ಚಿತ್ರದುರ್ಗ: ಚುನಾವಣೆ ಆಯೋಗ ರಾಜ್ಯದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ಘೋಷಿಸಿ ನೀತಿ ಸಂಹಿತೆಯನ್ನೂ ಜಾರಿ ಮಾಡಿದೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ದತೆ ನಡೆಸಿದೆ. ಚುನಾವಣೆ ಕುರಿತು ಜಿಲ್ಲಾ ಚುನಾವಣಾಧಿಕಾರಿ, ಕವಿತಾ ಎಸ್. ಮನ್ನಿಕೇರಿ ಸುದ್ದಿಗೋಷ್ಠಿ ನಡೆಸಿ ಚುನಾವಣೆಯ ರೂಪುರೇಷೆ ಹೇಗಿರುತ್ತದೆ ಅಂತ ವಿವರಿಸಿದ್ದಾರೆ.
ಚುನಾವಣಾ ಆಯೋಗದ ಆದೇಶದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮೊದಲ ಹಂತದಲ್ಲಿ ಚಿತ್ರದುರ್ಗ ತಾಲೂಕಿನ 38, ಹೊಸದುರ್ಗ ತಾಲೂಕಿನ 33 ಹಾಗೂ ಹೊಳಲ್ಕೆರೆ ತಾಲ್ಲೂಕಿನ 29 ಗ್ರಾಮ ಪಂಚಾಯ್ತಿಗೆ ಚುನಾವಣೆ ನಡೆಯಲಿದೆ. ಈ ಮೂರು ತಾಲ್ಲೂಕುಗಳಲ್ಲಿನ ಒಟ್ಟು 100 ಗ್ರಾಮ ಪಂಚಾಯ್ತಿಯ 1753 ಸ್ಥಾನಗಳಿಗೆ ಡಿಸೆಂಬರ್ 22ರಂದು ಮತದಾನ ನಡೆಯಲಿದೆ. ಇನ್ನೂ ಎರಡನೇ ಹಂತದಲ್ಲಿ ಹಿರಿಯೂರು ತಾಲ್ಲೂಕಿನ 33, ಚಳ್ಳಕೆರೆ ತಾಲೂಕಿನ 40 ಹಾಗೂ ಮೊಳಕಾಲ್ಮೂರು ತಾಲೂಕಿನ 16 ಗ್ರಾಮ ಪಂಚಾಯ್ತಿಗಳು ಸೇರಿ ಒಟ್ಟು 89 ಗ್ರಾಮ ಪಂಚಾಯ್ತಿಯ 1668 ಸ್ಥಾನಗಳಿಗೆ ಡಿಸೆಂಬರ್ 27ರಂದು ಮತದಾನ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮೊದಲ ಹಂತದ ಚುನಾವಣೆಗೆ ಡಿಸೆಂಬರ್ 7ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಡಿಸೆಂಬರ್ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿದೆ. ಡಿಸೆಂಬರ್ 12ರಂದು ನಾಮಪತ್ರ ಪರಿಶೀಲಿಸಲಿರುವ ಚುನಾವಣಾ ಆಯೋಗ, ಡಿಸೆಂಬರ್ 14ರಂದು ನಾಮಪತ್ರ ಹಿಂಪಡೆಯಲು ದಿನಾಂಕ ನಿಗಧಿ ಮಾಡಿದೆ. ಇನ್ನೂ ಡಿಸೆಂಬರ್ 22ರಂದು ನಡೆಯಲಿರುವ ಮೊದಲ ಹಂತದ ಚುನಾವಣೆ ಮುಗಿದ ಬಳಿಕ ಡಿಸೆಂಬರ್ 30 ರಂದು ಮತ ಎಣಿಕೆಗೆ ದಿನಾಂಕ ನಿಗದಿಪಡಿಸಲಾಗಿದೆ. ಅಲ್ಲದೇ ಜಿಲ್ಲೆಯಲ್ಲಿ ಎರಡನೇ ಹಂತದ ಚುನಾವಣೆಗೆ ಡಿಸೆಂಬರ್ 11ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಡಿಸೆಂಬರ್ 16 ರವರೆಗೆ ನಾಮಪತ್ರ ಸಲ್ಲಿಸಲು ದಿನಾಂಕ ನಿಗಧಿಯಾಗಿದೆ. ಎರಡನೇ ಹಂತದ ಚುನಾವಣೆಯ ನಾಮಪತ್ರ ಪರಿಶೀಲನೆ ಡಿಸೆಂಬರ್ 17ರಂದು ನಡೆಯಲಿದ್ದು, ಡಿಸೆಂಬರ್ 19ರಂದು ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಇನ್ನೂ ಅಧಿಸೂಚನೆಯಂತೆ ಎರಡನೇ ಹಂತದ ಚುನಾವಣೆ ಪ್ರಕ್ರಿಯೆಗೆ ಆಯೋಗದ ಆದೇಶದಂತೆ ಡಿಸೆಂಬರ್ 27 ರಂದು ಮತದಾನ ನಡೆಯಲಿದೆ. ಮೊದಲ ಹಾಗೂ ಎರಡನೇ ಹಂತದ ಚುನಾವಣೆ ಮುಗಿದ ಬಳಿಕ ಡಿಸೆಂಬರ್ 30 ರಂದು ಒಂದೇ ದಿನ ಎರಡೂ ಹಂತಗಳ ಮತ ಎಣಿಕೆ ಕಾರ್ಯ ಆಯಾ ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ. ನವೆಂಬರ್ 30ರಿಂದ ಅನ್ವಯವಾಗುವಂತೆ ಡಿಸೆಂಬರ್ 31ರ ಸಂಜೆ 5 ಗಂಟೆಯವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಆದರೆ ಈ ನೀತಿ ಸಂಹಿತೆ ನಗರಸಭೆ, ಪುರಸಭೆ ಹಾಗು ಪಟ್ಟಣ ಪಂಚಾಯ್ತಿ ವ್ಯಾಪ್ತಿಗಳಿಗೆ ಅನ್ವಯಿಸುವುದಿಲ್ಲ ಎಂದು ಡಿಸಿ ಕವಿತಾ ಎಸ್.ಮನ್ನಿಕೇರಿ ಸ್ಪಷ್ಟಪಡಿಸಿದ್ದಾರೆ.
ಇನ್ನೂ ಕೊರೋನಾ ಮಾರ್ಗಸೂಚಿಯಂತೆ ಮತದಾನದ ವೇಳೆ ಕಟ್ಟುನಿಟ್ಟಾಗಿ ಕೊರೋನಾ ನಿಯಮಗಳನ್ನು ಪಾಲಿಸುವಂತೆ ಚುನಾವಣಾ ಆಯೋಗ ಸ್ಪಷ್ಟವಾಗಿ ಆದೇಶಿಸಿದೆ. ಅದರಂತೆ ಮಾಸ್ಕ್ ಸ್ಯಾನಿಟೈಜರ್ ಬಳಸುವುದನ್ನು ಕಡ್ಡಾಯಗೊಳಿಸಲಾಗಿದೆ. ಮತದಾನ ನಡೆಯುವ ದಿನದಂದು ಕೊರೋನಾ ಸೋಂಕಿತರು ಅಥವಾ ಶಂಕಿತರ ಮತದಾನ ಮಾಡಲು ಕೊನೆಯ ಒಂದು ತಾಸಿನ ಅವಧಿಯನ್ನು ನಿಗಧಿಗೊಳಿಸಲಾಗಿದ್ದು, ಕೋವಿಡ್ ಸೋಕಿತರು ಸಂಜೆ 4 ಗಂಟೆಯಿಂದ 5 ಗಂಟೆ ವರೆಗೆ ಮತದಾನ ಮಾಡಲು ಸಮಯಾವಕಾಶ ನಿಗದಿ ಮಾಡಲಾಗಿದೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 189 ಗ್ರಾಮ ಪಂಚಾಯ್ತಿಗಳ 1683 ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ 190 ಆರ್ ಒ ಹಾಗೂ 193 ಎಆರ್ಒ ಗಳನ್ನು ನೇಮಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ 189 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ 5 ಲಕ್ಷದ 48ಸಾವಿರದ 319 ಪುರುಷ ಮತದಾರರು, 5 ಲಕ್ಷದ 36 ಸಾವಿರದ 370 ಮಹಿಳಾ ಮತದಾರರು ಹಾಗು ಇತರೆ 42 ಮತದಾರರು ಸೇರಿ ಒಟ್ಟು 10 ಲಕ್ಷದ 84 ಸಾವಿರದ 731 ಮತದಾರರಿದ್ದಾರೆ. ಇನ್ನು ಗ್ರಾಮ ಪಂಚಾಯ್ತಿ ಚುನಾವಣೆ ಪಕ್ಷಾತೀತವಾಗಿ ನಡೆಯುವ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಯಾವುದೇ ಪಕ್ಷದ ಚಿಹ್ನೆಗಳನ್ನಾಗಲೀ, ಯಾವುದೇ ರಾಜಕೀಯ ಪಕ್ಷಗಳ ಮುಖಂಡರು, ಶಾಸಕರು ಹಾಗು ಮಂತ್ರಿಗಳ ಭಾವಚಿತ್ರಗಳನ್ನು ಬಳಸಿ ಚುನಾವಣಾ ಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿದಲ್ಲಿ ಅಂತಹ ಅಭ್ಯರ್ಥಿಗಳ ಕರಪತ್ರ, ಫ್ಲೆಕ್ಸ್, ಬ್ಯಾನರ್ ಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಲಾಗಿದೆ.
ಇದನ್ನು ಓದಿ: 25 ವರ್ಷಗಳ ನಂತರ ಗ್ರಾಮದ ಕೆರೆ ಭರ್ತಿ; ಕೆರೆ ಖಾಲಿ ಮಾಡಿ ಎನ್ನುತ್ತಿರುವ ಗ್ರಾಮಸ್ಥರು! ಏಕೆ ಗೊತ್ತಾ?
ಯಾವುದೇ ಶಾಸಕರು, ಮಂತ್ರಿಗಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಭೆ ಸಮಾರಂಭ, ಚುನಾವಣಾ ಸಮಾವೇಶಗಳನ್ನು ನಡೆಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ಈಗಾಗಲೇ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಗಳ ಅಧ್ಯಕ್ಷರುಗಳಿಗೆ ನೀಡಲಾಗಿದ್ದ ಸರ್ಕಾರಿ ವಾಹನಗಳನ್ನು ಹಿಂಪಡೆದುಕೊಂಡಿರು ಚುನಾವಣಾಧಿಕಾರಿಗಳು, ಯಾವುದೇ ಚುನಾಯಿತ ಪ್ರತಿನಿಧಿಗಳು, ನಿಗಮ ಮಂಡಳಿಯ ಅಧ್ಯಕ್ಷರು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಸರ್ಕಾರಿ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರೆ ಕೂಡಲೇ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಡಿಸಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.
ಒಟ್ಟಾರೆ ಚುನಾವಣೆ ದಿನಾಂಕ ನಿಗಧಿಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ನೀತಿ ಸಂಹಿತೆ ಜಾರಿ ಮಾಡಿರು ಜಿಲ್ಲಾ ಚುನಾವಣಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.
ವರದಿ : ವಿನಾಯಕ ತೊಡರನಾಳ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ