news18-kannada Updated:January 20, 2021, 8:05 PM IST
ಸಾಂದರ್ಭಿಕ ಚಿತ್ರ
ರಾಯಚೂರು:ನಾರಾಯಣಪುರ ಬಲದಂಡೆ ನಾಲೆಗೆ 5A ಕಾಲುವೆ ನಿರ್ಮಿಸಬೇಕೆಂದು ಆಗ್ರಹಿಸಿ ಮಸ್ಕಿ ತಾಲೂಕಿನ ರೈತರು ಪಾಮನಕಲ್ಲೂರಿನಲ್ಲಿ ನಡೆಸುತ್ತಿರುವ ಹೋರಾಟ 62ನೇ ದಿನಕ್ಕೆ ಕಾಲಿಟ್ಟಿದೆ. ಈ ಮಧ್ಯೆ ಮುಂದಿನ ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ರೈತರಲ್ಲಿ ಒಡಕು ಮೂಡಿಸುವ ಕೆಲಸವನ್ನು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನಾರಾಯಣಪುರ ಬಲದಂಡೆ ನಾಲೆಯಲ್ಲಿ 5A ಕಾಲುವೆ ಮಾಡಿ ಮಸ್ಕಿ ತಾಲೂಕಿನ 110 ಹಳ್ಳಿಗಳ 1.74 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸುವ ಕಾಲುವೆ ಕಾಮಗಾರಿ ಆರಂಭಿಸಲು, ತಕ್ಷಣವೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು, ಅಗತ್ಯ ಇರುವ 1800 ಕೋಟಿ ರೂಪಾಯಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ಮಸ್ಕಿ ತಾಲೂಕಿನ ಪಾಮನಕಲ್ಲೂರಿನಲ್ಲಿ ರೈತರು ನಡೆಸುತ್ತಿರುವ ಹೋರಾಟ 62ನೇ ದಿನಕ್ಕೆ ಕಾಲಿಟ್ಟಿದೆ.
ಹೋರಾಟ ಕೈಬಿಡಲು ಜನಪ್ರತಿನಿಧಿಗಳ ಪ್ರಯತ್ನ ವಿಫಲವಾಗಿದೆ. ಈ ಮಧ್ಯೆ ಜನವರಿ 9 ರಂದು ತಾಲೂಕು ಕೇಂದ್ರ ಮಸ್ಕಿಯನ್ನು ಬಂದ್ ಮಾಡಲಾಗಿತ್ತು. ರೈತರು ಅವಶ್ಯವಾಗಿರುವ 5A ಕಾಲುವೆಗೆ ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಧ್ಯೆ ಇತ್ತೀಚಿನ ಗ್ರಾಮ ಪಂಚಾಯಿತಿ ಚುನಾವಣೆಯನ್ನು ನಾಲೆಯ ವ್ಯಾಪ್ತಿಗೆ ಬರುವ 32 ಗ್ರಾಮಗಳ 4 ಗ್ರಾಮ ಪಂಚಾಯತಿಗಳ ಚುನಾವಣೆ ಬಹಿಷ್ಕರಿಸಿದ್ದರು. ಗ್ರಾಮ ಪಂಚಾಯತಿ ಬಹಿಷ್ಕರಿಸಿದಾಗ ಗಂಭೀರವಾಗಿ ತೆಗೆದುಕೊಳ್ಳದ ಮಸ್ಕಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಇಷ್ಟರಲ್ಲಿಯೇ ಮಸ್ಕಿ ವಿಧಾನಸಭೆ ಉಪಚುನಾವಣೆ ಬರಲಿದೆ. ಈ ಹಿನ್ನಲೆಯಲ್ಲಿ ರೈತರಲ್ಲಿ ಹಾಗೂ ಮತದಾರರಲ್ಲಿ ತಮ್ಮ ಪರವಾಗಿ ಇರುವಂತೆ ಮಾಡುವ ತಂತ್ರಗಾರಿಕೆ ಆರಂಭಿಸಿದ್ದಾರೆ.
ಇದನ್ನು ಓದಿ: ರೈತರು ರಸ್ತೆಗಿಳಿದು 50-60 ದಿನ ಹೋರಾಟ ಮಾಡ್ತಿದ್ದಾರೆ, ಇದು ದೇಶಕ್ಕೆ ದೊಡ್ಡ ಅಪಾಯ; ಡಿಕೆ ಶಿವಕುಮಾರ್
ಈಗಾಗಲೇ ತಮ್ಮ ಪರವಾಗಿ ಇರುವ ಗ್ರಾಮೀಣ ಭಾಗದ ರೈತರಿಂದ ನಮಗೆ 5A ಕಾಲುವೆಗಿಂತ ನಂದವಾಡಗಿ ಏತ ನೀರಾವರಿಯ ಎರಡನೆಯ ಹಂತದ ಕಾಮಗಾರಿಯಿಂದ ನೀರಾವರಿ ಸೌಲಭ್ಯ ಒದಗಿಸಲು ಎಂದು ಒಂದು ಗುಂಪಿನಿಂದ ಹೇಳಿಕೆ ಕೊಡಿಸಿದ್ದಾರೆ, ಆದರೂ ರೈತರು ನಮಗೆ 5A ಕಾಲುವೆಯೇ ಬೇಕೆಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಬೆದರಿರುವ ಪ್ರತಾಪಗೌಡ ಪಾಟೀಲ, ಮಂಗಳವಾರ ಮಸ್ಕಿ ತಾಲೂಕಿನ ಕೆಲವು ರೈತರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಜಲಸಂಪನ್ಮೂಲ ಸಚಿವರೊಂದಿಗೆ ಮಾತುಕತೆ ಮಾಡಿಸಿದ್ದಾರೆ. ನಮಗೆ ನಂದವಾಡಗಿ ಏತ ನೀರಾವರಿಯಿಂದ ಹರಿನೀರು ಕಾಲುವೆ ಮಾಡಿಸಿದರೆ ಸಾಕು ಎಂಬ ಹೇಳಿಕೆ ಕೊಡಿಸಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಬೆಂಗಳೂರಿನಲ್ಲಿ ಭರ್ಜರಿ ಆತಿಥ್ಯ ನೀಡಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಹೋರಾಟಗಾರರು ಬೆಂಗಳೂರು ಸಭೆಗೆ ಹೋದವರು ಪ್ರತಾಪಗೌಡರ ಬೆಂಬಲಿಗರು ಅವರಿಗೆ 5A ಕಾಲುವೆ ವ್ಯಾಪ್ತಿಗೆ ಬರುವವರಲ್ಲ ಎಂದು ಆರೋಪಿಸಿ ರೈತರ ಮಧ್ಯೆ ಒಡಕು ಮೂಡಿಸುತ್ತಿದ್ದಾರೆ, ಮಸ್ಕಿ ವಿಧಾನಸಭಾ ಕ್ಷೇತ್ರವಾದ ನಂತರ ಮೂರು ಬಾರಿಯೂ ಪ್ರತಾಪಗೌಡರೇ ಶಾಸಕರಾಗಿದ್ದು ಈ ಸಂದರ್ಭದಲ್ಲಿ ಈ ಕಾಲುವೆ ಅನುಷ್ಠಾನಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದ್ದಾರೆ.
ಈ ಮಧ್ಯೆ ಪ್ರತಾಪಗೌಡರೊಂದಿಗೆ ನಾಲೆಯ ವ್ಯಾಪ್ತಿಯ ರೈತರು ನಾಲೆ ಕುರಿತು ಮಾತನಾಡಿದಾಗ ತಮ್ಮ ಅಸಹಾಯಕತೆ ಹೇಳಿಕೊಂಡಿದ್ದಾರೆ. 5A ಕಾಲುವೆಗೆ ನೀರು ಅಲಾಕೇಷನ್ ಆಗಿಲ್ಲ. ಈ ನಾಲೆ ಅವೈಜ್ಞಾನಿಕವಾಗಿದೆ ಎನ್ನುವಂತೆ ಮಾತನಾಡಿದ್ದಾರೆ. ಈಗ ರೈತರು ನೀವು ಏನೇ ಮಾಡಿದರು ನಮ್ಮ ನೀರಿನ ಹಕ್ಕಿಗಾಗಿ ಹೋರಾಟ ನಡೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ. ಈಗ ಮಸ್ಕಿ ಬೈ ಎಲೆಕ್ಷನ್ ಘೋಷಣೆಯ ಮುನ್ನ ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಪ್ರತಾಪಗೌಡ ಶತಪ್ರಯತ್ನ ಮಾಡುತ್ತಿದ್ದಾರೆ. ಈ ಹೋರಾಟ ಮುಂಬರುವ ಬೈ ಎಲೆಕ್ಷನ್ ಮೇಲೆ ಪರಿಣಾಮ ಬೀರುವುದಂತೂ ಗ್ಯಾರಂಟಿ ಎನ್ನುವಂತಾಗಿದೆ. ಇದರಿಂದಾಗಿ ಹೋರಾಟ ಮೊಟುಕುಗೊಳಿಸಲು ತಂತ್ರಗಾರಿಕೆ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
Published by:
HR Ramesh
First published:
January 20, 2021, 8:05 PM IST