ಗುಜರಿ ವಸ್ತು ಬಳಸಿ ಮಗನಿಗಾಗಿ ಸಖತ್ ಜೀಪ್ ರೆಡಿ ಮಾಡಿದ ತಂದೆ, ರಸ್ತೆ ಮೇಲೆಲ್ಲಾ ಇದರದ್ದೇ ಸವಾರಿ !

Lockdown Effect: ಬ್ಯಾಟರಿ ಚಾಲಿತ ಈ ಜೀಪ್ ಬರೀ ಆಟದ ಸಾಮಾನಲ್ಲ. ರಸ್ತೆ ಮೇಲೆ ಆರಾಮಾಗಿ ಇದನ್ನು ಓಡಿಸಬಹುದು. ವೇಗವನ್ನೂ ಹೆಚ್ಚು ಕಡಿಮೆ ಮಾಡುವ ಅವಕಾಶವಿದ್ದು ಗುಜರಿಯಿಂದ ತಂದ ಕೆಲ ವಸ್ತುಗಳಿಗೆ ಮತ್ತಷ್ಟು ಪಾರ್ಟ್ಸ್ ಸೇರಿಸಿ ಮಾಡಿರೋ ಈ ಜೀಪ್ ನೋಡಲು ಪ್ರತಿದಿನ ಹಲವರು ಇವರ ಮನೆಗೆ ಬರುತ್ತಾರೆ.

ತಂದೆ ತಯಾರಿಸಿದ ಜೀಪ್​ನಲ್ಲಿ ಮಗ

ತಂದೆ ತಯಾರಿಸಿದ ಜೀಪ್​ನಲ್ಲಿ ಮಗ

 • Share this:
  ಬೀದರ್: ಮಕ್ಕಳ ಏಳಿಗೆಗಾಗಿ ಹೆತ್ತವರು ತಮ್ಮ ಜೀವನವನ್ನೆ ಮುಡುಪಾಗಿಡುವುದು ಸಾಮಾನ್ಯ ಆದರೆ ಇಲ್ಲೋಬ್ಬ ಅಪ್ಪ ಮಗನ ಖುಷಿಗಾಗಿ ಪುಟ್ಟದೊಂದು ಜೀಪ್ ತಯಾರಿಸಿ ಮಗನ ಪಾಲಿನ ನಿಜವಾದ ಹಿರೋ ಆಗಿದ್ದಾರೆ. ಹೌದು...ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಮುತ್ತಂಗಿ ಗ್ರಾಮದ ಅಮೀರ ಅಲಿ ಎಂಬ ವ್ಯಕ್ತಿ ತನ್ನ ಮಗನಿಗಾಗಿ ಜೀಪ್ ತಯಾರಿಸಿ ಮಗನ ಪ್ರೀತಿಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅವರು ಸದ್ಯ ಲಾಕ್ ಡೌನ್ ಇರುವ ಕಾರಣ ವರ್ಕ್ ಪ್ರಾಂ ಹೋಮ್‌ನಲ್ಲಿದ್ದು ಬಿಡುವಿನ ಸಮಯದಲ್ಲಿ ಮಗನಿಗಾಗಿ ಪುಟ್ಟ ಜೀಪ್ ತಯಾರಿಸಿ ಗ್ರಾಮದಲ್ಲಿ ಫೇಮಸ್ ಆಗಿದ್ದಾರೆ.
  ಹೇಗಿದೆ ಜೀಪ್...?

  ಬ್ಯಾಟರಿ ಚಾಲಿತ ಈ ಜೀಪ್ 5 ಅಡಿ ಉದ್ದ, 3 ಅಡಿ ಅಗಲ ಇದೆ.  24 ಓಲ್ಟ್ ನ 250 ವ್ಯಾಟ್ ಸಾಮರ್ಥ್ಯದ ಮೋಟರ್ ಅಳವಡಿಸಲಾಗಿದೆ. ಜೊತೆಗೆ 24 ಓಲ್ಟ್‌ನ 10 ಎಎಚ್ ಸಾಮರ್ಥ್ಯದ ಬ್ಯಾಟರಿ ಅಳವಡಿಸಿದ್ದಾರೆ. ಈ ಬ್ಯಾಟರಿಯನ್ನು ಎರಡೂವರೆ ಗಂಟೆ ಚಾರ್ಜ್ ಮಾಡಿದರೆ ಹತ್ತು ಕಿಲೋಮೀಟರ್‌ವರೆಗೆ ಎರಡು ಕ್ವಿಂಟಾಲ್ ಬಾರ ಹೊತ್ತಕೊಂಡು ಸಾಗುತ್ತದೆ. ಕಾಲಿನಲ್ಲಿ ರೇಸ್ ಅಳವಡಿಸಲಾಗಿದ್ದು, ನಾವು ರೇಸ್ ಎಷ್ಟು ತುಳಿಯುತ್ತೇವೆಯೋ ಅಷ್ಟು ವೇಗದಲ್ಲಿ ಈ ವಾಹನ ಓಡಾಡುತ್ತದೆ. ವೇಗ ಕಡಿಮೆ ಮಾಡಲು ಕಾಲಿನಲ್ಲಿಯೇ ಬ್ರೇಕ್ ಹಾಕುವ ವ್ಯವಸ್ಥೆಯಿದೆ ಎನ್ನುತ್ತಾರೆ ಅಲಿ.

  ಬಾಲ್ಯದ ಕನಸು ನನಸಾಯಿತು : ಬ್ಯಾಚುಲರ್ ಆಫ್‌ಸೈನ್ಸ್ ಆರ್ಟ್ (ಬಿಎಫ್‌ಎ) ಓದುಕೊಂಡಿರುವ ಅಮೀರ ಅಲಿ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಜೀಪ್ ಖರೀಸಬೇಕು ಎಂಬ ಆಸೆಯಿತ್ತು. ಆದರೆ ಈಡೇರಿರಲಿಲ್ಲ. ಹೀಗಾಗಿ ತನ್ನ ಮಗನಿಗಾದರೂ ಜೀಪ್ ತಯಾರಿಸಿ ಕೊಡಬೇಕೆಂದು ತಾನೇ ಪ್ಲಾನ್ ಮಾಡಿಕೊಂಡು ಅದಕ್ಕೆ ಬೇಕಾಗುವ ಕಚ್ಚಾ ವಸ್ತುಗಳನ್ನ ಅಲ್ಲಲ್ಲಿ ಹುಡುಕಿಕೊಂಡು, ಕೆಲವನ್ನ ಆನ್ ಲೈನ್ ಮೂಲಕ ತರಿಸಿಕೊಂಡು, ಕೆಲವು ವಸ್ತುಗಳನ್ನ ಗುಜರಿಯಲ್ಲಿನ ವಸ್ತುಗಳನ್ನ ತಂದು ವಾಹನ ತಯಾರಿಸಿದ್ದಾರೆ. ಜನವರಿ 9 ರಿಂದ ಆರಂಭಿಸಿ ಮೇ ನಲ್ಲಿ ಜೀಪ್ ರೆಡಿಯಾಗಿದೆ. ಈ ಜೀಪ್ ಎಂಥ ರಸ್ತೆಯಲ್ಲಿಯೂ ಸಲೀಸಾಗಿ ಓಡಾಡುತ್ತದೆ.

  ಈ ಜೀಪ ನೋಡಲು ದಿನಕ್ಕೆ ಹತ್ತಾರು ಜನರು ಬರುತ್ತಾರೆ. ಅಷ್ಟೊಂದು ಸೊಗಸಾಗಿ ಈ ಜೀಪ್ ಕಾಣುತ್ತದೆ. ಜೀಪ್ ತಯಾರು ಮಾಡಿದ ಖುಷಿಯಲ್ಲೇ ಅಮೀರ ಅಲಿ ಮೊತ್ತೊಂದು ಸಾಹಸಕ್ಕೆ ಕೈ ಹಾಕಿದ್ದು ತಮ್ಮ ತಂದೆಗಾಗಿ ತಾವೇ ಬ್ಯಾಟರಿ ಚಾಲಿತ ಬೈಕ್ ತಯಾರಿಸುತ್ತಿದ್ದಾರೆ. ಅದು ಕೂಡಾ ಐದಾರು ತಿಂಗಳಲ್ಲಿ ತಂದೆಯ ಕೈ ಸೇರಲಿದೆ. ಈಗ ತಮ್ಮ ಮಗನಿಗಾಗಿ ವಿಶೇಷ ರೀತಿಯ ಸೈನ್ಯದಲ್ಲಿ ಬಳಸುವ ಜೀಪ್ ತಯಾರಿಸಿ  ಬೆಸ್ಟ್ ಅಪ್ಪ ಆಗಿದ್ದಾರೆ.

  ಎರಡು ಟನ್ ನಷ್ಟು ಬಾರ ಹೊತ್ತುಕೊಂಡು ಚಲಿಸುವ ಈ ವಾಹನ ತಯಾರಿಸುವುದು ಸಾಮಾನ್ಯ ಮಾತಲ್ಲ, ಆಸಕ್ತಿ, ತಾಳ್ಮೆ, ಏಕಾಗ್ರತೆವಹಿಸಿ ಸಾಕಷ್ಟು ಪ್ಲ್ಯಾನ್ ಮಾಡಿಕೊಂಡು ವಾಹನ ತಯಾರಿಸಬೇಕಾಗುತ್ತದೆ. ತನ್ನ ಆಸೆಯನ್ನು ವಾಹನ ಕೊಳ್ಳಬೇಕು ಅದುಕೊಂಡಿದ್ದ ಅಮೀರ ಅದು ಸಾಧ್ಯವಾಗದೆ ಹೋದಾಗ ತನ್ನ ಮಗನಿಗೆ ತಾನೇ ಜೀಪ ತಯಾರಿಸಿಕೊಟ್ಟು ಮಾದರಿಯಾಗಿದ್ದಾನೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

  (ವರದಿ: ಚಮನಸಾಬ್ ಹೊಸಮನಿ, ಬೀದರ್)
  Published by:Soumya KN
  First published: