ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರ ಠಾಣೆ ಪಿ.ಎಸ್.ಐ ಜಗದೀಶ್ ಐದು ವರ್ಷಗಳ ಹಿಂದೆ ಕಳ್ಳರನ್ನ ಬೆನ್ನಟ್ಟಿ ಹಿಡಿಯುವ ವೇಳೆ ಕಳ್ಳರಿಂದ ಚಾಕುವಿನಿಂದ ಇರಿತಕ್ಕೆ ಒಳಗಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದರು. ಹುತಾತ್ಮ ಪಿಎಸ್ಐ ಜಗದೀಶ್ ಅವರ 5ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ನಗರದ ಡಿ. ಕ್ರಾಸ್ ಬಳಿ ಇರುವ ಪಿಎಸ್ಐ ಜಗದೀಶ್ ವೃತ್ತದಲ್ಲಿ ಅವರ ಅಪಾರ ಅಭಿಮಾನಿ ಬಳಗದ ವತಿಯಿಂದ ಆಚರಿಸಲಾಯಿತು. ಬೆಂಗಳೂರು - ಗೌರಿಬಿದನೂರು - ದೇವನಹಳ್ಳಿ ವೃತ್ತಕ್ಕೆ ಪಿ.ಎಸ್.ಐ ಜಗದೀಶ್ ವೃತ್ತ ಎಂದು ನಾಮಕರಣ ಮಾಡಲಾಗಿದೆ.
ಈ ವೇಳೆ ಪುಷ್ಪ ನಮನ ಸಲ್ಲಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ವೃತ್ತ ಡಿವೈಎಸ್ಪಿ ಟಿ.ರಂಗಪ್ಪಮಾತನಾಡಿ, ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ಪಿಎಸ್ಐ ಜಗದೀಶ್ ಅವರ ಕರ್ತವ್ಯ ಹಾಗು ಜನರ ಮೇಲಿನ ಪ್ರೀತಿಯ ನೆನಪಿನಲ್ಲಿ ಇಂದು ಕಾರ್ಯಕ್ರಮ ಮಾಡುತ್ತಿರುವುದು ತುಂಬಾ ಸಂತೋಷದ ಸಂಗತಿ. ಒಬ್ಬ ನಿಷ್ಠಾವಂತ ಸಾಮಾನ್ಯ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ವೃತ್ತವನ್ನು ನಿರ್ಮಾಣ ಮಾಡಿರುವುದು ಅವರ ಕರ್ತವ್ಯ ನಿಷ್ಠೆಗೆ ಹಿಡಿದ ಕೈಗನ್ನಡಿಯಾಗಿದೆ ಮತ್ತು ದೊಡ್ಡಬಳ್ಳಾಪುರ ಜನರ ಪ್ರೀತಿ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ಅವರು ತಾಲೂಕಿನಲ್ಲಿ ಗಳಿಸಿರುವ ಪ್ರೀತಿ ಜನರ ಭಾವನಾತ್ಮಕ ಸಂಬಂಧಗಳ ಜೊತೆ ಅವರ ಪ್ರಾಮಾಣಿಕ ಕೆಲಸವನ್ನು ಇಂದಿಗೂ ಸ್ಮರಿಸುತ್ತಿರುವ ನಿಮಗೆ ಇಲಾಖೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಮತ್ತೆ ಇಂತಹ ದುರಂತಗಳು ಮರುಕಳಿಸದಂತೆ ನೋಡಿಕೊಂಡು ಸಮಾಜದಲ್ಲಿರುವ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಲು ನಾವು ಕಂಕಣ ಬದ್ದರಾಗಿದ್ದೇವೆ. ನಾಗರೀಕರು ಸಹಕಾರ ಜತೆಗೆ ಮಾಹಿತಿ ನೀಡಬೇಕಾಗಿದೆ. ದೊಡ್ಡಬಳ್ಳಾಪುರ ವೃತ್ತದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದ ಶಾಂತ ಸ್ವಭಾವದ ಜನರಿದ್ದು ಹೊರಗಿನಿಂದ ಬಂದವರು, ಎಲ್ಲೋ ಕೊಲೆಯಾದ ದೇಹ ತಂದು ಇಲ್ಲಿ ಎಸೆಯುವುದು, ವಾಣಿಜ್ಯ ನಗರಿಗೆ ಬರುವ ಕೆಲವರಿಂದ ಬಹುತೇಕ ಪ್ರಕರಣಗಳು ದಾಖಲಾಗಿವೆಯೇ ಹೊರತು ಸ್ಥಳೀಯ ಸಾರ್ವಜನಿಕರಿಂದ ಯಾವುದೇ ಕುಕೃತ್ಯಗಳು ಇಲ್ಲಿವರೆಗೂ ಕಂಡುಬಂದಿಲ್ಲ ಎಂದರು.
ಇದನ್ನೂ ಓದಿ: ಕೆಆರ್ ಪೇಟೆಯಲ್ಲಿ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆ; ಮಾಜಿ ಶಾಸಕನ ಸಹೋದರನ ಮಳಿಗೆಗಳು ಧ್ವಂಸ
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ, ಸಮಾಜಕ್ಕಾಗಿ ದುಡಿದವರ, ಮಡಿದವರನ್ನು ಸಮಾಜ ಎಂದು ಮರೆಯುವುದಿಲ್ಲ ಎಂಬುದಕ್ಕೆ ಕಳೆದ ಐದು ವರ್ಷಗಳಿಂದ ತಾಲೂಕಿನ ಜನತೆ ನಡೆಸುತ್ತಾ ಬಂದಿರುವ ಈ ಕಾರ್ಯಕ್ರಮ ಸಾಕ್ಷಿಯಾಗಿದೆ. ಜಗದೀಶ್ ಅವರ ಸವಿನೆನಪಿಗಾಗಿ ನಗರದ ಡಿ. ಕ್ರಾಸ್ ಬಳಿ ಇರುವ ರೈಲ್ವೆ ಮೆಲ್ಸೆತುವೆ ವೃತ್ತವನ್ನು ಪಿಎಸ್ಐ ಜಗದೀಶ್ವೃತ್ತ ಎಂದು ನಾಮಕರಣ ಮಾಡಿ, ಪ್ರತಿ ವರ್ಷ ಅವರ ಜನ್ಮ ದಿನ ಹಾಗು ಹುತಾತ್ಮ ದಿನಾಚರಣೆಯನ್ನು ಅವರ ಅಭಿಮಾನಿಗಳು, ನಾಗರೀಕರೆಲ್ಲಾ ಸೇರಿ ಕಳೆದ ಐದು ವರ್ಷಗಳಿಂದ ಆಚರಿಸಿಕೊಂಡು ಬಂದಿರುವುದು ಸಂತಸ ತಂದಿದೆ. ಕಾರ್ಯಕ್ರಮದ ಅಂಗವಾಗಿ ಕೊರೋನಾ ಸೋಂಕು ನಿರ್ವಹಣೆಗೆ ಶ್ರಮಿಸುತ್ತಿರುವ ತಾಲೂಕು ಆರೋಗ್ಯಾಧಿಕಾರಿ ಡಾ. ಪರಮೇಶ್ವರ, ಎಎಸ್ಐ ವರಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಸೋಚನಾ, ಶಶಿಕಲಾ, ಪೊಲೀಸ್ ಸಿಬ್ಬಂದಿಯರಾದ ಬೆಟ್ಟಸ್ವಾಮಿಗೌಡ, ಶಿವಾನಂದ, ಕಾವ್ಯ, ಸುನೀಲ್ ಬಾಸಗಿ, ಪಾಂಡುರಂಗರನ್ನು ಸನ್ಮಾನಿಸಲಾಯಿತು.
ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಸೋಮಶೇಖರ್, ಶಂಕರಪ್ಪ, ದಿವಂಗತ ಜಗದೀಶ್ ತಾಯಿ ಕಮಲಮ್ಮ, ಮಡದಿ ರಮ್ಯಾ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಲ್ಲೇಶ್, ಕನ್ನಡ ಪಕ್ಷದ ವಿ. ಪರಮೇಶ್, ಮುಖಂಡರಾದ ದುನಿಯಾ ಚಂದ್ರು. ಕರವೇ ಪ್ರವೀಣ್ ಶೆಟ್ಟಿ ಬಣದ ವೆಂಕಟೇಶ್, ಎಸ್ ಎಲ್ ಎನ್ ವೇಣು, ಪು. ಮಹೇಶ್ ಮತ್ತಿತರಿದ್ದರು.
ವರದಿ: ನವೀನ್ ಕುಮಾರ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ