ಮಂಡ್ಯ (ಫೆಬ್ರವರಿ 11); ವಿರೋಧ ಪಕ್ಷಗಳು ಹಲವಾರು ಚಿಂತರಕರ ವಿರೋಧದ ನಡುವೆಯೂ ರಾಜ್ಯ ಸರ್ಕಾರ ಇತ್ತೀಚೆಗೆ ಗೋಹತ್ಯಾ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಮೂಲಕ ರಾಜ್ಯದಲ್ಲಿ ಇನ್ನೂ ಗೋಹತ್ಯೆ ಮಾಡುವಂತಿಲ್ಲ ಎಂಬ ವಿಚಾರವನ್ನು ಕಾನೂನಾತ್ಮಕವಾಗಿ ಜಾರಿ ಮಾಡುವ ಮೂಲಕ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಇದೀಗ ರಾಜ್ಯ ಸರ್ಕಾರ ಜಾರಿ ಮಾಡಿರುವ ಗೋಹತ್ಯೆ ನಿಷೇಧ ಕಾಯ್ದೆ ವಿರುದ್ಧ ಸಿಟ್ಟಿಗೆದ್ದುರುವ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ರೈತರು ಗಂಡು ಕರುಗಳನ್ನು ಪೊಲೀಸ್ ಠಾಣೆ ಮುಂದೆ ಕರೆ ತಂದು ಪ್ರತಿಭಟಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರವು ಗೋಹತ್ಯೆ ತಡೆ ಕಾಯ್ದೆಯನ್ನು ಜಾರಿ ಮಾಡಿದೆ. ಇದರಿಂದ ಗಂಡು ಕರುಗಳು, ಗೊಡ್ಡು ಹಸುಗಳು ಸೇರಿದಂತೆ ಅನುಪಯುಕ್ತ ರಾಸುಗಳನ್ನು ಮಾರದಂತೆ ನಿಷೇಧ ಹೇರಿದೆ. ಅವುಗಳನ್ನು ಸಾಕಿ ಸಲಹಲು ನಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರೈತರು ದೂರಿದ್ದಾರೆ.
ಸರ್ಕಾರವು ಹೋಬಳಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಗೋಶಾಲೆಗಳನ್ನು ತೆರೆಯಬೇಕು. ಅನುಪಯುಕ್ತ ರಾಸುಗಳು ಹಾಗೂ ಸೀಮೆ ಹಸುವಿನ ಗಂಡು ಕರುಗಳ ಸಾಕಾಣಿಕೆ ಮಾಡಬೇಕು. ಹಾಗೆ ಮಾಡದೇ ಸುಮ್ಮನೆ ಗೋಹತ್ಯೆ ತಡೆ ಕಾಯ್ದೆ ತಂದರೆ ನಾವೇನು ಮಾಡಬೇಕು ಎಂದು ರೈತರು ಕಿಡಿಕಾರಿದ್ದಾರೆ.
ಈಗಾಗಲೇ ರೈತರು ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ನಷ್ಟದಲ್ಲಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ತಂದಿರುವ ಈ ಕಾಯ್ದೆ ರೈತರ ಪಾಲಿಗೆ ಮರಣಶಾಸನವಾಗಿದೆ. ಹಾಗಾಗಿ ಕೂಡಲೇ ಸರ್ಕಾರ ಕಾಯ್ದೆ ವಾಪಸ್ ಪಡೆಯಬೇಕು ಇಲ್ಲ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪೋಲಿಸರಿಗೆ ಮಾಹಿತಿ ನೀಡದೇ ಧಿಡೀರನೆ ಪೋಲಿಸ್ ಠಾಣೆಗೆ ರೈತರು ಮುತ್ತಿಗೆ ಹಾಕಿದ್ದರಿಂದ ಪೊಲೀಸರು ಮತ್ತು ರೈತ ಮುಖಂಡರ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.
ಇದೇ ಮಾದರಿಯ ಪ್ರತಿಭಟನೆಗಳು ರಾಜ್ಯದೆಲ್ಲೆಡೆ ವರದಿಯಾಗುತ್ತಿವೆ. ರಾಜ್ಯ ಸರ್ಕಾರದ ಈ ಕಾಯ್ದೆಯಿಂದ ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲು ಉಪಯೋಗಕ್ಕೆ ಬಾರದ ಗಂಡುಕರುಗಳು, ಊನ ದನಗಳನ್ನು ಸಂತೆಗಳಲ್ಲಿ ಮಾರಿ ಆ ಹಣದಿಂದ ಹೊಸ ದನಗಳನ್ನು ತರುತ್ತಿದ್ದರು. ಈಗಿನ ಕಾಯ್ದೆ ಮಾರುವುದನ್ನೇ ನಿಷೇಧಿಸಿದೆ ಎಂದು ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ