ಮಾಗಡಿಯಲ್ಲಿ ಸಾರಿಗೆ ನೌಕರರ ಕುಟುಂಬಸ್ಥರು ಪ್ರತಿಭಟನೆ, 6 ನೇ ವೇತನ ಆಯೋಗ ಜಾರಿ ಮಾಡುವಂತೆ ಸರ್ಕಾರಕ್ಕೆ ಒತ್ತಾಯ 

ಸರ್ಕಾರ ನಮ್ಮ ಮನೆಯವರಿಗೆ 10 ರಿಂದ 12 ಸಾವಿರ ಸಂಬಳ ಕೊಡುತ್ತೆ. ಆದರೆ ಇದರಲ್ಲಿ ಮಕ್ಕಳ ಸ್ಕೂಲ್ ಫೀಜ್, ಮನೆ ಬಾಡಿಗೆ, ದಿನಸಿ, ಕರೆಂಟ್ ಬಿಲ್, ನೀರಿನ ಬಿಲ್ ಕಟ್ಟಿ ಜೀವನ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ಪ್ರತಿಭಟನಾ ನಿರತರು

ಪ್ರತಿಭಟನಾ ನಿರತರು

  • Share this:
ಮಾಗಡಿ(ಏಪ್ರಿಲ್ 09): ಕಳೆದ ಮೂರು ದಿನಗಳಿಂದ ನಡೆಯುತ್ತಿರುವ  KSRTC ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕಲ್ಯಾ ಬಳಿಯ ಸೋಮೇಶ್ವರ ದೇವಸ್ಥಾನದ ಬಳಿ ನೌಕರರ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ನೌಕರರ ಕುಟುಂಬಸ್ಥರು ಈ ಕೂಡಲೇ ರಾಜ್ಯ ಸರ್ಕಾರ ನಮ್ಮ ಮನೆಯಲ್ಲಿ ಕೆಲಸ ಮಾಡ್ತಿರುವ ನೌಕರರ ಕಷ್ಟಗಳನ್ನ ಅರಿತುಕೊಳ್ಳಬೇಕು. ಅವರಿಗೆ ಸೂಕ್ತ ಸಂಬಳದ ವ್ಯವಸ್ಥೆಯ ಜೊತೆಗೆ ಮೂಲಭೂತ ಸೌಕರ್ಯಗಳನ್ನ ಒದಗಿಸಬೇಕೆಂದು ಒತ್ತಾಯಿಸಿದರು.

ಇನ್ನು ಈ ಸಂದರ್ಭದಲ್ಲಿ ಸಾರ್ವಜನಿಕರು ನೌಕರರ ವಿರುದ್ಧ ಮಾತನಾಡ್ತಿದ್ದಾರೆ. ಆದರೆ ನೌಕರರ ಕಷ್ಟಗಳನ್ನ ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕಿದೆ. ನಮಗೂ ಸಂಸಾರಗಳಿವೆ, ಹಾಗಾಗಿ ಸಾರ್ವಜನಿಕರು ನಮಗೆ ಸಪೋರ್ಟ್ ಮಾಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆಯರು ಸರ್ಕಾರ ನಮ್ಮ ಮನೆಯವರಿಗೆ 10 ರಿಂದ 12 ಸಾವಿರ ಸಂಬಳ ಕೊಡುತ್ತೆ. ಆದರೆ ಇದರಲ್ಲಿ ಮಕ್ಕಳ ಸ್ಕೂಲ್ ಫೀಜ್, ಮನೆ ಬಾಡಿಗೆ, ದಿನಸಿ, ಕರೆಂಟ್ ಬಿಲ್, ನೀರಿನ ಬಿಲ್ ಕಟ್ಟಿ ಜೀವನ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ಜೊತೆಗೆ ನಮ್ಮ ಜೊತೆಯಲ್ಲಿ ಇರದೇ ಯಾವುದೋ ಊರಲ್ಲಿ ಕೆಲಸ ಮಾಡುತ್ತಾರೆ. ಆದರೆ ಇಷ್ಟೆಲ್ಲ ಕಷ್ಟಗಳ ನಡುವೆ ನಾವು ಜೀವನ ಮಾಡ್ತಿದ್ದೇವೆಂದು ತಮ್ಮ ನೋವನ್ನ ತೋಡಿಕೊಂಡರು. ರಾಜ್ಯ ಸರ್ಕಾರ KSRTC ನೌಕರರಿಗೆ ಸೂಕ್ತ ಸಂಬಳದ ವ್ಯವಸ್ಥೆ ಮಾಡದೇ, ಇರುವ ಕಡಿಮೆ ಸಂಬಳದಲ್ಲಿಯೇ ಕೆಲಸ ಮಾಡಿ ಎಂದು ಒತ್ತಡ ಮಾಡುವುದು ಯಾವ ನ್ಯಾಯ ಎಂದು ಪ್ರತಿಭಟನೆ ನಡೆಸಿದ ಮಹಿಳೆಯರು ಪ್ರಶ್ನಿಸಿದರು.

ಇದರ ಜೊತೆಗೆ ರಾತ್ರಿ ಡ್ಯೂಟಿ ಮಾಡಬೇಕು. ನಮ್ಮ ಮನೆಯಲ್ಲಿ ಯಾವುದೇ ಶುಭಕಾರ್ಯವಿದ್ದರೂ ಸಹ ಮನೆಯವರನ್ನೆಲ್ಲ ಬಿಟ್ಟು ಕೆಲಸ ಮಾಡಬೇಕು. ಆದರೆ ಇದನ್ನ ಮಾತ್ರ ಸರ್ಕಾರ ಅರ್ಥಮಾಡಿಕೊಳ್ಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಾರಿಗೆ ನೌಕರರ ಮುಷ್ಕರವನ್ನ ರಾಜ್ಯದ ಜನರು ನೋಡ್ತಿದ್ದಾರೆ. ಕೆಲವರು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದರೆ ಇನ್ನು ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.‌

ಆದರೆ ಸಾರ್ವಜನಿಕರು ಸಹ ನಮ್ಮ ಕಷ್ಟದ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಮನೆಯಲ್ಲಿ ವಯಸ್ಸಾದ ತಂದೆತಾಯಂದಿರು ಇದ್ದಾರೆ. ಇಬ್ಬರು ಮಕ್ಕಳಿದ್ದಾರೆ. ಅವರ ಎಲ್ಲಾ ಖರ್ಚು ವೆಚ್ಚದ ಜೊತೆಗೆ ನಮ್ಮ ಖರ್ಚುಗಳನ್ನು ಸಹ ನಾವು ನೋಡಿಕೊಳ್ಳಬೇಕು. ನಮಗೆ ಬರುವ 12 ಸಾವಿರ ಸಂಬಳದಲ್ಲಿ ಯಾವ ರೀತಿ ಜೀವನ ಮಾಡಬೇಕಿದೆ ಎಂದು ಪ್ರಶ್ನಿಸಿದರು. ‌ಹಾಗಾಗಿ ನಾವು ನಮ್ಮ ಹಕ್ಕಿಗಾಗಿ ಹೋರಾಟ ಮಾಡ್ತಿದ್ದೇವೆ. 6 ನೇ ವೇತನ ಆಯೋಗ ಜಾರಿ ಮಾಡಿ ಎಂದು ಕೇಳುತ್ತಿದ್ದೇವೆಂದು ತಿಳಿಸಿದರು.
Published by:Soumya KN
First published: