ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ 11 ವರ್ಷದಿಂದ ಸ್ಟಾಫ್ ನರ್ಸ್ ಆಗಿದ್ದ ಗಿರೀಶ್ ಎಂಬಾತ ತನ್ನ ಮನೆಯಲ್ಲೇ ಆಂಟಿಬಯೋಟಿಕ್ ಪೌಡರ್ ಬಳಸಿ ನಕಲಿ Remdesivir ಔಷಧ ತಯಾರಿಸಿ ಮಾರಾಟ ಮಾಡುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ.
ಮೈಸೂರು: ಇಲ್ಲಿಯ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ನಕಲಿ Remdesivir ಔಷಧ ಮಾರಾಟ ಜಾಲ ಪತ್ತೆ ಮಾಡಿದ್ದಾರೆ. ನಜರ್ಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಾರಾಟ ಜಾಲವನ್ನ ಭೇದಿಸಿದ ಪೊಲೀಸರು, ಆರೋಪಿ ಗಿರೀಶ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿದ್ಯಾನಗರದ 7ನೇ ಕ್ರಾಸ್ನಲ್ಲಿ ವಾಸವಿದ್ದ ಗಿರೀಶ್ ಮನೆಯಲ್ಲಿ ನಕಲಿ ಔಷಧಿ ತಯಾರಿಸಿ ಅದನ್ನ ಮಾರಾಟ ಮಾಡುತ್ತಿದ್ದ ದಂದೆ ಬೆಳಕಿಗೆ ಬಂದಿದೆ. 11 ವರ್ಷದಿಂದ ಸ್ಟಾಫ್ ನರ್ಸ್ ಕೆಲಸ ಮಾಡುತ್ತಿದ್ದ ಗಿರೀಶ್, ಖಾಲಿಯಾಗಿದ್ದ Remdesivir ಬಾಟಲಿಗೆ ಬೇರೆ ಔಷಧಿ ತುಂಬಿ Remdesivir ಎಂದು ಸ್ಟಿಕರ್ ಅಂಟಿಸಿ ಮಾರಾಟ ಮಾಡುತ್ತಿದ್ದುದ್ದನ್ನ ಒಪ್ಪಿಕೊಂಡಿದ್ದಾನೆ. ಖಾಲಿ ಬಾಟಲ್ ಪಡೆದು 100 ರೂ ಖರ್ಚು ಮಾಡಿ ಅದನ್ನ 4000ರೂ ಹಣಕ್ಕೆ ಗಿರೀಶ್ ಮಾರಾಟ ಮಾಡುತ್ತಿದ್ದುದು ತಿಳಿದುಬಂದಿದೆ. ಘಟನೆ ಸಂಬಂಧ ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದು, ಅವರನ್ನೂ ವಿಚಾರಣೆ ಮಾಡಲಾಗುತ್ತಿದೆ.
ನಕಲಿ Remdesivir ಔಷಧಿ ತಯಾರಿಸಲು ಗಿರೀಶ್ ಆಂಟಿಬಯೋಟಿಕ್ ಪೌಡರ್ ಬಳಸುತ್ತಿದ್ದನೆನ್ನಲಾಗಿದೆ. ಸೆಟ್ರಿಯೋಕ್ಸಿ ಎಂಬ ಆಂಟಿಬಾಟಿಕ್ ಔಷಧಿ ಬಳಸಿ ನಕಲಿ Remdesivir ತಯಾರಿಸುತ್ತಿದ್ದ. 11 ವರ್ಷದಿಂದ ಜೆಎಸ್ಎಸ್ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಗಿರೀಶ್ ಈ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದ ಎನ್ನಲಾಗಿದೆ. ಖಾಲಿಯಾಗಿದ್ದ Remdesivir ಬಾಟಲಿಗೆ ಬೇರೆ ಔಷಧಿ ತುಂಬಿ Remdesivir ಎಂದು ಪಟ್ಟಿ ಹಾಕುತ್ತಿದ್ದ ಗಿರೀಶ್, ನಕಲಿ ಔಷಧಿಯನ್ನು ಪ್ರಶಾಂತ್ ಮತ್ತು ಮಂಜುನಾಥ್ ಎಂಬುವವರೊಂದಿಗೆ ಸೇರಿ ಮಾರಾಟ ಮಾಡುತ್ತಿದ್ದ. ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಪ್ರಶಾಂತ್ ಮತ್ತು ಮಂಜುನಾಥ್ ನಕಲಿ Remdesivir ಔಷಧಿಯನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ಬಂಧಿತನಿಂದ ನಕಲಿ Remdesivir ಔಷಧಿ ಹಾಗೂ ಇತರ ಔಷಧಿ ವಶಕ್ಕೆ ಪಡೆದುಕೊಂಡಿದ್ದಾರೆ. ನಕಲಿ ಔಷಧಿ ಮಾರಾಟದಿಂದ ಬಂದಿದ್ದ 2,82,000 ರೂ ಹಣವನ್ನೂ ಕೂಡ ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಕುರಿತು ಮತ್ತಷ್ಟು ತನಿಖೆ ಮಾಡುವುದಾಗಿ ಮೈಸೂರು ಕಮಿಷನರ್ ಡಾ. ಚಂದ್ರಗುಪ್ತ ಹೇಳಿದ್ದಾರೆ.
ಗಿರೀಶ್ಗೆ ಖಾಲಿ ಬಾಟಲ್ಗಳನ್ನ ತಂದು ಕೊಡುತ್ತಿದ್ದ, ಶಿವಪ್ಪ ಹಾಗೂ ಮಂಗಳಾ ಎಂಬ ಹೌಸ್ಕೀಪರ್ಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಗಿರೀಶ್ ತನ್ನ ದಂದೆಯನ್ನ ಮನೆಯಲ್ಲೇ ಮಾಡುತ್ತಿದ್ದರಿಂದ ಯಾವುದೇ ಅನುಮಾನ ಬಂದಿಲ್ಲ. ಅಲ್ಲದೆ ಆತ ಯಾವುದೇ ಪ್ರತ್ಯೇಕ ಆಸ್ಪತ್ರೆ ಅಥವ ಮೆಡಿಕಲ್ ಸ್ಟೋರ್ಗೆ ನಕಲಿ ಔಷಧಿಯನ್ನ ಮಾರಾಟ ಮಾಡಿಲ್ಲ. ಯಾರಿಗೆ ಅವಶ್ಯಕತೆ ಇದೆಯೋ ಅವರಿಗೇ ನೇರವಾಗಿ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ಡ್ರಗ್ ಕಂಟ್ರೋಲ್ ಆಫಿಸರ್ಗಳಿಗೆ ಮಾಹಿತಿ ನೀಡಲಾಗಿದ್ದು, ಮುಂದಿನ ಹಂತದ ತನಿಖೆಯಲ್ಲಿ ಮತ್ತಷ್ಟು ವಿಚಾರ ಬೆಳಕಿಗೆ ಬರಲಿದೆ ಎಂದು ಚಂದ್ರಗುಪ್ತ ಹೇಳಿದ್ದಾರೆ.
ಸದ್ಯಕ್ಕೆ ಮೈಸೂರಿನಲ್ಲಿ ನಕಲಿ Remdesivir ಮಾರಾಟ ಜಾಲ ಪತ್ತೆಯಾಗಿರುವುದು ಇದೇ ಮೊದಲನೆ ಪ್ರಕರಣ ಆಗಿದ್ದು, ಈ ಬಗ್ಗೆ ಜನರಿಗೆ ಯಾವುದೇ ಅನುಮಾನ ಇದ್ದರೆ ನೇರವಾಗಿ ಪೊಲೀಸರನ್ನ ಸಂಪರ್ಕಿಸಿ. ಆಸ್ಪತ್ರೆ ಅಥವ ಮೆಡಿಕಲ್ ಸ್ಟೋರ್ಗಳಲ್ಲಿಯೂ ಈ ಥರದ ದಂದೆ ಕಂಡು ಬಂದರೆ ಪೊಲೀಸರ ಗಮನಕ್ಕೆ ತನ್ನಿ ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವರದಿ: ಪುಟ್ಟಪ್ಪ
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ