ಗದಗ: ಗದಗ ತಾಲೂಕಿನ ಹಿರೇಕೊಪ್ಪ ಗ್ರಾಮದ ಆ ಕುಟುಂಬದವರು ಭೂತಾಯಿಯನ್ನೇ ನಂಬಿ ಜೀವನ ನಡೆಸುತ್ತಿದ್ದವರು. ಕಳೆದ ಎರಡು ವರ್ಷಗಳಿಂದ ಒಂದೇ ಒಂದು ರೂಪಾಯಿ ಜಮೀನಿಂದ ಆದಾಯ ಬಂದಿರಲಿಲ್ಲ. ಒಂದೆಡೆ ಮಾಡಿದ ಸಾಲವನ್ನು ತೀರಿಸಲು ಆಗದಂತಹ ದಯನೀಯ ಸ್ಥಿತಿ. ಮತ್ತೊಂದೆಡೆ, ಬ್ಯಾಂಕ್ನಿಂದ ಸಾಲ ಮರುಪಾವತಿ ಮಾಡುವಂತೆ ನೋಟಿಸ್. ಮಾಡಿದ ಸಾಲವನ್ನು ಹೇಗೆ ತೀರಿಸಬೇಕು ಎನ್ನುವ ಚಿಂತೆಯಲ್ಲಿಯೇ ಕಾಲ ಕಳೆಯುತ್ತಿದ್ದ ಆ ಕುಟುಂಬದ ಯಜಮಾನ ಕೊನೆಗೆ ತನ್ನ ಜಮೀನಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಅಂದಹಾಗೆ ಗದಗ ತಾಲೂಕಿನ ಹೀರೆಕೊಪ್ಪ ಗ್ರಾಮದ 38 ವರ್ಷದ ಮಹೇಶ ವಡ್ಡಿನ ಎನ್ನುವ ರೈತ ಸಾಲಬಾಧೆಯಿಂದ ನೇಣಿಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ರೈತ.
ಮನೆಯಲ್ಲಿ ಕಿತ್ತು ತಿನ್ನುವ ಬಡತನ… ಇಡೀ ಕುಟುಂಬವನ್ನು ತನ್ನ 1 ಎಕರೆ ಜಮೀನಿನ ಮೂಲಕ ಸಾಕುವ ಜವಾಬ್ದಾರಿ... ಆದ್ರೆ, ಜಮೀನಿಂದ ಏನು ಆದಾಯ ಬರದಿದ್ದಾಗ ಆ ರೈತ ಮಹೇಶ ವಡ್ಡಿನ ಕುಗ್ಗಿ ಹೋಗಿದ್ದ. ಇದರ ನಡುವೆ ಬ್ಯಾಂಕ್ನಿಂದ ಸಾಲ ಮರುಪಾವತಿ ಮಾಡುವಂತೆ ನೋಟಿಸ್ ಬರುತ್ತಲೇ ಇದ್ದವು. ಹೀಗಾಗಿ ದಿಕ್ಕು ಕಾಣದೆ ಆ ರೈತ ನೇಣಿಗೆ ಶರಣಾಗಿದ್ದಾನೆ. ಕಳೆದ 13 ನೇ ತಾರೀಖಿನಂದು ಜಮೀನಿನ ಕೆಲಸಕ್ಕೆ ಹೋಗಿದ್ದ ಮಹೇಶ ವಡ್ಡಿನ ಮನೆಗೆ ವಾಪಸ್ ಬಂದಿರಲಿಲ್ಲ. ಬೇರೆ ಕಡೆ ಹೋಗಿದ್ದಾನೆ ಅಂತಾ ತಿಳಿದುಕೊಂಡ ಕುಟುಂಬಸ್ಥರು ಸುಮ್ಮನಾಗಿದ್ದರು. ಆದ್ರೆ ಮಹೇಶ ಅಂದೇ ತನ್ನ ಜಮೀನಿನಲ್ಲಿ ಗಿಡಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುರಿಗಾಯಿಗಳು ಮಹೇಶ ಶವವನ್ನು ಕಂಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬಂದು ನೋಡಿದ್ರೆ ಕೊಳೆತ ಸ್ಥಿತಿಯಲ್ಲಿ ಮಹೇಶನ ಶವ ಪತ್ತೆಯಾಗಿದೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನವರು ಸಾಲ ಮರುಪಾವತಿ ಮಾಡುವಂತೆ ನೋಟಿಸ್ ನೀಡಿದ್ದಕ್ಕೆ ನನ್ನ ಗಂಡ ಸಾವನ್ನಪ್ಪಿದ್ದಾನೆ ಎಂದು ಮೃತನ ಪತ್ನಿ ಜ್ಯೋತಿ ಬೆಟಗೇರಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಇದನ್ನೂ ಓದಿ: ರಾಮನಗರ ಜಿಲ್ಲೆಗೆ ಡಿ.ಕೆ. ಶಿವಕುಮಾರ್ ಕೊಡುಗೆಯೂ ಇದೇ, ಜನರಿಗೂ ಗೊತ್ತಿದೆ: ಡಿ.ಕೆ. ಸುರೇಶ್
ಇನ್ನು, ನೇಣಿಗೆ ಶರಣಾದ ಮಹೇಶ ವಡ್ಡಿನ ಹೀರೆಕೊಪ್ಪ ಗ್ರಾಮದ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ನಲ್ಲಿ 2017 ರಲ್ಲಿ 55 ಸಾವಿರ ರೂಪಾಯಿ ಸಾಲವನ್ನು ಮಾಡಿದ್ದ. ಆದ್ರೆ ಸರಿಯಾಗಿ ಬೆಳೆ ಬಾರದಿದ್ದಾಗ ಸಾಲವನ್ನು ಮರುಪಾವತಿ ಮಾಡಲು ಆಗಿರಲಿಲ್ಲವೆಂದು ಹೇಳಲಾಗುತ್ತಿದೆ.. 2020 ನವೆಂಬರ್ ತಿಂಗಳವರೆಗೆ ಅಸಲು ಬಡ್ಡಿ ಸಮೇತವಾಗಿ 83,770 ರೂಪಾಯಿ ಮರುಪಾವತಿ ಮಾಡುವಂತೆ ಬ್ಯಾಂಕ್ನಿಂದ ನೋಟಿಸ್ ಕಳುಹಿಸಿದ್ದಾರೆ. ಆದ್ರೆ ಜಮೀನಿನಿಂದ ಆದಾಯ ಬರುತ್ತಿಲ್ಲ. ಸಾಲವನ್ನು ತಿರಿಸೋದು ಹೇಗೆ ಎಂದು ತನ್ನ ಪತ್ನಿ ಜೊತೆ ಮಹೇಶ್ ಚರ್ಚೆ ಮಾಡುತ್ತಿದ್ದನಂತೆ. ಅದು ಸಾಲದೇ ಈತ ಸುಮಾರು ನಾಲ್ಕು ಲಕ್ಷ ರೂಪಾಯಿ ಕೈ ಸಾಲ ಬೇರೆ ಮಾಡಿಕೊಡಿದ್ದನಂತೆ. ಸಾಲದ ಒತ್ತಡ ಹೆಚ್ಚಿಗೆ ಆಗಿದ್ದು, ಜಮೀನಿನಿಂದ ಆದಾಯ ಬರದಿದ್ದಾಗ ಮನನೊಂದು ತನ್ನ ಜಮೀನಿನ ಮರವೊಂದಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಹೀಗಾಗಿ ನಮಗೆ ಸೂಕ್ತವಾದ ಪರಿಹಾರ ನೀಡಬೇಕು ಅಂತಾ ಮೃತನ ಸಹೋದರ ಒತ್ತಾಯ ಮಾಡಿದ್ದಾರೆ.
ತಂದೆ, ತಾಯಿ ಪತ್ನಿ ಹಾಗೂ ಓರ್ವ ಮಗಳನ್ನು ಸಾಕಿ ಸಲುಹುತ್ತಿದ್ದ ಮಹೇಶ ಸಾಲಬಾಧೆಯಿಂದ ನೇಣಿಗೆ ಶರಣಾಗಿದ್ದಾನೆ. ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ನವರು ಸಾಲ ಮರುಪಾವತಿ ಮಾಡುವಂತೆ ಒತ್ತಾಯ ಮಾಡಿದ್ದೇ ಸಾವಿಗೆ ಕಾರಣ ಎನ್ನುವ ಆರೋಪ ಕೇಳಿ ಬಂದಿದೆ. ಬೆಟಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆದ್ರೆ ನಾಡಿಗೆ ಅನ್ನವನ್ನು ಹಾಕುವ ರೈತ ಸಾಲಬಾಧೆಯಿಂದ ನೇಣಿಗೆ ಶರಣಾಗಿರೋದು ದುರಂತವೇ ಸರಿ.
ವರದಿ: ಸಂತೋಷ ಕೊಣ್ಣೂರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ