ಬಾಗಲಕೋಟೆ ಜನವರಿ 31); ಜೆಡಿಎಸ್ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಜಮೀರ್ ಅಹಮದ್, "ಜೆಡಿಎಸ್ ಪಕ್ಷ ಎಲ್ಲಿದೆ? ಆ ಪಕ್ಷ ಸತ್ತು ತುಂಬಾ ದಿನವಾಗಿದೆ. ಕೋಮುವಾದಿ ಬಿಜೆಪಿ ಜೊತೆಗೆ ಕೈಜೋಡಿಸಿದ ದಿನವೇ ಜೆಡಿಎಸ್ ಸತ್ತುಹೋಗಿದೆ. ಇದಲ್ಲದೆ, ಗೋ ಹತ್ಯೆ ನಿಷೇಧ ಕಾಯ್ದೆ, ಉಪಸಭಾಪತಿ ಆಯ್ಕೆಯಲ್ಲಿಯೂ ಜೆಡಿಎಸ್ ಬಿಜೆಪಿಯನ್ನು ಬೆಂಬಲಿಸಿದೆ. ಇಷ್ಟಕ್ಕೆಲ್ಲಾ ಕಾರಣವಾಗಿರುವ ಮಾಜಿ ಸಿಎಂ ಕುಮಾರಸ್ವಾಮಿ ಯಾವ ಸೀಮೆಯ ನಾಯಕ?" ಎಂದು ಕಿಡಿಕಾರಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷದ ಸಂಘಟನಾ ಸಭೆ ಅಂಗವಾಗಿ ಜೆಡಿಎಸ್ ಪಕ್ಷದ ನಾಯಕರು ಇಂದು ಬಾಗಲಕೋಟೆಯಲ್ಲಿ ಸಂಘಟನಾ ಸಮಾವೇಶ ನಡೆಸುತ್ತಿದ್ದಾರೆ. ಇದೇ ವೇಳೆ ಬಾಗಲಕೋಟೆಗೆ ಭೇಟಿ ನೀಡಿರುವ ಜಮೀರ್ ಅಹಮದ್ ಜೆಡಿಎಸ್ ಸಭೆ ಮತ್ತು ನಾಯಕರ ವಿರುದ್ಧ ಲೇವಡಿ ಮಾಡಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಅಪಹಾಸ್ಯ ಮಾಡಿರುವ ಜಮೀರ್ ಅಹಮದ್, "ಜೆಡಿಎಸ್ ಯಾವ ಸೆಕ್ಯುಲರ್ ಪಕ್ಷ? ಆ ಪಕ್ಷ ತನ್ನ ತನವನ್ನು ಕಳೆದುಕೊಂಡು ಬಹಳ ದಿನವಾಗಿದೆ. ಸಿದ್ದರಾಮಯ್ಯ ಜೆಡಿಎಸ್ ಪಕ್ಷದಲ್ಲಿದ್ದಾಗ 59ಸೀಟು ಬಂದಿತ್ತು. ಅವರ ನಾಯಕತ್ವಕ್ಕೆ ಬೆಲೆ ಇತ್ತು. ಆದರೆ, ಈಗ ಕುಮಾರಸ್ವಾಮಿ ಲೀಡರ್ ಅಂತಾರಲ್ಲ ಆ ನಂಬರ್ ಈತನಕ ರೀಚ್ ಮಾಡೋಕೆ ಆಗಿಲ್ಲ. 2006ರಲ್ಲಿ ಹೆಚ್ಡಿಕೆ ಸಿಎಂ ಆಗಿದ್ದು ಒಳ್ಳೆಯ ಆಡಳಿತ ಕೊಟ್ರು ಅದನ್ನು ಒಪ್ಕೋತಿನಿ. ಆದರೆ, ಸಿದ್ದರಾಮಯ್ಯ ಇದ್ದಾಗಿನ ಜೆಡಿಎಸ್ ಶಾಸಕರ ನಂಬರ್ ರಿಚ್ ಮಾಡೋಕೆ ಆಗಿಲ್ಲ ಎಂಬುದು ಕಟು ವಾಸ್ತವ. ಇವರು ಯಾವ ಸೀಮೆ ಲೀಡರ್" ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಸಿಎಂ ಇಬ್ರಾಹಿಂ ಜೆಡಿಎಸ್ಗೆ ಸೇರ್ಪಡೆಗೊಳ್ಳುವ ವಿಚಾರದ ವಿರುದ್ಧವೂ ಕಿಡಿಕಾರಿರುವ ಜಮೀರ್ ಅಹಮದ್, "ಸಿಎಂ ಇಬ್ರಾಹಿಂ ಕಾಂಗ್ರೆಸ್ ಎಂಎಲ್ಸಿ ಆಗಿದ್ದಾರೆ. ಇನ್ನು ನಾಲ್ಕುವರೆ ವರ್ಷ ಅವಧಿ ಇದೆ. ಹಾಗೇನಾದರೂ ಕಾಂಗ್ರೆಸ್ ಬಿಡಬೇಕಿದ್ರೆ.. ಎಂಎಲ್ಸಿ ಸ್ಥಾನಕ್ಕೆ ರಾಜಿನಾಮೆ ಕೊಡ್ಬೇಕಾಗುತ್ತದೆ. ಇನ್ನು ಅವರು ರಾಜಿನಾಮೆ ಕೊಟ್ಟಿಲ್ಲ. 2013ರಲ್ಲಿ ಸಿದ್ದರಾಮಯ್ಯ ಚುನಾವಣೆಗೆ ನಿಲ್ಲೋದು ಬೇಡಾ, ಎಂಎಲ್ಸಿ ಮಾಡಿ ಮಂತ್ರಿ ಮಾಡ್ತಿನಿ ಅಂದ್ರು.
ಆದರೆ, ಅವರ ಮಾತನ್ನು ಕೇಳದ ಸಿಎಂ ಇಬ್ರಾಹಿಂ ಭದ್ರಾವತಿಯಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಸೋತಮೇಲೂ ಎರಡು ಬಾರಿ ಎಂಎಲ್ಸಿ ಮಾಡಿದ್ದಾರೆ. ಚೇರ್ಮನ್ ಮಾಡಿದ್ದರು. ಕಾಂಗ್ರೆಸ್ ಪಕ್ಷ ಇಬ್ರಾಹಿಂಗೆ ಮತ್ತೇನು ಮಾಡ್ಬೇಕು? ಮುಸ್ಲಿಂ ಸಮಾಜಕ್ಕೆ ಕಾಂಗ್ರೆಸ್ ಏನು ಮಾಡಿಲ್ಲ ಅನ್ನೋದಾದ್ರೆ, ಅಲ್ಪಸಂಖ್ಯಾತರಿಗೆ 120ಕೋಟಿ ಇದ್ದಿದ್ದು 3150ಕೋಟಿಗೆ ಹೆಚ್ಚಿಸಿದ್ದು ಸಿದ್ದರಾಮಯ್ಯ ಅಧಿಕಾರದಲ್ಲೇ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ