ಚಿತ್ರದುರ್ಗ(ಫೆ.23): ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ (Bhadra Meldande Yojane) ಶೇ.50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಂಡ ರೈತರಿಗೆ ಭೂಮಿಯ ಪರಿಹಾರದ (Compensation) ಜತೆಗೆ ಪ್ರತ್ಯೇಕವಾಗಿ ರೂ.5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಹೇಳಿದರು. ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿ ದೊಡ್ಡಕಿಟ್ಟದಹಳ್ಳಿ ಗ್ರಾಮದ ಆಂಜನೇಯ ಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಬರುವ ಚಿತ್ರದುರ್ಗ ಶಾಖಾ ಕಾಲುವೆ (Bhadra Canal) ನಿರ್ಮಿಸಲು ಹೊಸದುರ್ಗ ತಾಲ್ಲೂಕು ಮಾಡದಕೆರೆ ಹೋಬಳಿ ದೊಡ್ಡಕಿಟ್ಟದಹಳ್ಳಿ ಗ್ರಾಮದ ವಿವಿಧ ಸರ್ವೇ ನಂಬರ್ಗಳಲ್ಲಿ 6 ಎಕೆರೆ 15 ಗುಂಟೆ ಜಮೀನು ಭೂ ಸ್ವಾಧೀನ ಪಡಿಸಿಕೊಳ್ಳಲು ರಚಿಸಿರುವ ಆರ್ ಆರ್ ಸಭೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೊಡ್ಡ ಕಿಟ್ಟದಹಳ್ಳಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಯಾವ ರೈತರೂ ಶೇ.50ಕ್ಕಿಂತ ಹೆಚ್ಚು ಭೂಮಿಯನ್ನು (Land) ಕಳೆದುಕೊಂಡಿಲ್ಲ ಎಂಬ ವರದಿಯನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳು ಮಾಹಿತಿ ನೀಡಿದ್ದು, ಈ ಸಂಬಂಧ ಯಾವುದಾದರೂ ಸಮಸ್ಯೆಗಳು ಹಾಗೂ ದೂರುಗಳಿದ್ದಲ್ಲಿ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಆಮೆಗತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ; ಚಿತ್ರದುರ್ಗ ರೈತರಿಗೆ ಕನಸಾಗಿಯೇ ಉಳಿದಿದ್ದಾಳೆ ಭದ್ರೆ
ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಪರಿಶೀಲಿಸಿ ಸಮಸ್ಯೆಗೆ ಪರಿಹಾರ
ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸೂಕ್ತವಾದ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ವಿಶೇಷ ಭೂ ಸ್ವಾಧೀನಾಧಿಕಾರಿಗಳು ಭೂ ಸ್ವಾಧೀನ (Land Acquisition) ಮಾಡುತ್ತಾರೆ. ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಅವರ ಅಧಿಕಾರಿ ವರ್ಗದವರು ಸ್ಥಳ ಪರಿಶೀಲನೆ ಮಾಡಬೇಕು. ಸಮಸ್ಯೆಗಳ ಪಟ್ಟಿ ಮಾಡಿಕೊಂಡು ಪರಿಶೀಲಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂದು ತಿಳಿಸಿದರು.
ಹಣ ಡೆಪಾಸಿಟ್
ಭದ್ರಾ ಮೇಲ್ದಂಡೆ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿ ಶಿಲ್ಪಾ ಮಾತನಾಡಿ, ಸರ್ಕಾರಿ ಜಮೀನುಗಳಿಗೆ ಪರಿಹಾರ ಸಿಗುತ್ತಿಲ್ಲ ಎಂಬ ರೈತರ ಸಮಸ್ಯೆಗೆ ಖಂಡಿತವಾಗಿ ಪರಿಹಾರವಿದೆ. ಪೋಡಿ ವ್ಯವಸ್ಥೆ ಯಾರ ಹೆಸರಿಗೆ ಆಗುತ್ತದೆ ಅವರಿಗೆ ಹಣವನ್ನು ನೀಡಲಾಗುತ್ತದೆ. ಆದ್ದರಿಂದ ಅಂತಹ ರೈತರ ಹಣ ಭೂ ಸ್ವಾಧೀನ ಅಧಿಕಾರಿಗಳ ಖಾತೆಯಲ್ಲಿ ಅಥವಾ ಕೋರ್ಟ್ ಡೆಪಾಸಿಟ್ನಲ್ಲಿ ಹಣವನ್ನು ಇಡಲಾಗುತ್ತದೆ ಎಂದರು.
ಪರಿಹಾರ ಹಣ ನೀಡಲು ಅವಕಾಶ
ಸರ್ಕಾರಿ ಜಮೀನಿನ ಪೋಡಿ ದುರಸ್ಥಿಯ ಕೆಲಸ ಸ್ಪಲ್ಪ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಪೋಡಿಯಾದ ತಕ್ಷಣ ಸರ್ಕಾರಿ ಜಮೀನಿನಲ್ಲಿ ಉಳಿಮೆ ಮಾಡಿದಂತಹ ರೈತರಿಗೆ ಹಣ ನೀಡಲಾಗುತ್ತದೆ. ರೈತರು ಪೋಡಿ ದುರಸ್ಥಿಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಅದರ ಬಗ್ಗೆ ತಹಶೀಲ್ದಾರ್ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ
ಕೆಂಚನಹಳ್ಳಿ ಸರ್ವೇ ನಂಬರ್ 6ಕ್ಕೆ ಸಂಬಂಧಿಸಿದಂತೆ ಎಲ್ಲಾ ರೀತಿಯ ವರದಿಯನ್ನು ನೀಡಲಾಗಿದೆ. ಅದೇ ರೀತಿಯಲ್ಲಿ ದೊಡ್ಡಕಿಟ್ಟದಹಳ್ಳಿಯ ಸರ್ವೇ ನಂಬರ್ಗೆ ಸಂಬಂಧಿಸಿದಂತೆ ಎಲ್ಲಾ ಸಮಸ್ಯೆಗಳ ಬಗ್ಗೆ ವರದಿ ಕೇಳಿ ಪಡೆಯುತ್ತೇವೆ. ಬಳಿಕ ಪೋಡಿ ದುರಸ್ಥಿಯಾದ ನಂತರ ಭೂ ಪರಿಹಾರ ಹಣವನ್ನು ನೀಡಲು ಅವಕಾಶವಿರುತ್ತದೆ ಎಂದರು.
75 ಜಮೀನುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ
ಭದ್ರಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಚಂದ್ರಮೌಳಿ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ (Chitradurga) ಶಾಖಾ ಕಾಲುವೆಯ ಕಿ.ಮೀ 61.230 ರಿಂದ 63.523 ಕಿಮೀ ವರೆಗೆ ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿಯ ದೊಡ್ಡಕಿಟ್ಟದಹಳ್ಳಿ ಗ್ರಾಮದ ಮುಖಾಂತರ ಹಾದು ಹೋಗುತ್ತದೆ. ಈ ಕಾಲುವೆಯ ನಿರ್ಮಾಣಕ್ಕಾಗಿ ದೊಡ್ಡಕಿಟ್ಟದಹಳ್ಳಿ ಗ್ರಾಮದ ಸರ್ವೆ ನಂಬರ್ 71,72,73,74 ಮತ್ತು 75 ರ ಜಮೀನುಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ