news18-kannada Updated:November 13, 2020, 3:19 PM IST
ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ
ಕಲಬುರ್ಗಿ(ನವೆಂಬರ್. 13): ಅಧಿಕಾರಕ್ಕಾಗಿ ಯಾರ ಬಳಿಯೂ ಭಿಕ್ಷೆ ಬೇಡಲ್ಲ, ಯಾರ ಮನೆ ಮುಂದೆಯೂ ನಿಲ್ಲಲ್ಲ ಎಂದು ಮಾಜಿ ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹೇಳಿದ್ದಾರೆ. ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖಗೊಂಡ ನಂತರ ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅಧಿಕಾರ ದಾಹ ನನಗಿಲ್ಲ. ಸಚಿವರನ್ನಾಗಿಸಿ, ಎಂಎಲ್ಸಿಯನ್ನಾಗಿಸಿ ಎಂದು ಯಾರ ಮನೆ ಬಳಿಯೂ ಹೋಗಲ್ಲ. ಈ ಮಾಲೀಕಯ್ಯ ಗುತ್ತೇದಾರ ಭಿಕ್ಷೆ ಬೇಡುವ ಜಾಯಮಾನದವನಲ್ಲ ಎಂದಿದ್ದಾರೆ. ಎಂಎಲ್ಸಿ ಮಾಡಿ ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ನೀಡಿದ್ದ ಭರವಸೆಯನ್ನು ಈಡೇರಿಸದೇ ಇರುವುದಕ್ಕೆ ಮಾಲೀಕಯ್ಯ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ, ಸದ್ಯಕ್ಕೆ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳುತ್ತೇನೆ. ಆದರೆ, ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಬೇಕು. ಕಲಬುರ್ಗಿ ಜಿಲ್ಲೆಗೂ ಸಚಿವ ಸ್ಥಾನ ಸಿಗಬೇಕು. ಕಲಬುರ್ಗಿಯಲ್ಲಿ ಸುಭಾಷ್ ಗುತ್ತೇದಾರ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ ಮತ್ತಿತರರು ಅರ್ಹ ಶಾಸಕರಿದ್ದಾರೆ. ಇವರ ಪೈಕಿ ಯಾರಿಗಾದರೂ ಸಚಿವ ಸ್ಥಾನ ನೀಡಲಿ.
ಜಿಲ್ಲೆಗೆ ಬಾರದ ಉಸ್ತುವಾರಿ ಸಚಿವ, ಡಿಸಿಎಂ ಗೋವಿಂದ ಕಾರಜೋಳ ಅವರನ್ನೂ ಬದಲಾಯಿಸಬೇಕು. ಈ ಭಾಗದವರಿಗೆ ಜಿಲ್ಲೆಯ ಉಸ್ತುವಾರಿ ನೀಡಬೇಕು. ಯಾರು ಉತ್ತಮವಾಗಿ ಕೆಲಸ ಮಾಡುತ್ತಾರೋ ಅವರಿಗೆ ಉಸ್ತುವಾರಿ ನೀಡಲಿ. ಜಿಲ್ಲೆಯವರನ್ನೇ ಸಚಿವರನ್ನಾಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಇಷ್ಟು ದಿನ ಸಚಿವ ಸ್ಥಾನದಲ್ಲಿ ಮಜಾ ಮಾಡಿದವರನ್ನು ಕೈಬಿಡಲಿ. ಹೊಸಬರಿಗೆ ಸಚಿವ ಸ್ಥಾನದ ಅವಕಾಶ ನೀಡಲಿ. ಸಮರ್ಥವಾಗಿ ಕೆಲಸ ಮಾಡುವವರಿಗೆ ಸಚಿವ ಸ್ಥಾನ ನೀಡಲಿ ಎಂದು ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ.
ಇದನ್ನೂ ಓದಿ :
ಶಿರಾ ಯಶಸ್ಸಿನ ಬಳಿಕ ಮಸ್ಕಿ, ಬಸವಕಲ್ಯಾಣ ಉಪಚುನಾವಣೆಗಳತ್ತ ಬಿ.ವೈ. ವಿಜಯೇಂದ್ರ ಚಿತ್ತ
ಇದೇ ವೇಳೆ ಪ್ರವಾಹದ ಕುರಿತು ಮಾತನಾಡಿದ ಮಾಲೀಕಯ್ಯ, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ಕೇಂದ್ರದಿಂದ ಹೆಚ್ಚಿನ ಪರಿಹಾರ ಸಿಕ್ಕಿಲ್ಲ. ನಾವು ನಿರೀಕ್ಷಿಸಿದಷ್ಟು ಹಣ ಬಂದಿಲ್ಲ. ರಾಜ್ಯದಲ್ಲಿಯೂ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪರಿಹಾರ ಬಿಡುಗಡೆ ಮಾಡಲಿದೆ ಎಂಬ ವಿಶ್ವಾಸವಿದೆ ಎಂದರು.
ಕಲಬುರ್ಗಿ ಜಿಲ್ಲೆ ಅಫಜಲಪುರ ಕ್ಷೇತ್ರವೊಂದರಲ್ಲಿಯೇ 3270 ಮನೆಗಳಿಗೆ ಪ್ರವಾಹದ ನೀರು ಹೊಕ್ಕಿವೆ. 12 ಗ್ರಾಮಗಳು ಭಾಗಶಹ ಸ್ಥಳಾಂತರಿಸಬೇಕಿದೆ. ಮೂರು-ನಾಲ್ಕು ಗ್ರಾಮಗಳನ್ನು ಪೂರ್ಣವಾಗಿ ಸ್ಥಳಾಂತರಿಸಬೇಕಿದೆ. ಅದಕ್ಕೆ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ತಕ್ಷಣವೇ ಮನೆ ಹಾಗೂ ಬೆಳೆ ಹಾನಿಯ ಸರ್ವೆ ಮಾಡಿ, ಪರಿಹಾರ ವಿತರಿಸಲಿ ಎಂದು ಮಾಲೀಕಯ್ಯ ಆಗ್ರಹಿಸಿದ್ದಾರೆ
Published by:
G Hareeshkumar
First published:
November 13, 2020, 3:10 PM IST