ದಾವಣಗೆರೆ(ಅಕ್ಟೋಬರ್. 13): ಹೆತ್ತವರಿಗೆ ಹೆಗ್ಗಣ ಮುದ್ದು ಅಂತಾರೆ. ಆದರೆ, ಇಲ್ಲೊಬ್ಬ ತಂದೆ ಎರಡೂವರೆ ವರ್ಷದ ತನ್ನ ಹೆತ್ತ ಮಗಳನ್ನೇ ಕೊಲೆ ಮಾಡಿ ಪೈಶಾಚಿಕ ಕೃತ್ಯ ಮೆರೆದಿದ್ದಾನೆ. ಗ್ರಾಮ ಪಂಚಾಯತ್ ಚುನಾವಣೆ ನಿಲ್ಲಲು ಎರಡನೇ ಹೆಂಡತಿ ಮಗು ಅಡ್ಡಿಯಾಗುತ್ತದೆ ಎಂದು ಈ ಕೃತ್ಯ ಎಸಗಿದ್ದಾನೆ. ಆರೋಪಿ ತಂದೆ ಗುಡ್ಡದಲ್ಲಿ ಹೂತಿಟ್ಟ ಶವ ಹೊರತೆಗೆದ ಪೊಲೀಸರು ಕೊಲೆ ಪ್ರಕರಣ ಭೇದಿಸಿದ್ದಾರೆ. ಜಗಳೂರು ತಾಲೂಕಿನ ಗುತ್ತಿದುರ್ಗದ 36 ವರ್ಷದ ನಿಂಗಪ್ಪ ತನ್ನ ಎರಡನೇ ಹೆಂಡತಿ ಶಶಿಕಲಾಗೆ ಜನಿಸಿದ ಎರಡು ವರ್ಷದ ಹೆಣ್ಣುಮಗುವನ್ನು ಹತ್ಯೆ ಮಾಡಿದ್ದಾನೆ. ತನ್ನ ಹುಟ್ಟೂರು ಗುತ್ತಿದುರ್ಗದ ಗೋಮಾಳ ಜಮೀನಿನಲ್ಲಿ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕರ್ಚಿಪ್ ನಿಂದ ಉಸಿರುಗಟ್ಟಿಸಿ ಸಾಯಿಸಿ ಮಣ್ಣಲ್ಲಿ ಹೂತಿಟ್ಟಿದ್ದನು. ಸೆಪ್ಟಂಬರ್ 9 ರಂದು ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಹೆಂಡತಿ ಶಶಿಕಲಾ ತನ್ನ ಗಂಡನ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿದ್ದಳು. ಪ್ರಕರಣದ ಜಾಡು ಹಿಡಿದ ಪೊಲೀಸರು ನಿಂಗಪ್ಪನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬರುತ್ತದೆ.
ನಿಂಗಪ್ಪನಿಗೆ ಮದುವೆಯಾಗಿ ಮೂರು ಮಕ್ಕಳಿದ್ದು, ಶಶಿಕಲಾ ಜೊತೆ ಲವ್ವಿಡವ್ವಿ ಇತ್ತು. ಇವಳನ್ನು ಕಳೆದ ಐದು ವರ್ಷದ ಹಿಂದೆ ಕದ್ದುಮುಚ್ಚಿ ಮದುವೆಯಾಗಿದ್ದ. ಕಳೆದ ಎರಡುವರೆ ವರ್ಷದ ಹಿಂದೆ ಇಬ್ಬರಿಗು ಹೆಣ್ಣು ಮಗು ಜನಿಸಿತ್ತು. ಈ ವಿಚಾರ ನಿಂಗಪ್ಪ ಮನೆ ಹಾಗು ಶಶಿಕಲಾ ಮನೆಯವರು ಗೊತ್ತಿರಲಿಲ್ಲ.
ಇತ್ತೀಚೆಗೆ ಶಶಿಕಲಾಗೂ ಬೇರೆ ಮದುವೆ ಮಾಡಬೇಕೆಂದು ಅವರು ಮನೆಯವರು ಗಂಡು ಹುಡುಕುತ್ತಿದ್ದರು. ಇತ್ತ ನಿಂಗಪ್ಪನು ಗ್ರಾಮ ಪಂಚಾಯತ್ ಚುನಾವಣೆಗೆ ನಿಲ್ಲುವ ಯೋಚನೆ ಮಾಡಿದ್ದ . ಶಶಿಕಲಾ ಹಾಗು ನಿಂಗಪ್ಪ ಒಂದೇ ಸಮುದಾಯದವರಾಗಿದ್ದರು. ಇಬ್ಬರ ಮದುವೆಯನ್ನು ಎರಡು ಕುಟುಂಬದವರು ಒಪ್ಪಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಎರಡನೇ ಮದುವೆ ಆದರೆ, ಗ್ರಾಮ ಪಂಚಾಯತ್ ಚುನಾವಣೆಗೆ ತೊಂದರೆ ಆಗಬಹುದು ಎಂದು ನಿಂಗಪ್ಪ ಭಾವಿಸಿದ್ದ. ತನ್ನ ಎರಡನೇ ಮದುವೆ ಮುಚ್ಚಿಡಲು ಮಗು ಅಡ್ಡಿಯಾಗ ಬಹುದೆಂದು ಮಗಳನ್ನು ಕೊಲೆ ಮಾಡಲು ನಿರ್ಧರಿಸಿದ.
ಸೆಪ್ಟಂಬರ್ 7 ರಂದು ಮಗುವನ್ನು ಕರೆದುಕೊಂಡು ಯಾವುದಾದರು ಅನಾಥ ಶ್ರಮಕ್ಕೆ ಬಿಡುವುದಾಗಿ ಹೇಳಿ ಕರೆದುಕೊಂಡು ಹೋದವನು ತನ್ನ ಹುಟ್ಟೂರು ಗುತ್ತಿದುರ್ಗದ ಗೋಮಾಳಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ : ‘ಬೆಂಗಳೂರು ಸಹವಾಸ ಬೇಡ ಎಂದು ಪುಣೆಗೆ ಹೋಗಿದ್ದೇನೆ, ದಯವಿಟ್ಟು ಬಿಟ್ಟುಬಿಡಿ’ – ರವಿಶಂಕರ್ ಹೆಂಡತಿ ಅಳಲು
ಕೊಲೆ ಮಾಡಿ ಶವ ಹೂತು ಹಾಕಿದ ತಂದೆಯ ಕೃತ್ಯ ಬಯಲಾಗಿದ್ದು, ಪೊಲೀಸರ ಸಮ್ಮುಖದಲ್ಲಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮಗುವನ್ನ ಕಳೆದುಕೊಂಡ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿದೆ. ಪೊರೆನ್ಸಿಕ್ , ಪೊಲೀಸರು, ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಹೂತಿಟ್ಟ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ