ಚಿತ್ರದುರ್ಗದಲ್ಲಿ ವರ್ಷ ಕಳೆದರೂ ರೈತರಿಗೆ ಸಿಕ್ಕಿಲ್ಲ ಬೆಳೆ ವಿಮೆ ಪರಿಹಾರ; ಈ ವರ್ಷ ಕಂತು ಕಟ್ಟಲು ಹಿಂದೇಟು

2019- 20 ನೇ ಸಾಲಿಗೆ ಬೆಳೆ ವಿಮೆ ಪಾವತಿಸಿದ ರೈತರಿಗೆ ವರ್ಷ ಕಳೆದರೂ ವಿಮೆ ಹಣ ಮಾತ್ರ ಕೈ ಸೇರಿಲ್ಲ. ಈ ವರ್ಷ ಬೆಳೆ ವಿಮೆ ಕಟ್ಟಲು ಅವಕಾಶ ನೀಡಿದ್ದು ರೈತರು ಗೊಂದಲಕ್ಕೆ ಸಿಲುಕಿದ್ದಾರೆ.

ನಾಶವಾದ ಬೆಳೆ

ನಾಶವಾದ ಬೆಳೆ

  • Share this:
ಚಿತ್ರದುರ್ಗ: ಮಳೆ ಇಲ್ಲದೆ ಬೆಳೆ ನಷ್ಟ ಅನುಭವಿಸುವ ರೈತರಿಗೆ ಫಸಲ್ ಬಿಮಾ ಯೋಜನೆ ಮೂಲಕ ಪರಿಹಾರ ನೀಡುತ್ತೇವೆ ಅಂತ ಕೇಂದ್ರ ಸರ್ಕಾರ ಹೇಳುತ್ತಲೇ ಇದೆ. ಆದರೆ ಬೆಳೆ ವಿಮೆ ಕಟ್ಟಿದ ರೈತರಿಗೆ ಪರಿಹಾರ ಸಿಗದೆ ಸರ್ಕಾರಿ ಕಚೇರಿ ಅಲೆಯುವುದು ಮಾತ್ರ ತಪ್ಪಿಲ್ಲ. ಬರದ ಹಣೆ ಪಟ್ಟಿ ಹೊತ್ತಿರೋ ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ವರ್ಷ ಕಟ್ಟಿದ 22 ಸಾವಿರ ಹೆಕ್ಟೇರ್ ಬೆಳೆಗೆ ವಿಮೆ ಬಿಡುಗಡೆ ಮಾಡದೆ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಈ ಬಾರಿ ವಿಮೆ ಕಟ್ಟಬೇಕೋ ಬೇಡವೋ ಎಂಬ ಗೊಂದಲದಲ್ಲಿ ರೈತರು ಪರದಾಡುವಂತಾಗಿದೆ.

ಸಕಾಲಕ್ಕೆ ಮಳೆಯಾಗದೆ ಉತ್ತಮ ಬೆಳೆಗಳನ್ನ ಬೆಳೆಯಲಾಗದೆ  ಚಿತ್ರದುರ್ಗ ಜಿಲ್ಲೆ ಸತತ ಬರಗಾಲವನ್ನ ಅನುಭವಿಸಿದೆ. ಮಳೆಯಿಲ್ಲದೆ ಪ್ರತೀ ವರ್ಷವೂ ಬೆಳೆ ನಷ್ಟ ಅನುಭವಿಸುವ ಕಾರಣಕ್ಕೆ ಬರದ ನಾಡು ಎಂಬ ಹಣೆ ಪಟ್ಟಿ ಹೊತ್ತಿದೆ. ಜಿಲ್ಲೆಯಲ್ಲಿ ಪ್ರಮುಖ ಬೆಳೆಗಳಾದ ಮೆಕ್ಕೆಜೋಳ, ರಾಗಿ, ಈರುಳ್ಳಿ, ಶೇಂಗಾ, ಬೆಳೆಗಳನ್ನ ಬೆಳೆಯೋ ರೈತರಿಗೆ ಕಷ್ಟದ ಜೊತೆ ನಷ್ಟ ತಪ್ಪಿದ್ದಲ್ಲ. ಯಾಕಂದ್ರೆ ಜಿಲ್ಲೆಯಲ್ಲಿ ಸುರಿಯೋ ಅಲ್ಪ ಸ್ವಲ್ಪ ಮಳೆಗೆ ಉತ್ತಮ ಬೆಳೆಗಳನ್ನ ಬೆಳೆಯಬೇಕು, ಆದಾಯ ಗಳಿಸಬೇಕು ಅಂತ ಶ್ರಮ ಪಡುವ ಜಿಲ್ಲೆಯ ರೈತರ ಪರಿಶ್ರಮಕ್ಕೆ ಸರಿಯಾಗಿ ಬೆಳೆಗಳು ಕೈ ಸೇರುವುದಿಲ್ಲ. ಇನ್ನೇನು ಬೆಳೆ ಕೈಗೆ ಬಂತು, ಒಳ್ಳೆ ಅದಾಯ ಗಳಿಸಬಹುದು ಅಂದೊಕೊಳ್ಳುವ ಕಾಲಕ್ಕೆ ಆ ವರುಣ ದೇವ ಕೈ ಕೊಟ್ಟು ನಷ್ಟ ಅನುಭವಿಸುವಂತೆ ಮಾಡುತ್ತಾನೆ. ಹೀಗೆ ಪ್ರತೀ ವರ್ಷವೂ ನಷ್ಟ ಅನುಭವಿಸಿ ಪೆಟ್ಟು ತಿಂದಿರುವ ರೈತರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಆಶಾಕಿರಣವಂತೆ ಕಂಡಿತ್ತು. ಆದರೆ, ಅದರಿಂದಲೂ ರೈತರಿಗೆ ಪ್ರಯೋಜವಾಗಿಲ್ಲ.

ಇದನ್ನೂ ಓದಿ: ಬಿ.ವೈ. ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕರಿಂದಲೇ 5 ಸಾವಿರ ಕೋಟಿ ರೂ. ಭ್ರಷ್ಟಾಚಾರದ ಆರೋಪ: ಕಾಂಗ್ರೆಸ್ ಹೇಳಿಕೆ

ಕಳೆದ 2019- 20 ನೇ ಸಾಲಿಗೆ ಬೆಳೆ ವಿಮೆ ಪಾವತಿಸಿದ ರೈತರಿಗೆ ವರ್ಷ ಕಳೆದರೂ ವಿಮೆ ಹಣ ಮಾತ್ರ ಕೈ ಸೇರಿಲ್ಲ. ಈ ವರ್ಷ ಬೆಳೆ ವಿಮೆ ಕಟ್ಟಲು ಅವಕಾಶ ನೀಡಿದ್ದು ರೈತರು ಗೊಂದಲಕ್ಕೆ ಸಿಲುಕಿದ್ದಾರೆ. ಯಾಕಂದ್ರೆ ಕಳೆದ ವರ್ಷ ಕಟ್ಟಿದ ವಿಮೆ ಹಣ ವರ್ಷ ಕಳೆದರೂ ಬಂದಿಲ್ಲ, ಹಾಗೇಯೇ ಈ ವರ್ಷವೂ ಆಗಿಬಿಟ್ಟರೇ ಗತಿಯೇನು ಎಂಬ ಪ್ರಶ್ನೆ ಎದುರಾಗಿದೆ.  ಪಕೃತಿ ವಿಕೋಪ, ಹಾಗೂ ಬೆಳೆ ನಷ್ಟಕ್ಕೆ ಪರಿಹಾರ ಕೊಡ್ತೆವೆ ಎಂದಿದ್ದ ವಿಮಾ ಕಂಪನಿಗಳು ರೈತರಿಗೆ ನಷ್ಟ ಕಟ್ಟಿಕೊಟ್ಟಿಲ್ಲ. ಈ ಕುರಿತು ನ್ಯಾಯಕ್ಕಾಗಿ ಒಬ್ಬೊಬ್ಬ ರೈತರೂ ಕೃಷಿ ಇಲಾಖೆ, ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ, ಸಂಕಷ್ಟದಲ್ಲಿರುವ ರೈತರ ಕಷ್ಟಕ್ಕೆ ಸ್ಪಂದಿಸಬೇಕಾದ ಜಿಲ್ಲಾಡಳಿತ, ಕೃಷಿ ಇಲಾಖೆ ಅಧಿಕಾರಿಗಳು ಕ್ರಮ ವಹಿಸದೆ ನಿರ್ಲಕ್ಷ ವಹಿಸಿದೆ. ಈ ಕುರಿತು ಸರ್ಕಾರ ರೈತರ ನೆರವಿಗೆ ಬರಬೇಕು ಅಂತ ರೈತರು ಒತ್ತಾಯ ಮಾಡುತ್ತಿದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ ಆರೂ ತಾಲ್ಲೂಕುಗಳಲ್ಲಿ ಈ ಕುರಿತು ಕೆಲಸ ಮಾಡಬೇಕಾದ ಕೃಷಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ‌. ಅಷ್ಟೆ ಅಲ್ಲದೆ, ಬೆಳೆ ವಿಮೆ ಕಟ್ಟಲು ನಿಗದಿತ ದಿನಾಂಕದ ಕಾಲಾವಕಾಶ ನೀಡುವ ವಿಮಾ ಕಂಪನಿಗಳು ವಿಮೆ ಕಟ್ಟಿದ ರೈತರಿಗೆ ಪರಿಹಾರ ನೀಡಲು ದಿನಾಂಕ ನಿಗದಿ ಮಾಡುವುದಿಲ್ಲ. ಇದು ಯಾವ ಸೀಮೆ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಹಾಸನದಲ್ಲಿ ನಿರ್ಗತಿಕ ಮಹಿಳೆ ಮೇಲೆ ಅತ್ಯಾಚಾರ; ಆರೋಪಿಯ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಚಿತ್ರದುರ್ಗ ಜಿಲ್ಲೆಯ ಭರಮಸಾಗರ ಹೋಬಳಿಯಲ್ಲಿ ಕೆಲವೇ ಕೆಲವು ರೈತರಿಗೆ ಬೆಳೆ ವಿಮೆ ಪರಿಹಾರ ನೀಡಲಾಗಿದೆ. ಇನ್ನೂ 22 ಸಾವಿರ ಹೆಕ್ಟರ್ ಬೆಳೆಗೆ ಪರಿಹಾರ ನೀಡುವುದು ಬಾಕಿ ಇದೆ. ಇದನ್ನ ಗಮನಿಸಿ ರೈತರ ಕೈ ಹಿಡಿಯಬೇಕಾದ ಸರ್ಕಾರ ಇದ್ದೂ ಇಲ್ಲದಂತಿದೆ. ಜಿಲ್ಲಾಡಳಿತಕ್ಕೆ ರೈತರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ ವಿಮಾ ಕಂಪನಿಗಳ ಜೊತೆ ಹಾಗೂ ಸರ್ಕಾರದ ಜೊತೆ ಮಾತನಾಡಿ ಪರಿಹಾರ ಕೊಡಿಸಬೇಕು. ಇಲ್ಲವಾದಲ್ಲಿ ರೈತರು ಬೀದಿಗಿಳಿದು ಹೋರಾಟ ಮಾಡಾಬೇಕಾಗುತ್ತದೆ ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ, ಎದ್ದು ಬಿದ್ದು ರೈತರ ಪರವಾಗಿದ್ದೇವೆ ಎಂದು ಹೇಳುವ ಸರ್ಕಾರಗಳು ರೈತರ ಕಷ್ಟಗಳನ್ನ ಮಾತ್ರ ನೋಡುತ್ತಿಲ್ಲ. ಮಳೆಯಿಲ್ಲದೆ ನಷ್ಟ ಅನುಭವಿಸಿದ್ದ ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಬಾರದೆ ಇರೋದು ಗಾಯದ ಮೇಲೆ ಬರೆ ಎಳೆದಂತಾಗಿದೆ.ಇನ್ನಾದರೂ ರೈತ ಪರ ಎಂದು ಬಾಯಿ ಮಾತಲ್ಲಿ ಹೇಳಿಕೊಳ್ಳುವ ಸರ್ಕಾರ ತನ್ನ ಕಾಯಕದ ಮೂಲಕ ರೈತರ ಕಷ್ಟಕ್ಕೆ ಸ್ಪಂದಿಸಿ ಅವರ ನೆರವಿಗೆ ಬರಬೇಕಿದೆ.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: