ಕೊಡಗು: ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆ ಜೆ ಹಳ್ಳಿ ಗಲಾಟೆ ಪ್ರಕರಣದ ಆರೋಪಿಯೂ ಆಗಿರುವ ಹಾಗೂ ಉಗ್ರ ಸಂಘಟನೆಯೊಂದಿಗೆ ಸಂಬಂಧ ಇದೆ ಎನ್ನಲಾಗುತ್ತಿರುವ ಕೊಡಗಿನ ವಿರಾಜಪೇಟೆಯ ಸಮೀವುದ್ದೀನ್ನ ಮೂಲ ಪಾಕಿಸ್ತಾನ ಎಂಬ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಸಮೀವುದ್ದೀನ್ ತಾತ ಖಾನ್ ಸಾಬ್ ಮೂಲತಃ ಪಾಕಿಸ್ತಾನದವರು ಎನ್ನೋ ಅಚ್ಚರಿಯ ಸಂಗತಿ ಬಯಲಾಗಿದೆ.
ಈತನ ತಾತ ಖಾನ್ ಸಾಬ್ ಪಾಕಿಸ್ತಾನ ವಿಭಜನೆ ವೇಳೆ ಭಾರತಕ್ಕೆ ಬಂದು, ನಮ್ಮದೇ ರಾಜ್ಯದ ಕೊಡಗಿನ ವಿರಾಜಪೇಟೆ ಪಟ್ಟಣದಲ್ಲಿ ಮಾಂಸ ಮಾರಾಟ ಮಾಡಿ ಬದುಕುತಿದ್ದರಂತೆ. ಇವರ ಮಗ ರಫೀಕ್ ಖಾನ್ ಕೂಡ ಅದೇ ಕೆಲಸ ಮಾಡಿಕೊಂಡಿದ್ದರಂತೆ. ರಫೀಕ್ ಖಾನ್ ಮಗ ಸಮೀವುದ್ದೀನ್ ವಿರಾಜಪೇಟೆಯಲ್ಲೇ ಓದಿದ್ದು. ಬಳಿಕ ಬೆಂಗಳೂರಿನ ಫಾತಿಮಾ ಎಂಬಾಕೆಯೊಂದಿಗೆ ವಿವಾಹವಾಗಿ 20 ವರ್ಷದ ಹಿಂದೆಯೇ ಬೆಂಗಳೂರಿಗೆ ಹೋಗಿ ನೆಲಸಿದರೆನ್ನಲಾಗಿದೆ. ಈತನ ತಂದೆ ರಫೀಕ್ ಖಾನ್ ಕಳೆದ 6 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಅವರ ಮೃತ್ಯು ಬಳಿಕ ಈ ಮನೆಯನ್ನು ಬಾಡಿಗೆಗೆ ನೀಡಲಾಗಿದೆ.
ಸಮೀವುದ್ದೀನ್ ಓದುವಾಗ ಒಳ್ಳೆಯ ಹುಡುಗನಾಗಿದ್ದ. ಆದರೆ ಬೆಂಗಳೂರಿಗೆ ಹೋದ ಬಳಿಕ ಏನಾದ, ಹೇಗೆ ಬೆಳೆದ ಎನ್ನೋದು ಗೊತ್ತಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.
ಇದನ್ನೂ ಓದಿ: ಬೆಂಗಳೂರು ಗಲಭೆ: 40 ಆರೋಪಿಗಳು ವ್ಯವಸ್ಥಿತ ಉಗ್ರ ದಾಳಿ, ಕೋಮುಗಲಭೆಯಲ್ಲಿ ಭಾಗಿಯಾಗಿರುವ ಶಂಕೆ
ಬೆಂಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತನೆಂದು ಗುರುತಿಸಿಕೊಂಡಿದ್ದ ಸಮೀವುದ್ದೀನ್ನನ್ನು ಪೊಲೀಸರು ಜುಲೈ 19ರಂದು ಬಂಧಿಸಿದ್ದರು. ಬೆಂಗಳೂರು ಗಲಭೆ ಪ್ರಕರಣದಲ್ಲಿ ಈತ ಕೈವಾಡ ಇದೆ ಎಂದು ಪೊಲೀಸರು ಆರೋಪಿಸಿದ್ದಾರೆ. 2016ರಲ್ಲಿ ಬೆಂಗಳೂರಿನ ಶಿವಾಜಿನಗರದ ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜೊತೆ ಸಮೀವುದ್ದೀನ್ ಸಂಪರ್ಕ ಹೊಂದಿದ್ದ ವಿಚಾರ ಆತನ ವಿಚಾರಣೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. 35 ವರ್ಷದ ಸಮೀವುದ್ದೀನ್ ರುದ್ರೇಶ್ ಕೊಲೆ ಆರೋಪಿಯನ್ನು ಜೈಲಿನಲ್ಲಿ ಭೇಟಿ ಕೂಡ ಆಗಿದ್ದ ಎಂಬ ವಿಚಾರವೂ ತಿಳಿದುಬಂದಿದೆ.
ಇದನ್ನೂ ಓದಿ: ಗಣೇಶ ಹಬ್ಬದ ದಿನವೇ ಮೂವರು ಮಕ್ಕಳಿಗೆ ಜನ್ಮ ನೀಡಿದ ಬಡ ತಾಯಿ, ಸಹಾಯಕ್ಕಾಗಿ ಅಂಗಲಾಚುತ್ತಿರುವ ಕುಟುಂಬ..!
ಆಗಸ್ಟ್ 11ರಂದು ಬೆಂಗಳೂರಿನ ದೇವರಜೀವನ ಹಳ್ಳಿ, ಕಾಡುಗೊಂಡನ ಹಳ್ಳಿ ಮತ್ತು ಕಾವಲ್ ಬೈರಸಂದ್ರದಲ್ಲಿ ದೊಡ್ಡ ಗಲಭೆಯೇ ನಡೆದಿತ್ತು. ಕಾಂಗ್ರೆಸ್ ಶಾಸಕರ ಸಂಬಂಧಿ ನವೀನ್ ಎಂಬಾತ ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿಯಾಗಿ ಫೇಸ್ಬುಕ್ನಲ್ಲಿ ಕಾಮೆಂಟ್ ಹಾಕಿದ ಕಾರಣಕ್ಕೆ ಸಾವಿರಾರು ಜನರು ಸೇರಿ ಗಲಭೆ ನಡೆಸಿದ್ದರು. ಈ ವೇಳೆ ಶಾಸಕರ ಮನೆ, ಪೊಲೀಸ್ ಠಾಣೆ ಸೇರಿದಂತೆ ಅನೇಕ ಆಸ್ತಿಪಾಸ್ತಿಗಳಿಗೆ ಗಲಭೆಕೋರರು ಧಕ್ಕೆ ತಂದಿದ್ದರು. ಅನೇಕ ವಾಹನಗಳನ್ನ ಸುಟ್ಟುಹಾಕಿದ್ದರು. 60 ಮಂದಿ ಪೊಲೀಸರು ಗಾಯಗೊಂಡರೆ,. ಪೊಲೀಸರ ಗೋಲಿಬಾರ್ಗೆ ಮೂವರು ಪ್ರತಿಭಟನಾಕಾರರೂ ಮೃತಪಟ್ಟಿದ್ದರು. ಈ ಗಲಭೆಯಲ್ಲಿ ಎಸ್ಡಿಪಿಐನ ಕೈವಾಡ ಇದೆ ಎಂಬುದು ಪೊಲೀಸರ ಶಂಕೆ. ಸದ್ಯಕ್ಕೆ ಘಟನೆಯ ತನಿಖೆ ನಡೆಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ