ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ರಾತ್ರಿಯಿಡೀ ಸುರಿದ ಮಳೆಗೆ ರೈತರು ಕಂಗಲಾಗಿದ್ದು, ಕಾಫಿ, ಮೆಣಸು, ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹೊತ್ತಲ್ಲದ ಹೊತ್ತಲ್ಲಿ ಮಳೆ ಬಂದ ಪರಿಣಾಮ ರೈತರ ಬದುಕು ಮೂರಾಬಟ್ಟೆಯಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮೂಡಿಗೆರೆ ತಾಲೂಕಿನ ಫಲ್ಗುಣಿ, ಬಿನ್ನಡಿ, ಮಾಳಿಗನಾಡು, ಬಾಳೂರು, ಸಾರಗೋಡು ಗ್ರಾಮದಲ್ಲಿ ಕಾಫಿ, ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ.
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಜನರು ಹೈರಾಣಾಗಿದ್ದಾರೆ. ಜನವರಿ ತಿಂಗಳಲ್ಲಿ ಈ ರೀತಿಯ ಮಳೆ ಬರುತ್ತೆ ಅನ್ನೋದನ್ನ ಕನಸು ಮನಸ್ಸಿನಲ್ಲಿಯೂ ಮಲೆನಾಡಿಗರು ಅಂದುಕೊಂಡಿರಲಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಮಳೆ ಬಂದ ಪರಿಣಾಮ ರೈತರ ಬದುಕೇ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ ರೈತರು ಪಡ್ತಿರೋ ಕಷ್ಟ ನೋಡಿದ್ರೆ, ನಿಜಕ್ಕೂ ಮಲೆನಾಡಿನ ಶೋಚನಿಯ ಪರಿಸ್ಥಿತಿಯ ಕಣ್ಣಿಗೆ ಕಟ್ಟುತ್ತೆ. ತಾವು ಬೆಳೆದ ಬೆಳೆಗಳೇ ತಮ್ಮ ಕಣ್ಣೆದುರೇ ಅದೇ ಮಳೆಯಲ್ಲಿ ಕೊಚ್ಚಿ ಹೋಗ್ತಿರೋದನ್ನ ಕಂಡು ಮಲೆನಾಡಿಗರು ಅಕ್ಷರಶಃ ಕಣ್ಣೀರು ಹಾಕುವಂತಾಗಿದೆ. ವರ್ಷವಿಡೀ ಕಷ್ಟಪಟ್ಟು, ಬೆವರು ಸುರಿಸಿ ಸಾಲ ಸೋಲ ಮಾಡಿ ಭತ್ತದ ಬೆಳೆಯನ್ನ ಬೆಳೆದಿದ್ವಿ. ಊಟಕ್ಕಾದ್ರೂ ಇರಲಿ ಅಂತಾ ಹಾಕಿದ ಭತ್ತ ಇದೀಗ ಕರಗಿ ಹೋಗ್ತಿರೋದನ್ನ ಕಂಡು ವಿಷ ಕುಡಿಯೋದು ಒಂದೇ ಬಾಕಿ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ.
ಇದನ್ನು ಓದಿ: Video | ಗಂಗಾ ನದಿಯಲ್ಲಿ ಡಾಲ್ಫಿನ್ ಮೀನಿಗೆ ದೊಣ್ಣೆ, ಕೊಡಲಿಯಿಂದ ಹೊಡೆದ ಕೊಂದ ಸ್ಥಳೀಯರು!
ಮಳೆಗಾಲವನ್ನು ನಾಚಿಸುವಂತಹ ಮಳೆ, ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರ್ತಿರೋದು ರೈತರ ಬದುಕನ್ನೇ ಸರ್ವನಾಶ ಮಾಡ್ತಿದೆ. ಭತ್ತವನ್ನ ಒಂದು ಅನ್ನಕ್ಕಾಗಿ ಬೆಳೆದ್ರೆ, ಮತ್ತೊಂದು ಭತ್ತದ ಹುಲ್ಲನ ಮಾರಿದ್ರೆ ಸ್ವಲ್ಪ ಮಟ್ಟಿನ ಆದಾಯ ಕೂಡ ಬರುತ್ತೆ. ಕೊನೆ ಪಕ್ಷ ಭತ್ತದ ಹುಲ್ಲಿನಿಂದಾದ್ರೂ ಹಣ ಬರುತ್ತೆ ಎಂದು ಭಾವಿಸಿದ್ದ ರೈತರಿಗೆ, ಇದೀಗ ಕರಗಿ ಹೋಗ್ತಿರೋ ಭತ್ತದ ಹುಲ್ಲನ್ನ ಕಂಡು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಮಳೆಯಲ್ಲಿ ಹುಲ್ಲು ಕರಗುತ್ತಿರುವುದರಿಂದ ಮಾರಾಟಕ್ಕೆ ಯೋಗ್ಯವಾಗೋದು ಬಹುತೇಕ ಅನುಮಾನವೇ. ಅಲ್ಲದೇ ಈಗಾಗಲೇ ಭತ್ತ ಮೊಳಕೆ ಕೂಡ ಬರ್ತಿರೋದ್ರಿಂದ ಇದನ್ನ ಹೇಗೆ ಉಳಿಸಿಕೊಳ್ಳೋದು ಅನ್ನೋ ಚಿಂತೆ ರೈತರದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ