ಕೋಲಾರ; ಕೋಲಾರ ಜಿಲ್ಲಾ ಪಂಚಾಯ್ತಿ ಸಿಇಒ ಆಗಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ, ಈಗಿನ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರ ಮೇಲೆ ಕೋಲಾರ ಎಸಿಬಿಯಲ್ಲಿ ದೂರು ದಾಖಲಾಗಿದೆ.
ಸಿಇಒ ಸ್ಥಾನದಿಂದ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಬಳಿಕ, ಪಿಡಿಒಗಳ ಸಂಘ ಹಾಗೂ ಇತರೆ ಅಧಿಕಾರಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಕಾರ್ಯಕ್ರಮ ಮತ್ತೆ ಚರ್ಚೆಯಲ್ಲಿದೆ. ಕಾರ್ಯಕ್ರಮದಲ್ಲಿ ಜಗದೀಶ್ ಅವರು ಕಾನೂನು ಬಾಹಿರವಾಗಿ ಉಡುಗೊರೆಯನ್ನು ಸ್ವೀಕರಿಸಿದ ಆರೋಪ ಇದಾಗಿದೆ.
2019 ನೇ ವರ್ಷದ ಆಗಸ್ಟ್ 23 ರಂದು ಕೋಲಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಪಂಚಾಯಿತಿ ಪಿಡಿಒಗಳು, ಇಒ ಸೇರಿದಂತೆ ಹಲವರು ಜಗದೀಶ್ ರವರಿಗೆ ಬೆಳ್ಳಿಯ ಗದೆ, ಕಿರೀಟ ಚಿನ್ನದ ಉಂಗುರವನ್ನು ನೀಡಿ ಸನ್ಮಾನಿಸಿ ಬೀಳ್ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು. ಅಧಿಕಾರಿಗಳು ಅಕ್ರಮವಾಗಿ ಹಣ ಸಂಗ್ರಹಿಸಿ ವಸ್ತುಗಳನ್ನ ಕೊಂಡು ತಂದಿದ್ದಾಗಿ ಕಳೆದ ವರ್ಷವೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಬಳಿಕ ಪಿಡಿಒ ಜಿಲ್ಲಾ ಸಂಘದ ಅಧ್ಯಕ್ಷ್ಯ ಸಂಪರಾಜ್ ಪತ್ರಿಕಾಗೋಷ್ಠಿ ನಡೆಸಿ ಉಡುಗೊರೆಯಾಗಿ ನೀಡಿದ ವಸ್ತುಗಳು ಅಸಲಿಯದ್ದಲ್ಲ, ಬದಲಾಗಿ ಬಾಡಿಗೆಗೆ ತಂದಿದ್ದು ಎಂದು ಸಮಜಾಯಿಷಿ ನೀಡಿದ್ದರು. ಆದರೀಗ ಆರ್ಟಿಐ ಕಾರ್ಯಕರ್ತ ನಾರಾಯಣಸ್ವಾಮಿ ಎನ್ನುವರು ಇದೇ ವಿಚಾರಕ್ಕೆ ಕೋಲಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮೊರೆ ಹೋಗಿ ಭ್ರಷ್ಟಾಚಾರ ನಿಗ್ರಹ ದಳದಿಂದ ತನಿಖೆ ನಡೆಸಲು ದೂರು ದಾಖಲು ಮಾಡಿದ್ದರು. ಇದೀಗ ನ್ಯಾಯಾಲಯ ವಿಚಾರಣೆ ನಡೆಸಿದ್ದು, ಜಗದೀಶ್ ಸೇರಿದಂತೆ ಕಾರ್ಯಕ್ರಮ ಆಯೋಜನೆ ಮಾಡಿದ್ದ ಅಧಿಕಾರಿಗಳ ಮೇಲೆ ಕೋಲಾರ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ದೂರು ದಾಖಲಿಸಲು ಕೋರ್ಟ್ ಆದೇಶಿಸಿದ್ದು, ಅದರಂತೆ ದೂರು ದಾಖಲಾಗಿದೆ.
ಕೋಲಾರ ಜಿಲ್ಲೆಯ ಹಿಂದಿನ ನಿರ್ಗಮಿತ ಜಿಲ್ಲಾ ಪಂಚಾಯಿತಿ ಸಿಇಒ ಜಗದೀಶ್ ರವರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಆಯೊಜಿಸಿದ್ದ ಪಿಡಿಒಗಳಾದ, ಕೆ.ಮಹೇಶ್ಕುಮಾರ್, ಪಿ.ನಾರಾಯಣಪ್ಪ, ಎಂ.ರಾಮಕೃಷ್ಣ, ವಿ.ಶಂಕರ್, ಎನ್.ಸಂಪರಾಜ್, ಎಸ್.ಜಿ.ಹರೀಶ್ ಕುಮಾರ್, ಎಂ.ಸೋಮಶೇಖರ್, ಅಶ್ವತ್ಥ ನಾರಾಯಣ, ಎಂ.ಸುರೇಶ್ಕುಮಾರ್ ಹಾಗೂ ಶ್ರೀನಿವಾಸಪುರ ತಾಪಂ ಇಒ ಎಸ್.ಆನಂದ್ ವಿರುದ್ಧ ಎಸಿಬಿಯು ಐಪಿಸಿ ಕಲಂ 465, 467, 468 472ರ ಅನ್ವಯ ಎಫ್ಐಆರ್ ದಾಖಲಾಗುವ ಮೂಲಕ, ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.
ಇದನ್ನು ಓದಿ: CoronaVirus: ನೆಮ್ಮದಿಯ ನಿಟ್ಟುಸಿರು ಬಿಟ್ಟ ಸಚಿವ ಕೆ. ಸುಧಾಕರ್; ಕೊರೋನಾ ವರದಿ ನೆಗೆಟೀವ್
ಕಾರ್ಯಕ್ರಮದಲ್ಲಿ ಬಳಸಿದ ಬೆಳ್ಳಿ ವಸ್ತುಗಳು ಅಸಲಿಯದ್ದಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿರುವ ಪಂಚಾಯಿತಿ ಅಧಿಕಾರಿಗಳು, ಇದೀಗ ತನಿಖೆ ಎದುರಿಸುವುದಾಗಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ