ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ; ಚಿಂಚಲಿಯ ಪ್ರಸಿದ್ಧ ಮಾಯಕ್ಕಾದೇವಿ ಜಾತ್ರೆ ರದ್ದು, ಬೀದಿಗೆ ಬಿದ್ದ ನೂರಾರು ವ್ಯಾಪಾರಿಗಳು

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಅನ್ನೋ ಹಾಗೆ, ಜಿಲ್ಲಾಡಳಿತವು ಕೊರೋನಾ ಅನ್ನೋದನ್ನೇ ನೆಪವಾಗಿ ಇಟ್ಟುಕೊಂಡು ಜಾತ್ರೆಯನ್ನೇ ಬಂದ್ ಮಾಡಿ ಸಣ್ಣ ಪುಟ್ಟ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆದಿದೆ. ಈ ಮೂಲಕ ಬಡ ವ್ಯಾಪಾರಿಗಳ ವರ್ಷದ ಕೂಳನ್ನು ಕಸಿದುಕೊಂಡಂತಾಗಿದೆ. 

ಮಾಯಕ್ಕದೇವಿ ದೇವಾಲಯ.

ಮಾಯಕ್ಕದೇವಿ ದೇವಾಲಯ.

  • Share this:
ಚಿಕ್ಕೋಡಿ: ಜಾತ್ರೆ ಬಂತು ಜಾತ್ರೆ. ನಮ್ಮೂರು ಜಾತ್ರೆ ನಮಗೆಲ್ಲ ಹಬ್ಬ. ಉತ್ತರ ಕರ್ನಾಟಕದ ಸುಪ್ರಸಿದ್ಧ ಮಾಯಕ್ಕಾ ದೇವಿಯ ಜಾತ್ರೆ ಬಂತು ಅಂತಾ ಲಕ್ಷಾಂತರ ರೂಪಾಯಿ ವ್ಯಾಪಾರ ವಹಿವಾಟು ಮಾಡೋದಕ್ಕಾಗಿ ಇಲ್ಲಿನ 500ಕ್ಕೂ ಹೆಚ್ಚು ವ್ಯಾಪಾರಸ್ಥರು ತುದಿಗಾಲ ಮೇಲೆ ನಿಂತಿದ್ದರು. ಸುಮಾರು ಒಂದು ತಿಂಗಳ ಕಾಲ ನಡೆಯುವ ಜಾತ್ರೆಯಲ್ಲಿ ವರ್ಷಪೂರ್ತಿ ಕುಂತು ತಿನ್ನೋವಷ್ಟು ದುಡ್ಡು ಸಂಪಾದನೆ ಮಾಡಬಹುದು ಅನ್ನೋ ಲೆಕ್ಕಾಚಾರ ವ್ಯಾಪಾರಸ್ಥರದ್ದಾಗಿತ್ತು. ವರ್ಷಕ್ಕೊಮ್ಮೆ ಬರೋ ಈ ಜಾತ್ರೆಯನ್ನೇ ನಂಬಿ ಕೂತಿದ್ದ ಸಣ್ಣ ಪುಟ್ಟ ವ್ಯಾಪಾರಸ್ಥರ ಲೆಕ್ಕಾಚಾರಕ್ಕೆ ಜಿಲ್ಲಾಡಳಿತ ಮಣ್ಣು ಹಾಕಿದೆ.

ಹೌದು, ಪ್ರತಿ ವರ್ಷ 30 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ಚಿಂಚಲಿ ಮಾಯಕ್ಕಾ ಜಾತ್ರೆಯಲ್ಲಿ ಈ ಬಾರಿ ನೀರವ ಮೌನ ಆವರಿಸಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಹಾವಳಿ ಅಂತಾ ಕರ್ನಾಟಕದಲ್ಲಿಯ ಚಿಂಚಲಿ ಮಾಯಕ್ಕಾದೇವಿ ಜಾತ್ರೆಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ ಪರಿಣಾಮ ಇಲ್ಲಿನ ನೂರಾರು ಸಣ್ಣ ಪುಟ್ಟ ವ್ಯಾಪಾರಿಗಳು ಬೀದಿಗೆ ಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿಯ ಜಾತ್ರೆಯು ಭಾರತ ಹುಣ್ಣಿಮೆಯಂದು ಪ್ರಾರಂಭವಾಗಿ ಬರುವ ಹುಣ್ಣಿಮೆಯವರೆಗೂ ನಡೆಯೋ ಉತ್ತರ ಕರ್ನಾಟಕದ ಅತೀ ದೊಡ್ಡ ಜಾತ್ರೆಯು ಇದಾಗಿದೆ. ಈ ಜಾತ್ರೆಗೆ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಸೇರಿದಂತೆ ವಿವಿಧೆಡೆಯಿಂದ 30 ಲಕ್ಷಕ್ಕೂ ಹೆಚ್ಚು ಭಕ್ತರು ಪ್ರತಿ ವರ್ಷ ಸೇರುತ್ತಾರೆ. ಹೀಗಾಗಿ ಇಷ್ಟು ದಿನಗಳ ಕಾಲ ಕೋವಿಡ್ 19 ಲಾಕಡೌನ್ ನಿಂದ ವ್ಯಾಪಾರ ವಹಿವಾಟು ಇಲ್ಲದೇ ಇಲ್ಲಿನ ಸಣ್ಣ ಪುಟ್ಟ ವ್ಯಾಪಾರಿಗಳು ಮುಂದೇನು ಗತಿ ಅಂತಾ ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಆದರೆ ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಜಿಲ್ಲಾಡಳಿತ ಚಿಂಚಲಿ ಪಟ್ಟಣದಲ್ಲಿ ಈ ಕುರಿತು ಸಭೆ ನಡೆಸಿ ಜಾತ್ರೆ ಮಾಡೋದಕ್ಕೆ, ಇಲ್ಲಿ ವ್ಯಾಪಾರ ವಹಿವಾಟನ್ನು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ನಡೆಸೋದಕ್ಕೆ ಅನುಮತಿ ನೀಡಿತ್ತು. ಹೀಗಾಗಿ ಒಬ್ಬೊಬ್ಬ ವ್ಯಾಪಾರಸ್ಥರು ತೆಂಗು, ಕರ್ಪೂರ, ಹಣ್ಣು ಕಾಯಿ, ಮಿಠಾಯಿ ಸೇರಿದಂತೆ ಲಕ್ಷಾಂತರ ರೂ. ವ್ಯಯಿಸಿ ಜಾತ್ರೆಯಲ್ಲಿ ವ್ಯಾಪಾರ ಮಾಡೋದಕ್ಕೆ ಸಜ್ಜಾಗಿದ್ದರು. ಆದರೆ ಇನ್ನೇನು ಜಾತ್ರೆ ಮಾಡೋದಕ್ಕೆ ಸಜ್ಜಾಗುತ್ತಿದ್ದಂತೆಯೇ ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ರೂಪಾಂತರಿ ವೈರಸ್ ಹಾವಳಿಯಿಂದ ಮಾಯಕ್ಕಾದೇವಿ ಜಾತ್ರೆಯನ್ನೇ ನಿಷೇಧ ಮಾಡಿರೋದು ವ್ಯಾಪಾರಸ್ಥರಿಗೆ  ದೊಡ್ಡ ಪೆಟ್ಟು ನೀಡಿದೆ.

ಇದನ್ನು ಓದಿ: ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಮಾರ್ಚ್ 20ಕ್ಕೆ ಕರ್ನಾಟಕದಲ್ಲಿ ರೈತ ಮಹಾಪಂಚಾಯತ್

ಬಡವರ ಭಾರತ ಹುಣ್ಣಿಮೆ ಅಂತಲೇ ಈ ಭಾಗದಲ್ಲಿ ಕರೆಯಿಸಿಕೊಳ್ಳುವ ಈ ಹುಣ್ಣಿಮೆಯ ಸಂದರ್ಭದಲ್ಲಿ ಒಂದು ತಿಂಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆಯೋ ಈ ಜಾತ್ರೆಯಲ್ಲಿ ಭಕ್ತರು ಭಾಗವಹಿಸುವುದಕ್ಕೂ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಮಹಾರಾಷ್ಟ್ರ ರಾಜ್ಯದಲ್ಲಿ ಕೊರೋನಾ ಬಂದ್ರೆ ಚಿಂಚಲಿ ಪಟ್ಟಣದಲ್ಲಿ ನಡೆಯೋ ಜಾತ್ರೆಯನ್ನು ರದ್ದು ಮಾಡೋ ಮೂಲಕ ಲಕ್ಷಾಂತರ ಭಕ್ತರ ನಿರಾಸೆ ಉಂಟು ಮಾಡಿದೆ. ಅಲ್ಲದೇ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ಗಡಿಯಲ್ಲಿ ಕೊರೋನಾ ಪರೀಕ್ಷೆ ನಡೆಸಿ ಮಹಾರಾಷ್ಟ್ರ ಭಕ್ತರಿಗೆ ಚಿಂಚಲಿ ಮಾಯಕ್ಕದೇವಿಯ ಜಾತ್ರೆಯಲ್ಲಿ ಭಾಗವಹಿಸಲು ಅನುಮತಿ ನೀಡಬಹುದಾಗಿತ್ತು.ಅಥವಾ ಈಗಾಗಲೇ ಮಹಾರಾಷ್ಟ್ರದಿಂದ ಬರುವವರಮ್ನ ಗಡಿಯಿಂದಲೇ ವಾಪಸ್‌ ಕಳಿಸುವ ಕೆಲಸ ಕೂಡ ನಡೆಯುತ್ತಿದೆ. ನಮ್ಮ ಕರ್ನಾಟಕದ ಭಕ್ತರಿಗೆ ಅವಕಾಶ ನೀಡಿ ಜಾತ್ರೆಗೆ ಅನುಮತಿ ನೀಡಬಹುದಾಗಿತ್ತು. ಆದರೆ ಜಿಲ್ಲಾಡಳಿತ ಜಾತ್ರೆಯನ್ನೇ ರದ್ದು ಮಾಡಿದ್ದು ಸರಿಯಾದ ಕ್ರಮವಲ್ಲ. ಈ ಮೊದಲು ಜಾತ್ರೆಗೆ ಅನುಮತಿ ನೀಡಿದ್ದರಿಂದ ಲಕ್ಷಾಂತರ ಬಂಡವಾಳದ ಹೂಡಿಕೆ ಮಾಡಿದ್ದೇವೆ. ಈಗ ಜಾತ್ರೆ ರದ್ದಾಗಿ ನಾವು ಬೀದಿ ಪಾಲಾಗಿದ್ದೇವೆ ಎಂದು ಇಲ್ಲಿನ ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಒಟ್ಟಿನಲ್ಲಿ, ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಅನ್ನೋ ಹಾಗೆ, ಜಿಲ್ಲಾಡಳಿತವು ಕೊರೋನಾ ಅನ್ನೋದನ್ನೇ ನೆಪವಾಗಿ ಇಟ್ಟುಕೊಂಡು ಜಾತ್ರೆಯನ್ನೇ ಬಂದ್ ಮಾಡಿ ಸಣ್ಣ ಪುಟ್ಟ ವ್ಯಾಪಾರಸ್ಥರ ಹೊಟ್ಟೆ ಮೇಲೆ ಹೊಡೆದಿದೆ. ಈ ಮೂಲಕ ಬಡ ವ್ಯಾಪಾರಿಗಳ ವರ್ಷದ ಕೂಳನ್ನು ಕಸಿದುಕೊಂಡಂತಾಗಿದೆ.
Published by:HR Ramesh
First published: