HD Kumaraswamy: ಲಾಕ್​ಡೌನ್ ವಿಸ್ತರಣೆ ಮಾಡಿ ಆದರೆ, ಬಡ ಜನರಿಗೆ 10,000 ರೂ. ಪರಿಹಾರ ನೀಡಿ; ಹೆಚ್​.ಡಿ. ಕುಮಾರಸ್ವಾಮಿ

ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೇ, ರೈತರು, ಶ್ರಮಿಕ ವರ್ಗ, ಕಾರ್ಮಿಕರ ಸುಮಾರು ಒಂದು ಕೋಟಿ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ಏಕರೂಪ ಪರಿಹಾರ ಘೋಷಣೆ ಮಾಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ.

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ.

  • Share this:
    ಬೆಂಗಳೂರು (ಜೂನ್ 03); ರಾಜ್ಯದಲ್ಲಿ ಕೊರೋನಾ ಲಾಕ್​ಡೌನ್​ ನಡುವೆಯೂ ದಿನದಿಂದ ದಿನಕ್ಕೆ ಅಧಿಕವಾಗುತ್ತಲೇ ಇದೆ. ಹೀಗಾಗಿ ತಜ್ಞರ ಶಿಫಾರಸು ಹಾಗೂ ಹಲವರ ಒತ್ತಾಯದ ಮೇರೆಗೆ ಜೂನ್​.07ರ ನಂತರವೂ ಲಾಕ್​ಡೌನ್​ ಅನ್ನು ಮತ್ತೆ ಒಂದು ವಾರಗಳ ಕಾಲ ವಿಸ್ತರಿಸುವುದಾಗಿ ಸಿಎಂ ಯಡಿಯೂರಪ್ಪ ಇಂದು ದೃಢಪಡಿ ಸಿದ್ದಾರೆ. ಇದರ ಬೆನ್ನಿಗೆ ಇಂದು ಅಭಿಪ್ರಾಯ ಹೊರಹಾಕಿರುವ ಮಾಜಿ ಸಿಎಂ ಕುಮಾರಸ್ವಾಮಿ, "ರಾಜ್ಯದಲ್ಲಿ ಇನ್ನೂ ಒಂದುವಾರ ಕಾಲ ಲಾಕ್​ಡೌನ್ ವಿಸ್ತರಣೆ ಮಾಡುವುದು ಸೂಕ್ತ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿರುವುದು ಒಳ್ಳೆಯ ವಿಚಾರ. ಕೊರೋನಾ ಸೋಂಕು, ಬೆಂಗಳೂರಿನಲ್ಲಿ ಸ್ವಲ್ಪ ತಗ್ಗಿದ್ದರೂ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆ ಪ್ರಮಾಣ ತಗ್ಗಿಲ್ಲ. ಆದ್ದರಿಂದ ಸರ್ಕಾರ, ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಲಾಕ್ ಡೌನ್ ಮುಂದುವರೆಸುವುದು ಸೂಕ್ತ. ಆದರೆ, ಜನರಿಗೆ 10,000 ಪರಿಹಾರ ನೀಡಬೇಕು" ಎಂದು ಹೆಚ್​.ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, "ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೇ, ಸುಮಾರು ಒಂದು ಕೋಟಿ ಕುಟುಂಬಗಳಿಗೆ ತಲಾ 10 ಸಾವಿರ ರೂಪಾಯಿ ಪರಿಹಾರ ನೀಡಬೇಕು. ರೈತರು, ಶ್ರಮಿಕ ವರ್ಗ, ಕಾರ್ಮಿಕರಿಗೆ ತಲಾ 10 ಸಾವಿರ ರೂಪಾಯಿ ಏಕರೂಪ ಪರಿಹಾರ ಘೋಷಣೆ ಮಾಡಿದರೇ, 10 ಸಾವಿರ ಕೋಟಿ ರೂಪಾಯಿಗಳ ಹೊರೆಯನ್ನು ಭರಿಸಬೇಕಾಗುತ್ತದೆ. ವರ್ಷಕ್ಕೆ ಲಕ್ಷಾಂತರ ಕೋಟಿಗಳ ಬಜೆಟ್ ಘೋಷಣೆ ಮಾಡುವ ರಾಜ್ಯ ಸರ್ಕಾರಕ್ಕೆ ಇದೇನು ಭರಿಸಲಾಗದ ಹೊರೆಯಾಗದು" ಎಂದು ಸಲಹೆ ನೀಡಿದ್ದಾರೆ.

    "ಕೆಲವು ಅನಗತ್ಯ ಕಾಮಗಾರಿಗಳಿಗೆ 1500 ಕೋಟಿ ರೂ ಅಥವಾ 2 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಮಂಜೂರು ಮಾಡುವುದನ್ನು ತಕ್ಷಣಕ್ಕೆ ನಿಲ್ಲಿಸುವುದು ಒಳಿತು. ಇಂತಹ ಕಾಮಗಾರಿಗಳ ಶೇ.30 ರಿಂದ 40ರಷ್ಟು ಹಣ ಉಪಯೋಗವಾಗುತ್ತಿಲ್ಲ. ತೋರ್ಪಡಿಕೆಗೆ ಪರಿಹಾರ ಘೋಷಣೆ ಮಾಡುವುದನ್ನು ಬಿಟ್ಟು, ಧರ್ಮ ಸಂಕಟಕ್ಕೆ ಸಿಲುಕಿರುವ ಜನತೆಗೆ ಬದ್ಧತೆಯ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಪ್ಯಾಕೇಜ್ ಘೋಷಣೆ ಮಾಡುವಂತೆ" ಹೆಚ್.ಡಿ. ಕುಮಾರಸ್ವಾಮಿ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಲಾಕ್​ಡೌನ್ ಮುಂದುವರಿಕೆ ಬೇಡ, ಹಂತ ಹಂತವಾಗಿ ಅನ್​ಲಾಕ್ ಮಾಡಿ: ಸತೀಶ್ ಜಾರಕಿಹೊಳಿ ಸಲಹೆ

    ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಕೋವಿಡ್ ಪ್ಯಾಕೇಜ್ ಕುರಿತು ಕಿಡಿಕಾರಿರುವ ಅವರು, "ಕೊರೋನಾ ಸೋಂಕಿನ ಮೊದಲ ಅಲೆಯ ಕಳೆದ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸರ್ಕಾರದ ಆದಾಯ ತೆರಿಗೆ ಕುಗ್ಗಿತ್ತು. ಆದರೆ ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸರ್ಕಾರಕ್ಕೆ ತೆರಿಗೆ ಹೆಚ್ಚು ಬಂದಿದೆ. ಅಬಕಾರಿ ಇಲಾಖೆಯೊಂದರಲ್ಲೇ ಶೇ.150ರಷ್ಟು ಕಳೆದ ವರ್ಷಕ್ಕಿಂತ ಹೆಚ್ಚಿನ ಆದಾಯ ಬಂದಿದೆ. ಸರ್ಕಾರ ಈ ಬಾರಿ ಘೋಷಿಸಿರುವ 1,250 ಕೋಟಿ ರೂಪಾಯಿಗಳ ಪ್ಯಾಕೇಜ್ ಅವೈಜ್ಞಾನಿಕವಾಗಿದೆ" ಎಂದು ತಿಳಿಸಿದ್ದಾರೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:MAshok Kumar
    First published: