HOME » NEWS » District » EXPORT OF MAIZE FROM BAGALKOT TO BANGLADESH NEW HOPE FOR FARMERS AND TRADERS RBK MAK

ಬಾಗಲಕೋಟೆ ಟು ಬಾಂಗ್ಲಾ ರೈಲು ಮೂಲಕ ಮೆಕ್ಕೆಜೋಳ ರಫ್ತು; ರೈತರು, ವರ್ತಕರಲ್ಲಿ ಹೊಸ ಭರವಸೆ

ಬಾಗಲಕೋಟೆಯಿಂದ ಬಾಂಗ್ಲಾದೇಶಕ್ಕೆ ಮೆಕ್ಕೆಜೋಳ ರಫ್ತಾಗುತ್ತಿರುವುದರಿಂದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ರೈತರಿಗೆ ಹೆಚ್ಚಿನ ದರ ಜೊತೆಗೆ ಕೂಲಿಕಾರರಿಗೆ ಉದ್ಯೋಗಾವಕಾಶ ಸಿಕ್ಕಿದೆ.

news18-kannada
Updated:November 19, 2020, 8:01 PM IST
ಬಾಗಲಕೋಟೆ ಟು ಬಾಂಗ್ಲಾ ರೈಲು ಮೂಲಕ ಮೆಕ್ಕೆಜೋಳ ರಫ್ತು; ರೈತರು, ವರ್ತಕರಲ್ಲಿ ಹೊಸ ಭರವಸೆ
ಮೆಕ್ಕೆಜೋಳ ತುಂಬಿದ ಲಾರಿಗಳು.
  • Share this:
ಬಾಗಲಕೋಟೆ (ನವೆಂಬರ್ 19): ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ರೈಲು ಮೂಲಕ  ಬಾಗಲಕೋಟೆಯಿಂದ ಬಾಂಗ್ಲಾದೇಶಕ್ಕೆ ಮೆಕ್ಕೆಜೋಳ ರಫ್ತಾಗುತ್ತಿದ್ದು, ಬಾಂಗ್ಲಾದೇಶಕ್ಕೆ 2500 ಟನ್ ಮೆಕ್ಕೆಜೋಳ ಚೀಲಗಳನ್ನು ತುಂಬಿದ್ದ 42ಬೋಗಿಗಳ ಮೂಲಕ ರಫ್ತು ಮಾಡುವದಕ್ಕೆ ರೈಲು ಬೋಗಿಗಳಿಗೆ ಪೂಜೆ ಮಾಡಲಾಯ್ತು. ಬಾಗಲಕೋಟೆ ನಗರದ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲಿಗೆ ಪೂಜೆ ನೇರವೇರಿಸಲಾಯಿತು. ಶಾಸಕ ವೀರಣ್ಣ ಚರಂತಿಮಠ, ಹಾಗೂ ನಗರದ ವರ್ತಕರು ಭಾಗಿಯಾಗಿದ್ದರು. ಬಾಗಲಕೋಟೆಯ ವರ್ತಕರಾದ ಅಥಣಿ, ಹಾಗೂ ನಾಗರಾಳ ಗ್ರೂಪ್ ನಿಂದ ಬಾಗಲಕೋಟೆ, ಗದಗ, ಧಾರವಾಡ, ಬೆಳಗಾವಿ, ವಿಜಯಪುರ ಜಿಲ್ಲೆಗಳಲ್ಲಿ ರೈತರಿಂದ 2500ಟನ್ ಮೆಕ್ಕೆಜೋಳ ಖರೀದಿಸಿದ್ದು, ಪ್ರತಿ ಕ್ವಿಂಟಾಲ್ ಗೆ 1400ರಿಂದ 1450 ಬೆಲೆ ನಿಗದಿಪಡಿಸಲಾಗಿದೆ.

ಲಾರಿಗಳ ಮೂಲಕ ತರಲಾಗಿದ್ದ ಮೆಕ್ಕೆಜೋಳದ ಚೀಲಗಳನ್ನು 42ಬೋಗಿಗಳಿಗೆ 2500ಟನ್ ಮೆಕ್ಕೆಜೋಳದ ಚೀಲಗಳನ್ನು ಕಾರ್ಮಿಕರು ಲೋಡ್ ಮಾಡಿದರು. ಈ ವರ್ಷದ ಹಂಗಾಮಿನಲ್ಲಿ 1ಲಕ್ಷ ಟನ್ ರಫ್ತು ಮಾಡುವ ಗುರಿ ಹೊಂದಿದ್ದು, 2010 ರಿಂದ ಹಡಗುಗಳ ಮೂಲಕ  ಬೇರೆ ಬೇರೆ ದೇಶಗಳಿಗೆ ರಫ್ತು ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ವಿದೇಶಕ್ಕೆ ರಫ್ತು ಮಾಡುವುದು ಸ್ಥಗಿತವಾಗಿತ್ತು. ಯಾಕಂದರೆ ವಿದೇಶಗಳಲ್ಲಿ ಮೆಕ್ಕೆಜೋಳದ ದರ ಕಡಿಮೆಯಿತ್ತು, ನಮ್ಮ ದೇಶದಲ್ಲಿ ದರ ಹೆಚ್ಚಿದ್ದ ಪರಿಣಾಮ ರಫ್ತು ಮಾಡಿರಲಿಲ್ಲ.ಈಗ ವಿದೇಶದಲ್ಲಿ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಾಗಿದೆ.

ಹಾಗಾಗಿ ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ರೈಲು ಮೂಲಕ ಬಾಗಲಕೋಟೆಯಿಂದ ಬಾಂಗ್ಲಾದೇಶದ ಜೆಡೆ ದರ್ಶನ ಸ್ಥಳಕ್ಕೆ ಮೆಕ್ಕೆಜೋಳ ಹೊತ್ತು ರೈಲು ತಲುಪಲಿದೆ. ಈ ಬಾರಿ ಜಿಲ್ಲೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಮಳೆ ಪ್ರವಾಹದಿಂದ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಹಾನಿಯಾಗಿದ್ದವು. ಇವುಗಳ ಮಧ್ಯೆ ಮೆಕ್ಕೆಜೋಳ ವಿದೇಶಕ್ಕೆ ರಫ್ತಿಗೆ ಅವಕಾಶ ಸಿಕ್ಕಿರುವರಿಂದ ರೈತರು, ವರ್ತಕರಿಗೆ ಉತ್ತೇಜನ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಬಾಗಲಕೋಟೆ ನಗರದ ವರ್ತಕರು ವಿಯೆಟ್ನಾಂ, ಇಂಡೋನೇಷ್ಯಾ ದೇಶಗಳಿಗೆ ಬಂದರು ಮೂಲಕ ಮೆಕ್ಕೆಜೋಳ ರಫ್ತು  ಮಾಡುವ ಆಲೋಚನೆಯಲ್ಲಿದ್ದಾರೆ.

ವಿದೇಶಕ್ಕೆ ಮೆಕ್ಕೆಜೋಳ ರಫ್ತಾಗುತ್ತಿರುವದರಿಂದ ಐದುನೂರಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ,ಲಾರಿಗಳ ಚಾಲಕರಿಗೆ ಉದ್ಯೋಗವೂ ಸಿಗುತ್ತಿದೆ ಎನ್ನುತ್ತಾರೆ ಮೆಕ್ಕೆಜೋಳ ರಫ್ತುದಾರ ವರ್ತಕ ಮುರುಗೇಶ್ ನಾಗರಾಳ.

ಇದನ್ನೂ ಓದಿ : ಮಾಸ್ಕ್​ ಧರಿಸದಿದ್ದರೆ 2000.ರೂ ದಂಡ; ಕೊರೋನಾ ನಿಯಂತ್ರಣಕ್ಕೆ ಹೊಸ ಆದೇಶ ಹೊರಡಿಸಿದ ದೆಹಲಿ ಸರ್ಕಾರ

ರಾಜ್ಯದಲ್ಲಿ ರೈಲು ಮೂಲಕ ಇದೇ ಮೊದಲ ಬಾರಿಗೆ ಬಾಂಗ್ಲಾದೇಶಕ್ಕೆ ಮೆಕ್ಕೆಜೋಳ ರಫ್ತಾಗುತ್ತಿದೆ. ಹೆಚ್ಚಿಗೆ ಮಳೆಯಾದರೂ ಬಾಗಲಕೋಟೆ ಜಿಲ್ಲೆಯ ಸುತ್ತಮುತ್ತಲು ಬೆಳೆ ಮೆಕ್ಕೆಜೋಳದ ಕಾಳುಗಳು ಹಾನಿಯಾಗಿಲ್ಲ.ಆದರೆ ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಮೆಕ್ಕೆಜೋಳ ಕಾಳು ಕಪ್ಪಾಗಿವೆ,ಹಾಗಾಗಿ ಬಾಗಲಕೋಟೆ ಜಿಲ್ಲೆಯ ಮೆಕ್ಕೆಜೋಳಕ್ಕೆ ಬೇಡಿಕೆ ಹೆಚ್ಚಾಗಿದೆ ಎನ್ನುತ್ತಾರೆ ಶಾಸಕ ವೀರಣ್ಣ ಚರಂತಿಮಠ.
ಒಟ್ಟಿನಲ್ಲಿ ಬಾಗಲಕೋಟೆಯಿಂದ ಬಾಂಗ್ಲಾದೇಶಕ್ಕೆ ಮೆಕ್ಕೆಜೋಳ ರಫ್ತಾಗುತ್ತಿರುವುದರಿಂದ ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ರೈತರಿಗೆ ಹೆಚ್ಚಿನ ದರ ಜೊತೆಗೆ ಕೂಲಿಕಾರರಿಗೆ ಉದ್ಯೋಗಾವಕಾಶ ಸಿಕ್ಕಿದೆ.
Published by: MAshok Kumar
First published: November 19, 2020, 8:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading