ಕೊಡಗು(ಜನವರಿ.08): ಕೊಡವರು ದನದ ಮಾಂಸ ತಿನ್ನುತ್ತಾರೆ ಎಂದು ಮೈಸೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 157 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಮಡಿಕೇರಿ ತಾಲೂಕಿನ ಮುಕ್ಕೋಡ್ಲಿನ ನಿವಾಸಿಯೂ ಆಗಿರುವ ಪಶ್ಚಿಮ ಘಟ್ಟಗಳ ಕಾರ್ಯಪಡೆ ಅಧ್ಯಕ್ಷ ರವಿ ಕುಶಾಲಪ್ಪ ಅವರು 2020 ರ ಡಿಸೆಂಬರ್ 21 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ದೂರು ನೀಡಿದ್ದರು. ಆದರೆ, ಇದುವರೆಗೆ ಎಫ್ಐಆರ್ ದಾಖಲಾಗಿರಲಿಲ್ಲ. ಕೊನೆಗೂ ದೂರಿನ ಆಧಾರದಲ್ಲಿ ಪೊಲೀಸರು ಸಿದ್ದರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ರವಿಕುಶಾಲಪ್ಪ, ಸಿದ್ದರಾಮಯ್ಯ ಅವರು ಕೊಡವರ ಭಾವನೆಗಳಿಗೆ ಘಾಸಿ ಮಾಡಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153/ಎ ಮತ್ತು 295/ಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾಗಿತ್ತು. ಆದರೆ, ಸಾಧಾರಣ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಪ್ರಕರಣದಿಂದ ಖುಲಾಸೆ ಮಾಡುವ ಹುನ್ನಾರ ನಡೆದಿದೆ. ಆದರೆ ನಾವು ಇಷ್ಟಕ್ಕೆ ಸುಮ್ಮನಾಗುವುದಿಲ್ಲ. ಕಾನೂನು ತಜ್ಞರ ಸಲಹೆ ಪಡೆದು ನ್ಯಾಯಾಲಯದಲ್ಲೂ ಖಾಸಗಿ ದೂರು ದಾಖಲಿಸುತ್ತೇವೆ ಎಂದು ತಿಳಿಸಿದರು.
ಸದ್ಯ ಕೊಡಗಿನಲ್ಲಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಇದ್ದು, ಒಂದು ವೇಳೆ ಸಿದ್ದರಾಮಯ್ಯ ಅವರು ಕೊಡಗಿಗೆ ಬಂದು ಬಹಿರಂಗ ಕ್ಷಮೆಯಾಚಿಸಿದರೆ, ಸುಮ್ಮನಾಗುವಿರಾ ಎಂಬುದಕ್ಕೆ ಪ್ರತಿಕ್ರಿಯಿಸಿರುವ ರವಿಕುಶಾಲಪ್ಪ, ಸಿದ್ದರಾಮಯ್ಯ ಅವರು ಅಕ್ಷಮ್ಯ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅದಕ್ಕೆ ಕ್ಷಮೆಯೇ ಇಲ್ಲ, ಏನಿದ್ದರೂ ಅದು ನ್ಯಾಯಾಲಯದಲ್ಲೇ ನಿರ್ಧಾರವಾಗಲಿ ಎಂದರು.
ಮತ್ತೊಂದೆಡೆ ಕಾಂಗ್ರೆಸ್ ನ ಐಸಿಸಿಸಿ ವಕ್ತಾರರಾಗಿರುವ ಬಿಜ್ರೇಶ್ ಕಾಳಪ್ಪ ಅವರು ಸಿದ್ದರಾಮಯ್ಯ ಅವರು ಹಂದಿ ಮಾಂಸ ಹೇಳಲು ಹೋಗಿ ದನದ ಮಾಂಸ ಅಂತ ಹೇಳಿದ್ದಾರೆ. ಅದು ಉದ್ದೇಶಪೂರ್ವಕವಾಗಿ ಹೇಳಿರುವ ಹೇಳಿಕೆ ಅಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಸಿದ್ದರಾಮಯ್ಯ ಅವರು ಮುಸ್ಲಿ, ಕ್ರಿಶ್ಚಿಯನ್ ಎಲ್ಲರೂ ಹಂದಿ ಮಾಂಸ ತಿನ್ನುತ್ತಾರೆ ಎಂದು ಹೇಳಿದ್ದಾರೆಯೇ.? ಹಾಗೆ ಹೇಳಿದ್ದರೆ ಆ ಮಾತನ್ನು ಮುಸಲ್ಮಾನರು ಒಪ್ಪಿಕೊಳ್ಳುತ್ತಾರೆಯೇ ಎಂದು ರವಿಕುಶಾಲಪ್ಪ ಹೇಳಿದ್ದಾರೆ.
ಇದನ್ನೂ ಓದಿ :
ರಾಮನಗರ ಆಸ್ಪತ್ರೆಯಲ್ಲಿ ಸ್ವತಃ ಕೋವಿಡ್ ಲಸಿಕೆ ತಾಲೀಮಿಗೆ ಒಳಗಾದ ಡಿಸಿಎಂ ಅಶ್ವತ್ಹನಾರಾಯಣ
ಇನ್ನು ಸಿದ್ದರಾಮಯ್ಯನವರು ಹೇಳಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಸಿದ್ದರಾಮಯ್ಯ ಅವರು ನಿದ್ದೆರಾಮಯ್ಯ. ಕುಂಭಕರ್ಣ ನಿದ್ದೆಯಿಂದ ಎದ್ದು ಏನೇನೋ ಮಾತನಾಡುತ್ತಾರೆ, ಏನೇನೋ ಮಾಡುತ್ತಾರೆ. ಸಿದ್ದರಾಮಯ್ಯ ಅವರಿಗೆ ಹಿಂದಿನಿಂದಲೂ ಕೊಡಗಿನ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ನಿರಂತರವಾಗಿ ಕೊಡಗಿನವರ ವಿರುದ್ಧ ಮಾತನಾಡುತ್ತಲೇ ಇದ್ದಾರೆ. ಒಂದು ಜನಾಂಗವನ್ನು ಹೀಗೆ ಹೀಯಾಳಿಸಿ ಮಾತನಾಡುವುದು ಎಷ್ಟು ಸರಿ. ಈ ಕುರಿತು ಮುಂದಿನ ಅಧಿವೇಶನದಲ್ಲೂ ಇದನ್ನು ಪ್ರಸ್ತಾಪ ಮಾಡುತ್ತೇನೆ ಎಂದಿದ್ದಾರೆ.
ಒಟ್ಟಿನಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಗೆ ಕೊಡಗು ಜಿಲ್ಲೆಯಲ್ಲಿ ಇನ್ನೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದು ಎಲ್ಲಿಗೆ ಹೋಗಿ ತಲುಪುವುದು ಕಾದು ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ