ಇಂದು ಪ್ರಧಾನಿ ಜೊತೆ ಕಿಸಾನ್ ಯೋಜನೆ ಫಲಾನುಭವಿಗಳ ಸಂವಾದಕ್ಕೆ ಕೋಲಾರದ ರೈತ ಚಂದ್ರಪ್ಪ ಆಯ್ಕೆ

ಕೋಲಾರದ ಪ್ರಗತಿಪರ ರೈತ ಚಂದ್ರಪ್ಪ ಅವರು ಕೃಷಿಗಾರಿಕೆಯಲ್ಲಿ ಲಾಭ ಗಳಿಸುವುದು ಹೇಗೆಂದು ಸ್ವತಃ ಮಾದರಿಯಾಗಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಯಾಗಿ ಅವರು ಪ್ರಧಾನಿ ಜೊತೆ ನೇರ ಸಂವಾದದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಹೊಲದಲ್ಲಿ ಚಂದ್ರ ಉಳುಮೆ

ಹೊಲದಲ್ಲಿ ಚಂದ್ರ ಉಳುಮೆ

  • Share this:
ಕೋಲಾರ(ಡಿ. 25): ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳ ಜೊತೆಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ  ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ  ಜುಂಜನಹಳ್ಳಿ ಗ್ರಾಮದ ಪ್ರಗತಿಪರ ರೈತ ಚಂದ್ರಪ್ಪ ಅವರು ಪ್ರಧಾನ ಮಂತ್ರಿ ಕಾರ್ಯಲಯದಿಂದಲೇ ಆಯ್ಕೆಯಾಗಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ನಬಾರ್ಡ್ ಆಡಳಿತ ಕಚೇರಿಯಲ್ಲಿ ನೇರ ಸಂವಾದ ಕಾರ್ಯಕ್ರಮ ನಡೆಯಲಿದೆ.

ಮೂಲತಃ ರೈತ ಕುಟುಂಬದಿಂದ ಹಿನ್ನೆಲೆ ಹೊಂದಿರುವ ಚಂದ್ರಪ್ಪ ಅವರು 10 ಎಕರೆಯ ಪ್ರದೇಶದಲ್ಲಿ ಆಲೂಗಡ್ಡೆ, ಟೊಮೆಟೊ, ಚಿಕ್ಕಡಿಕಾಯಿ, ಸೇರಿದಂತೆ ವಿವಿಧ ಬೆಳೆಗಳನ್ನ, ಮಳೆಯಾಶ್ರಿತ ನೀರಲ್ಲಿ ಹಾಗು ಬೋರ್‍ವೆಲ್ ಸಹಾಯದಿಂದ, ಕೃಷಿಹೊಂಡಕ್ಕೆ ನೀರನ್ನ ತುಂಬಿಸಿಕೊಂಡು, ಕಾಲ ಕಾಲಕ್ಕೆ ಉತ್ತಮ ಫಸಲಿನ ಬೆಳೆಗಳನ್ನ ಬೆಳೆದು ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ತಮ್ಮ ಕೃಷಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸಿಗುವ, ವಾರ್ಷಿಕ 12 ಸಾವಿರ ಹಣದ ಸಹಾಯದನದಿಂದ ಆಲೂಗಡ್ಡೆ ಬಿತ್ತನೆಬೀಜ ಮತ್ತು ಟೊಮೆಟೊ ಬೆಳೆ ಹಾಕಲು ಸಹಕಾರಿಯಾಗಿದೆ ಎಂದು ಚಂದ್ರಪ್ಪ ತಿಳಿಸಿದ್ದಾರೆ.

ಚಂದ್ರಪ್ಪ ಕಿಸಾನ್ ಸಮ್ಮಾನ್ ಯೋಜನೆ ಫಲಾನುಭವಿಯಾಗಿದ್ದಾರೆ. ಹಿರಿಯ ಮಗನಾಗಿ ಅವಿಭಕ್ತ ಕುಟುಂಬವನ್ನು ಮುನ್ನಡೆಸುತ್ತಿದ್ದಾರೆ. ಪಿತ್ರಾರ್ಜಿತವಾಗಿ ಸಿಕ್ಕಿರುವ 10 ಎಕರೆ ಪ್ರದೇಶದಲ್ಲಿ ನಿರಂತರವಾಗಿ ಕೃಷಿ ಚಟುವಟಿಕೆ ನಡೆಸುತ್ತಿರುವ ಇವರು, ಹೆಚ್ಚಿಗೆ ಟೊಮೆಟೊ, ಆಲೂಗಡ್ಡೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಚಂದ್ರಪ್ಪ ಕೃಷಿಯಲ್ಲಿಯೇ ಅಲ್ಲದೆ, ಹೈನೋದ್ಯಮದಲ್ಲೂ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಮನೆಯಲ್ಲಿ 4 ಹಸುಗಳನ್ನ ಸಾಕುತ್ತಿದ್ದಾರೆ.

ಇದನ್ನೂ ಓದಿ: ಚಾಮರಾಜನಗರ: ಶಾಲಾರಂಭದ ಹೊತ್ತಲ್ಲೇ 15 ನರ್ಸಿಂಗ್ ವಿದ್ಯಾರ್ಥಿನಿಯರಿಗೆ ಕೊರೋನಾ ಸೋಂಕು

ಪ್ರಧಾನ ಮಂತ್ರಿ ಮೋದಿಯವರ ಜೊತೆಗೆ ನೇರಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಬಗ್ಗೆ ರೈತ ಚಂದ್ರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಬಡತನದಲ್ಲಿಯೇ ಬೆಳೆದು ಬಂದ ನಾವು ಕೃಷಿಯಲ್ಲಿ ಶ್ರಮಿಸಿದ ಪರಿಣಾಮ ಭೂಮಿ ನಮ್ಮ ಕೈ ಹಿಡಿದಿದೆ. ಇತ್ತೀಚೆಗೆ ಆಲೂಗಡ್ಡೆ ಹಾಗು ಟೊಮೆಟೊ ಫಸಲಿನ ಮೂಲಕ ಸುಮಾರು 40 ಲಕ್ಷಕ್ಕೂ ಅಧಿಕ ಲಾಭ ಗಳಿಸಲು ಸಾಧ್ಯವಾಯಿತು ಎಂದು ಚಂದ್ರಪ್ಪ ಹೇಳುತ್ತಾರೆ.  ಮೋದಿಯವರ ಜೊತೆಗೆ ನೇರ ಸಂವಾದ ನಡೆಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ನನ್ನನ್ನ ಯಾವ ಮಾನದಂಡದ ಆಧಾರದರಲ್ಲಿ ಆಯ್ಕೆ ಮಾಡಿದ್ದಾರೆಂದು ತಿಳಿದಿಲ್ಲ. ನನ್ನ ಜೀವನದಲ್ಲಿ ಇಂತಹ ಕ್ಷಣ ಅನಿರೀಕ್ಷಿತ. ಇದು ನನ್ನ ಪಾಲಿಗೆ ಸಿಕ್ಕ ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನು ಸಂವಾದ ಕಾರ್ಯಕ್ರಮದಲ್ಲಿ ಕಿಸಾನ್ ಸಮ್ಮಾನ್ ಯೋಜನೆಗಳನ್ನ ಚರ್ಚೆ ಮಾಡುವ ಜೊತೆಗೆ, ಬಯಲುಸೀಮೆ ಕೋಲಾರ ಜಿಲ್ಲೆಗೆ ನದಿ ಜೋಡಣೆ ಕಾರ್ಯಕ್ರಮದಡಿ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಪ್ರಧಾನಿಗಳಿಗೆ ಮನವಿ ಮಾಡುವುದಾಗಿ ರೈತ ಚಂದ್ರಪ್ಪ ತಿಳಿಸಿದ್ದಾರೆ.

ಒಟ್ಟಿನಲ್ಲಿ ಚಿನ್ನದನಾಡು ಕೋಲಾರದ ರೈತ, ಪ್ರಧಾನಿಗಳ ಜೊತೆಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಅವಿಸ್ಮರಣೀಯ ವಿಚಾರವೆಂದು ಚಂದ್ರಪ್ಪ ಬಣ್ಣಿಸಿದರೆ, ವಿಚಾರ ತಿಳಿದು ಚಂದ್ರಪ್ಪ ಅವರಿಗೆ ಪ್ರತಿ ಗಂಟೆಗೊಬ್ಬ ಸ್ನೇಹಿತರು ಕರೆ ಮಾಡಿ ಶುಭಾಶಯಗಳನ್ನ ಹೇಳುತ್ತಿದ್ದಾರೆ.

ವರದಿ: ರಘುರಾಜ್
Published by:Vijayasarthy SN
First published: