮೀನು ಬೇಟೆ ನಡೆಸುತ್ತಿರುವುದು ಕಂಡು ಬಂತು. ಇದು ಮೀನುಗಾರರಲ್ಲಿ ಹೊಸ ಆಶಾ ಭಾವನೆ ಚಿಗುರುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.
ಸೀಗಲ್ ಕಡಲಹಕ್ಕಿಯ ವಿಶೇಷತೆ
ದೇಶದ ಪಶ್ಚಿಮ ಮತ್ತು ಪೂರ್ವ ಕರಾವಳಿಗಳ ಸಮುದ್ರದಲ್ಲಿನ ದ್ವೀಪಗಳಲ್ಲದೇ, ಕೆಲವು ಪ್ರಭೇದಗಳು ಮರುಭೂಮಿಗಳು ಮತ್ತು ಭೂಮಿಯ ಆಯಕಟ್ಟಿನ ಸ್ಥಾನಗಳಲ್ಲಿ ವಾಸಿಸುತ್ತವೆ. ಸೀ-ಗಲ್ಗಳು ಬಹಳ ಹಳೆಯ ಪಕ್ಷಿ ಸಂಕುಲವಾಗಿದ್ದು, ಇದು ಬಿಸಿ ರಕ್ತದ ಜೀವಿಯಾಗಿದೆ. ಇದರ ಈ ವೈಶಿಷ್ಟ್ಯಗಳಿಂದ ಇವು ಯಾವುದೇ ವಾತಾವರಣದಲ್ಲಿ ಹೊಂದಿಕೊಳ್ಳುತ್ತವೆ. ಸಮುದ್ರದಲ್ಲಿ ಸ್ವಚ್ಛಂದವಾಗಿ ವಾಸಿಸುವ ಈ ಹಕ್ಕಿಗಳು, ಸಮುದ್ರದ ಉಪ್ಪು ನೀರನ್ನು ಕುಡಿದು ಫೀಲ್ಟರ್ ಮಾಡಿಕೊಳ್ಳುತ್ತವೆ. ಅಲ್ಲದೇ ಅವಕಾಶ ಸಿಕ್ಕರೆ, ಸಿಹಿ ನೀರನ್ನೂ ಸಹ ಕುಡಿಯುತ್ತವೆ. ಮೀನೇ ಇದರ ಮುಖ್ಯ ಆಹಾರವಾಗಿದೆ. ಮೀನನ್ನು ಹಿಡಿದು ನೇರವಾಗಿ ನುಂಗಿಕೊಂಡು, ಅರಗಿಸಿಕೊಳ್ಳುವ ಸಾಮರ್ಥ್ಯವನ್ನು ಇವು ಹೊಂದಿವೆ.
ಇದನ್ನು ಓದಿ: ಹಿಂದೂಗಳನ್ನು ನಾಶ ಮಾಡುತ್ತೇನೆ ಎನ್ನುವವರಿಗೆ ಹೆಚ್ಚು ಅನುದಾನ; ಹಿಂದೂ ರಕ್ಷಕರಿಗೆ ಭದ್ರತೆ ಹಿಂದಕ್ಕೆ; ಸಿಎಂ ವಿರುದ್ಧ ಮತ್ತೆ ಯತ್ನಾಳ ಕಿಡಿ
ಸೀಗಲ್ ಹಕ್ಕಿಯು ಮುಖ್ಯವಾಗಿ ಶೀತ ಹಾಗೂ ಸಮಶೀತೋಷ್ಣ ವಲಯದ ಸಮುದ್ರಗಳಲ್ಲಿ ಜೀವಿಸುವ ಪಕ್ಷಿ ಪ್ರಬೇಧವಾಗಿದೆ. ಇವು 20 ಪ್ರಬೇಧಗಳನ್ನು ಹೊಂದಿದ್ದು, ಅಂಟಾರ್ಟಿಕಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತವೆ. ಇದರ ಕೆಲವು ಪ್ರಭೇದಗಳು ಅತೀ ಉಷ್ಣದ ಮರುಭೂಮಿಯಲ್ಲೂ ವಾಸಿಸುವ ಕ್ಷಮತೆಯನ್ನು ಹೊಂದಿವೆ. ಕಾಲಕ್ಕೆ ತಕ್ಕಂತೆ, ಇವು ವಿವಿಧ ಖಂಡಗಳಲ್ಲಿ ಸಂತಾನೋತ್ಪತ್ತಿಗಾಗಿ ವಲಸೆ ಹೋಗುತ್ತವೆ. ಯುರೋಪ್, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಸೇರಿದಂತೆ ಪ್ರತಿಯೊಂದು ಖಂಡದಲ್ಲೂ ಅವು ಸಂತಾನೋತ್ಪತ್ತಿಗೋಸ್ಕರ ವಲಸೆ ಹೋಗುವುದರಿಂದ, ಅಲ್ಲೆಲ್ಲ ಸಾಗರ ಮಧ್ಯದ ದ್ವೀಪಗಳಲ್ಲಿ ಸಾಮಾನ್ಯವಾಗಿ ಜೀವಿಸುತ್ತವೆ.
ಏನಂತ್ತಾರೆ ಮೀನುಗಾರರು?
ಕಳೆದ ಐದಾರು ವರ್ಷಗಳಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುತ್ತಿದ್ದೇವೆ. ಮೀನುಕ್ಷಾಮದ ನಿಮಿತ್ತ ಸೀಗಲ್ ಹಕ್ಕಿಗಳು ಒಂದೂ ಕಾಣಲು ಸಿಗುತ್ತಿರಲಿಲ್ಲ. ಮೀನುಗಾರರ ಪ್ರೀತಿಗೆ ಪಾತ್ರವಾಗಿರುವ ಈ ಸೀಗಲ್ ಪಕ್ಷಿಗಳು ಇತ್ತೀಚಿಗೆ ಕಾರವಾರದ ಕಡಲತೀರದ ಸಮೀಪ ಗುಂಪಾಗಿ ಮೀನು ಹಿಡಿಯುತ್ತಿರುವುದು ಗೋಚರವಾಗಿದೆ. ಇದೇ ರೀತಿ ಈ ಹಕ್ಕಿಗಳ ಗುಂಪು ಸಾಕಷ್ಟು ಪ್ರಮಾಣದಲ್ಲಿ ಬಂದರೆ, ಮೀನು ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಆಶಾ ಭಾವನೆ ಗರಿಗೆದರಿದೆ ಎಂದು ಮೀನುಗಾರರು ಹೇಳುತ್ತಾರೆ.
Published by:
HR Ramesh
First published:
January 17, 2021, 7:12 AM IST