ಯೋಗೇಶ್ ಗೌಡ ಕೊಲೆ ಪ್ರಕರಣ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ

ಯೋಗೇಶ್ ಗೌಡ ಹತ್ಯೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸಕ್ಕೆ ರೇಡ್ ಮಾಡಿ ವಶಕ್ಕೆ ತೆಗೆದುಕೊಂಡಿದ್ದು, ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಮಾಜಿ ಸಚಿವ ವಿನಯ್ ಕುಲಕರ್ಣಿ

ಮಾಜಿ ಸಚಿವ ವಿನಯ್ ಕುಲಕರ್ಣಿ

  • Share this:
ಹುಬ್ಬಳ್ಳಿ/ಮಂಗಳೂರು(ನ. 05): ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಇಂದು ಗುರುವಾರ ಬೆಳಗ್ಗೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ವಿನಯ್ ಕುಲಕರ್ಣಿ ಅವರನ್ನ ವಶಕ್ಕೆ ಪಡೆದಿದ್ದಾರೆ. ಧಾರವಾಡದ ಬರಾಕೂಟ್ರಿಯಲ್ಲಿರುವ ನಿವಾಸದಲ್ಲಿ ವಿನಯ್ ಕುಲಕರ್ಣಿ ಅವರನ್ನ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಸಿಬಿಐ ಅಧಿಕಾರಿ ರಾಕೇಶ್ ರಂಜನ್ ನೇತೃತ್ವದ ತಂಡದಿಂದ ಈ ಕಾರ್ಯಾಚರಣೆ ನಡೆಯಿತು. ಈಗ ಅವರನ್ನು ಧಾರವಾಡದ ಉಪನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಈ ಬೆಳವಣಿಗೆ ಬಗ್ಗೆ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಜಗದೀಶ್ ಶೆಟ್ಟರ್, ಕಾನೂನು ಪ್ರಕಾರ ಸಿಬಿಐ ವಿಚಾರಣೆ ನಡೆಯುತ್ತಿದೆ. ಇದಕ್ಕಿಂತ ಹೆಚ್ಚು ಹೇಳಲು ಸಾಧ್ಯ ಇಲ್ಲ ಎಂದಿದ್ದಾರೆ.

ಮಂಗಳೂರಿನಲ್ಲಿ ಬಿಜೆಪಿ ಸಭೆ ನಡೆಸಲು ಸಜ್ಜಾಗಿರುವ ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿಬಿಐನ ಕ್ರಮ ರಾಜಕೀಯ ಪ್ರೇರಿತ ಎಂಬ ಟೀಕೆಯನ್ನು ತಳ್ಳಿಹಾಕಿದ್ಧಾರೆ. ಯೋಗೇಶ್ ಗೌಡ ಕೊಲೆಯಾದಾಗ ತನಿಖೆ ನಡೆಸುವಂತೆ ಬಿಜೆಪಿ ಆಗಲೇ ಆಗ್ರಹಿಸಿತ್ತು. ಅವರ ಮನೆ, ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂಬುದು ಒತ್ತಾಯವಾಗಿತ್ತು. ಈಗ ಎಲ್ಲಾ ತನಿಖೆ ಪರಿಶೀಲನೆ ಬಳಕ ಸಿಬಿಐ ಕಾನೂನು ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಎಲ್ಲದರಲ್ಳೂ ರಾಜಕೀಯ ಹುಡುಕುವ ಹುಚ್ಚಿದೆ. ಕಾಂಗ್ರೆಸ್ ಆಡಳಿತದ ವೇಳೆಯೂ ಸಿಬಿಐ ದಾಳಿ, ಬಂಧನಗಳು ಆಗಿದ್ದವು. ಆಗೆಲ್ಲಾ ಇದು ಇವರ ಪ್ರೇರಣೆಯಲ್ಲೇ ಅಗುತ್ತಿತ್ತಾ ಎಂದು ಕಟೀಲ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ 10 ದಿನಗಳವರೆಗೆ ತೆರೆಯಲಿದೆ ಹಾಸನಾಂಬ ದೇಗುಲ; ಸ್ಥಳೀಯ ಜನಪ್ರತಿನಿಧಿ, ಆಹ್ವಾನಿತರಿಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ

ಏನಿದು ಪ್ರಕರಣ?

ಧಾರವಾಡ ಜಿ.ಪಂ. ಸದಸ್ಯ ಹಾಗೂ ಸ್ಥಳೀಯ ಬಿಜೆಪಿ ನಾಯಕರಾಗಿದ್ದ ಯೋಗೇಶ್ ಗೌಡ ಅವರನ್ನು 2016, ಜೂನ್ 15ರಂದು ಸಪ್ತಾಪುರದಲ್ಲಿ ಹತ್ಯೆ ಮಾಡಲಾಗಿತ್ತು. ಅವರ ಜಿಮ್​ನ ಹೊರಗೆ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ಎಸಗಿ ಕೊಲೆ ಮಾಡಲಾಗಿತ್ತು. ಬೈಕ್​ನಲ್ಲಿ ಬಂದಿದ್ದ ಸುಪಾರಿ ಹಂತಕರು ಈ ಕೃತ್ಯ ಎಸಗಿದ್ದರು.

ಆ ಘಟನೆ ಬಳಿಕ ಪೊಲೀಸರು ಧಾರವಾಡದ ಆರು ಮಂದಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ್ದರು. 2019, ಸೆಪ್ಟೆಂಬರ್​ನಲ್ಲಿ ಈ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಲಾಯಿತು. ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಬಸವರಾಜ ಉತ್ತಿಗೆ ಅವರು ಸಿಬಿಐ ತನಿಖೆಗೆ ತಡೆಯಾಜ್ಞೆ ತಂದಿದ್ದರು. ಆದರೆ, ಸಿಬಿಐ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತೆರವು ಮಾಡಿಸಿಕೊಂಡಿತ್ತು. ಕೋವಿಡ್ ಸಂಕಷ್ಟದ ಮಧ್ಯೆಯೂ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿ ಎಂಟು ಮಂದಿ ಆರೋಪಿಗಳನ್ನ ಈವರೆಗೆ ಬಂಧಿಸಿದೆ. ಯೋಗೇಶ್ ಗೌಡ ಅವರನ್ನು ರಾಜಕೀಯ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬುದು ಸಿಬಿಐ ಆರೋಪ.

ವರದಿ: ಪರಶುರಾಮ ತಹಶೀಲ್ದಾರ್
Published by:Vijayasarthy SN
First published: