ಕೃಷಿ ಮತ್ತು ವಿದ್ಯುತ್ ಕಾಯ್ದೆಗಳನ್ನ ವಿರೋಧಿಸಿ ಹುಬ್ಬಳ್ಳಿಯಲ್ಲಿ ರೈತರಿಂದ ಪ್ರತಿಭಟನೆ

ಕರ್ನಾಟಕ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಕಾಯ್ದೆಗಳ ವಿರುದ್ಧ ಹುಬ್ಬಳ್ಳಿಯಲ್ಲಿ ರೈತರು ಪ್ರತಿಭಟನೆ ನಡೆಸಿದರು. ತಲೆ ಮೇಲೆ ಇಟ್ಟಿಗೆ ಹೊತ್ತು ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದರು.

ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ

  • Share this:
ಹುಬ್ಬಳ್ಳಿ: ನೂತನ ಎಪಿಎಮ್‌ಸಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆಗಳನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಯಿತು. ಕರ್ನಾಟಕ ಕಳಸಾ‌- ಬಂಡೂರಿ ರೈತ ಹೋರಾಟ ಸಮಿತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ತಲೆಯ ಮೇಲೆ ಇಟ್ಟಿಗೆಗಳನ್ನು ಹೊತ್ತು ರೈತ ಮುಖಂಡರು ಪ್ರತಿಭಟನೆ ಮಾಡಿದರು. ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಇಟ್ಟಿಗೆಗಳನ್ನು ಹೊತ್ತು ಪ್ರತಿಭಟನಾ ಮೆರವಣಿಗೆ ನಡೆಸಿದರು. ರೈತರೆಲ್ಲಾ ಕೃಷಿ ಬಿಟ್ಟು ಗಾರೆ ಕೆಲಸ ಮಾಡುತ್ತೇವೆ. ಸರ್ಕಾರ ರೈತರ ತಲೆಯ ಮೇಲೆ ಚಪ್ಪಡಿ ಕಲ್ಲು ಹಾಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಹುಬ್ಬಳ್ಳಿಯ ಪ್ರಧಾನ ಅಂಚೆ ಕಚೇರಿ ಹಾಗೂ ಟೆಲಿಫೋನ್ ಕಚೇರಿಗೆ ಮುತ್ತಿಗೆ ಹಾಕಿದರು. ರೈತ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೂಡಲೆ ಹಿಂಪಡೆಯಲು ಒತ್ತಾಯಿಸಿ ತಹಶೀಲ್ದಾರ್ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೇವಾದಳದ ಮಹತ್ವದ ಸಭೆ:

ಹುಬ್ಬಳ್ಳಿ - ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಸೇವಾದಳದ ಪದಾಧಿಕಾರಿಗಳ ಮಹತ್ವದ ಸಭೆ ಜರುಗಿತು.ಈ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಎಸ್. ಪ್ಯಾರಿಜಾನ್ ಅವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಸ್ತಿಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಸೇವಾದಳ ಎಂದರು.

ಇದನ್ನೂ ಓದಿ: ಆನೇಕಲ್​ನಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಗೂಡ್ಸ್ ವಾಹನ; ಶಾರ್ಟ್ ಸರ್ಕ್ಯೂಟ್ ಶಂಕೆ

ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಕರೆ ನೀಡಿದ ಅವರು ಸೇವಾದಳವನ್ನು ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ಬಲಿಷ್ಠಗೊಳಿಸಿ ಮುಂಬರುವ ಸ್ಥಳೀಯ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯ ಪತಾಕೆ ಹಾರಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹುಸೇನ್ ಹಳ್ಳೂರ, ಇನ್ಮುಂದೆ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂದರು. ನಿಷ್ಕ್ರಿಯ ಪದಾಧಿಕಾರಿಗಳನ್ನು ಕೈಬಿಟ್ಟು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪುನರ್ ರಚಿಸಲಾಗುವುದು. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ಗುರ್ತಿಸಿ ಅಂತಹವರಿಗೆ ಪಕ್ಷದ ಟಿಕೆಟ್ ನೀಡಲಾಗುವುದು. ಈಗಾಗಲೇ ಬ್ಲಾಕ್ ಅಧ್ಯಕ್ಷರಿಗೆ ಆಯಾ ವಾರ್ಡ್ ಗಳಲ್ಲಿ ಸೂಕ್ತ ಕಾರ್ಯಕರ್ತರನ್ನು ಗುರುತಿಸುವ ಜವಾಬ್ದಾರಿ ನೀಡಲಾಗಿದ್ದು, ಸ್ವತಃ ನಾನೇ ಹುಬ್ಬಳ್ಳಿ ಧಾರವಾಡ ಮಹಾನಗರದ ವಾರ್ಡಗಳಲ್ಲಿ ಸಂಚರಿಸಿ ಆಯಾ ವಾರ್ಡಗಳಲ್ಲಿ ಸಭೆಗಳನ್ನು ತಗೆದುಕೊಳ್ಳುವೆ ಎಂದರು.

ಜಿಲ್ಲಾ ಸೇವಾದಳದ ಅಧ್ಯಕ್ಷ ದೊಡ್ಡರಾಮಪ್ಪ ದೊಡ್ಡಮನಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ತಾರಾದೇವಿ ವಾಲಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ದುರ್ಗಪ್ಪ ಪೂಜಾರ. ಬಸವರಾಜ್ ಬೆಣಕಲ್, ಮಂಜುನಾಥ ಉಪ್ಪಾರ, ಇಕ್ಬಾಲ್ ಮುಲ್ಲಾ, ಗೋವಿಂದ ಬೇಲ್ಡೋಣಿ, ಸರೋಜಾ ಹೂಗಾರ, ಈರಣ್ಣ ನಾಗಣ್ಣವರ ಮೊದಲಾದವರು ಉಪಸ್ಥಿತರಿದ್ದರು.

ವರದಿ: ಪರಶುರಾಮ ತಹಶೀಲ್ದಾರ
Published by:Vijayasarthy SN
First published: