ಕೊನೆಗೂ ಕಾರವಾರದಲ್ಲಿ ಮೀನು ಮಾರುಕಟ್ಟೆ ನಿರ್ಮಾಣ; ಉದ್ಘಾಟನೆ ದಿನಾಂಕ ಸಮೀಪಿಸುತ್ತಿದ್ದಂತೆ ಶುರುವಾದ ರಾಜಕೀಯ ಕಚ್ಚಾಟ

ಮೀನುಗಾರ ಮುಖಂಡರಲ್ಲಿ ಕೆಲವರು ಕಾಂಗ್ರೆಸ್ ಬೆಂಬಲಿಗರಾಗಿದ್ದರೆ ಇನ್ನೂ ಕೆಲವರು ಬಿಜೆಪಿ ಪರವಾಗಿದ್ದು ಮಾರುಕಟ್ಟೆ ವಿಚಾರದಲ್ಲಿ ಮಾಜಿ ಶಾಸಕ ಸತೀಶ ಸೈಲ್ ಅಂಗಡಿಕಾರರ ಪರವಾಗಿ ಓಡಾಟ ನಡೆಸಿದ್ದರು. ಹೀಗಾಗಿ ಇದೀಗ ಮಾರುಕಟ್ಟೆ ಉದ್ಘಾಟನೆ ವಿಚಾರ ರಾಜಕೀಯ ಮುಖಂಡರಿಗೆ ಪ್ರತಿಷ್ಠೆಯಂತಾಗಿದ್ದು ಕಚ್ಚಾಟಕ್ಕೆ ಕಾರಣವಾಗಿದೆ.

ಕಾರವಾರದಲ್ಲಿ ನಿರ್ಮಾಣಗೊಂಡಿರುವ ಮೀನು ಮಾರುಕಟ್ಟೆ.

ಕಾರವಾರದಲ್ಲಿ ನಿರ್ಮಾಣಗೊಂಡಿರುವ ಮೀನು ಮಾರುಕಟ್ಟೆ.

  • Share this:
ಕಾರವಾರ; ಕಾರವಾರದಲ್ಲಿ ನಾಲ್ಕೈದು  ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ನೂತನ ಮೀನು ಮಾರುಕಟ್ಟೆ ನಿರ್ಮಾಣ ಕೊನೆಗೂ ಪೂರ್ಣ ಹಂತಕ್ಕೆ ಬಂದು ಉದ್ಘಾಟನೆ ಭಾಗ್ಯ ಬಂದಿದೆ. ಆದರೆ ಉದ್ಘಾಟನೆಯಲ್ಲೂ ರಾಜಕೀಯ ಆಟ ಮುಂದವರೆದಿದೆ. ಜತೆಗೆ ಮೀನು ಮಾರುಕಟ್ಟೆ ನಿರ್ಮಾಣ ಅವೈಜ್ಞಾನಿಕವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸಾಕಷ್ಟು ಅಡ್ಡಿಗಳು ಎದುರಾಗಿದ್ದು, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸುವಂತೆ ಮೀನುಗಾರರು ಹಲವು ಬಾರಿ ಪ್ರತಿಭಟನೆಯನ್ನೂ ಸಹ ನಡೆಸಿದ್ದರು. ಕೊನೆಗೂ ಆಮೆಗತಿಯಲ್ಲಿ ಸಾಗಿದ್ದ ಮಾರುಕಟ್ಟೆ ಕಾಮಗಾರಿಯ ಮೊದಲನೇ ಹಂತ ಪೂರ್ಣಗೊಂಡಿದ್ದು, ಉದ್ಘಾಟನೆ ಹಂತಕ್ಕೆ ಬಂದು ನಿಂತಿದೆ. ಆದರೆ ಮಾರುಕಟ್ಟೆಯಲ್ಲಿ ಸದ್ಯ ಯಾರಿಗೆ ಸ್ಥಳಾವಕಾಶ ನೀಡಬೇಕು ಎನ್ನುವ ವಿಚಾರವಾಗಿ ರಾಜಕೀಯ ಕಚ್ಚಾಟ ಶುರುವಾಗಿದೆ.

ಸಾಕಷ್ಟು ಹೋರಾಟ, ಪ್ರತಿಭಟನೆಗಳ ಬಳಿಕ ಕೊನೆಗೂ ಕಾರವಾರ ನಗರದಲ್ಲಿ ನೂತನ ಮೀನು ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಿ ನಿಂತಿದೆ. ಸುದೀರ್ಘ ನಾಲ್ಕು ವರ್ಷಗಳ ಬಳಿಕ ಮೀನು ಮಾರಾಟಕ್ಕೆ ಶಾಶ್ವತ ಸೂರು ಸಿಕ್ಕಿದ್ದು, ಮೀನುಗಾರರಿಗೂ ಸಂತಸ ಉಂಟುಮಾಡಿದೆ. ಆದರೆ ಸದ್ಯ ಮಾರುಕಟ್ಟೆಯ ಮೊದಲ ಹಂತ ಮಾತ್ರ ಪೂರ್ಣಗೊಂಡಿದ್ದು, ಎರಡನೇಯ ಹಂತದ ಮಾರುಕಟ್ಟೆ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಅಲ್ಲದೇ ಸದ್ಯ ನಿರ್ಮಾಣವಾಗಿರುವ ಕಟ್ಟಡದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೀನು ಮಾರಾಟಗಾರರಿಗೆ ಸ್ಥಳಾವಕಾಶ ಇಲ್ಲವಾಗಿದ್ದು, ಈಗಾಗಲೇ ಮಾರುಕಟ್ಟೆಯ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದಾಗಿ ಗೊಂದಲಕ್ಕೊಳಗಾದ ಮೀನುಗಾರರು ತಮ್ಮ ಮುಖಂಡರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ ಅವರನ್ನು ಭೇಟಿ ಮಾಡಿದ್ದು ಸಮಸ್ಯೆ ಹೇಳಿಕೊಂಡಿದ್ದಾರೆ.

ಕಾರವಾರದಲ್ಲಿ ಸುಮಾರು 300ಕ್ಕೂ ಅಧಿಕ ಮೀನು ಮಾರಾಟಗಾರ ಮಹಿಳೆಯರಿದ್ದು ಮಾರುಕಟ್ಟೆ ಕಟ್ಟಡದಲ್ಲಿ ಕೇವಲ 150 ಮಂದಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ. ಹೀಗಾಗಿ ಈ ಸಂದರ್ಭದಲ್ಲೇ ಕಟ್ಟಡ ಉದ್ಘಾಟಿಸಿದಲ್ಲಿ ಮೀನುಗಾರ ಮಹಿಳೆಯರ ನಡುವೆ ಜಾಗಕ್ಕಾಗಿ ಗಲಾಟೆಯಾಗಲಿದೆ ಅನ್ನೋದು ಮೀನುಗಾರರ ಅಭಿಪ್ರಾಯವಾಗಿದೆ.

ಸದ್ಯ ಮಾರುಕಟ್ಟೆ ನಿರ್ಮಾಣಕ್ಕೆ ನಗರಸಭೆ ಬಳಿ ಹಣವಿದ್ದು ಮಾರುಕಟ್ಟೆ ಪ್ರದೇಶದ 9 ಅಂಗಡಿಗಳ ಮಾಲೀಕರು ನ್ಯಾಯಾಲಯದಲ್ಲಿ ಪ್ರಕರಣ ಹೂಡಿರುವ ಕಾರಣ ಕಾಮಗಾರಿ ಪ್ರಾರಂಭ ಮಾಡುವುದು ಸಾಧ್ಯವಾಗುತ್ತಿದೆ. ಹೀಗಾಗಿ ಉಳಿದ ಅಂಗಡಿ ಮಾಲೀಕರ ಮನವೊಲಿಸಿ ಮಾರುಕಟ್ಟೆಯನ್ನ ಪೂರ್ಣಗೊಳಿಸಿ ಅಂತಾ ಮೀನುಗಾರ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಿದ್ದಾರೆ. ಆದರೆ ಈ ವೇಳೆ ನಗರಸಭೆ ಮಾಜಿ ಅಧ್ಯಕ್ಷರಾಗಿದ್ದ ಮೀನುಗಾರ ಗಣಪತಿ ಉಳ್ವೇಕರ್ ಮೀನುಗಾರ ಮುಖಂಡ ರಾಜು ತಾಂಡೇಲ್, ರಾಜೇಶ ಮಾಜಾಳಿಕರ್ ವಿರುದ್ಧವೇ ಹರಿಹಾಯ್ದಿದ್ದಾರೆ. ಮೀನು ಮಾರುಕಟ್ಟೆ ವಿಚಾರದಲ್ಲಿ 9 ಮಳಿಗೆ ವ್ಯಾಪಾರಸ್ಥರಿಗೂ ಹೊಸ ಕಟ್ಟಡದಲ್ಲಿ ಜಾಗ ಕೊಡಿಸಲು ರಾಜಕೀಯ ಮಾಡಲಾಗುತ್ತಿದೆ ಅಂತಾ ಆರೋಪಿಸಿದರು. ಈ ವಿಚಾರ ವಾಗ್ವಾದಕ್ಕೆ ಕಾರಣವಾಗಿದ್ದು ಸಚಿವ ಹೆಬ್ಬಾರ್ ಎದುರೇ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಮೀನುಗಾರ ಮುಖಂಡರ ಮನವೊಲಿಸಿ ಜಗಳ ತಡೆದಿದ್ದಾರೆ. ಮೀನು ಮಾರುಕಟ್ಟೆ ವಿಚಾರವಾಗಿ ಸಭೆ ನಡೆಸಿ ಮೀನುಗಾರರಿಗೆ ಅನ್ಯಾಯವಾಗದಂತೆ ಸೂಕ್ತ ಕ್ರಮ ಕೈಗೊಳ್ಳೋದಾಗಿ ಸಚಿವರು ಭರವಸೆ ನೀಡಿದ್ದಾರೆ.

ಇದನ್ನು ಓದಿ: ತವರಿನಿಂದ ಬೆಂಗಳೂರಿಗೆ ಬರುವಾಗ ಮಕ್ಕಳೊಂದಿಗೆ ಬಸ್​ನಲ್ಲಿಯೇ ಸಜೀವ ದಹನವಾದ ಸಹೋದರಿಯರು!

ಇನ್ನು ಮೀನುಗಾರ ಮುಖಂಡರಲ್ಲಿ ಕೆಲವರು ಕಾಂಗ್ರೆಸ್ ಬೆಂಬಲಿಗರಾಗಿದ್ದರೆ ಇನ್ನೂ ಕೆಲವರು ಬಿಜೆಪಿ ಪರವಾಗಿದ್ದು ಮಾರುಕಟ್ಟೆ ವಿಚಾರದಲ್ಲಿ ಮಾಜಿ ಶಾಸಕ ಸತೀಶ ಸೈಲ್ ಅಂಗಡಿಕಾರರ ಪರವಾಗಿ ಓಡಾಟ ನಡೆಸಿದ್ದರು. ಹೀಗಾಗಿ ಇದೀಗ ಮಾರುಕಟ್ಟೆ ಉದ್ಘಾಟನೆ ವಿಚಾರ ರಾಜಕೀಯ ಮುಖಂಡರಿಗೆ ಪ್ರತಿಷ್ಠೆಯಂತಾಗಿದ್ದು ಕಚ್ಚಾಟಕ್ಕೆ ಕಾರಣವಾಗಿದೆ. ಒಟ್ಟಾರೇ ಸಾಕಷ್ಟು ಹೋರಾಟದ ಬಳಿಕ ಕಾರವಾರದಲ್ಲಿ ಶಾಶ್ವತ ಮೀನು ಮಾರುಕಟ್ಟೆಯೇನೋ ನಿರ್ಮಾಣವಾಗಿದೆ. ಆದರೆ ಇದೀಗ ಸ್ಥಳಾವಕಾಶ ಹಂಚಿಕೆ ವಿಚಾರ ರಾಜಕೀಯ ಕಚ್ಚಾಟಕ್ಕೆ ಕಾರಣವಾಗಿದ್ದು, ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಅನ್ನೋದನ್ನು ಕಾದುನೋಡಬೇಕು.
Published by:HR Ramesh
First published: