ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡಿತಾ ಇದೆ: ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ

ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪುಲಕೇಶಿ ನಗರ ಶಾಸಕ ಆರ್. ಅಖಂಡ ಶ್ರೀನಿವಾಸ್ ಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಇಂದು ಟ್ಯಾನರಿ ರಸ್ತೆಯಲ್ಲಿ ರಸ್ತೆ ತಡೆಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.

ಮಾಜಿ ಸಚಿವ ರಾಮಲಿಂಗಾರೆಡ್ಡಿ.

ಮಾಜಿ ಸಚಿವ ರಾಮಲಿಂಗಾರೆಡ್ಡಿ.

  • Share this:
ಬೆಂಗಳೂರು: ಬಿಜೆಪಿ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡಿತಾ ಇದೆ. ಇದರ ವಿರುದ್ಧ ದೊಡ್ಡ ಹೊರಾಟ ಮಾಡಬೇಕಾಗುತ್ತೆ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ ತಿಳಿಸಿದ್ದಾರೆ. ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಪುಲಕೇಶಿ ನಗರ ಶಾಸಕ ಆರ್. ಅಖಂಡ ಶ್ರೀನಿವಾಸ್ ಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು  ಟ್ಯಾನರಿ ರಸ್ತೆಯಲ್ಲಿ ರಸ್ತೆ ತಡೆಮಾಡುವ ಮೂಲಕ ಬೃಹತ್ ಪ್ರತಿಭಟನೆ ನಡೆಸಿದ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿ, "ಕೇಂದ್ರ ಸರ್ಕಾರ ಅನಗತ್ಯವಾಗಿ ಬೆಲೆ ಏರಿಕೆ ಮಾಡುತ್ತಿದೆ. ನಿರಂತರವಾಗಿ ಈ ರೀತಿ ಬೆಲೆ ಏರಿಕೆ ಮೂಲಕ ಮಧ್ಯಮ ಹಾಗೂ ಕೆಳವರ್ಗದ ಜನರ ಬದುಕನ್ನು ನಾಶ ಮಾಡುತ್ತಿದೆ. ಈ ಸರ್ಕಾರದ ವಿರುದ್ಧ ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಹೋರಾಟ ಆರಂಭಿಸಿದ್ದೇವೆ. ಎಲ್ಲಾ ವಿಧಾನಸಭೆ ಕ್ಷೇತ್ರ ತಾಲೂಕು ಕೇಂದ್ರ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ" ಎಂದು ಕಿಡಿಕಾರಿದರು.

ಸಚಿವ ಉಮೇಶ್ ಕತ್ತಿ ನೀಡಿರುವ ಟಿವಿ, ಬೈಕ್ ಇರುವವರಿಗೆ ಬಿಪಿಎಲ್ ಕಾರ್ಡ್ ರದ್ದು ಪಡಿಸುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ಕತ್ತಿ ತಮ್ಮ ಹೇಳಿಕೆ ವಾಪಸ್ ಪಡೆಯ ಬೇಕು. ನಾನು ಕೂಡ ಎಸ್ ಎಂ ಕೃಷ್ಣ ಸರ್ಕಾರದಲ್ಲಿ ಆಹಾರ ಮಂತ್ರಿಯಾಗಿದ್ದೆ. ನಗರದ ಬಡವರಿಗೂ ಬಿಪಿಎಲ್ ಕಾರ್ಡ್ ನೀಡಿದ್ವಿ. ಈಗ 2 ವರೆ ಸಾವಿರ ಕೊಟ್ರೆ ಟಿವಿ ಸಿಗುತ್ತೆ. ಕಂತಲ್ಲಿ ಬೈಕ್ ತಗೋತಾರೆ. ಎಲ್ಲರು ಹೊಸ ಬೈಕ್ ತಗೋತಾರಾ?  ಹೀಗಂದ ಮಾತ್ರಕ್ಕೆ ಕಾರ್ಡ್ ರದ್ದು ಮಾಡೋದು ಸರಿ ಅಲ್ಲ. ಈಗ ಟಿವಿ ಬೈಕ್ ಫ್ರಿಜ್ ಅಂತಾ ಇದಾರೆ. ಮೊಬೈಲ್ ಕೂಡ ಆ ಪಟ್ಟಿಗೆ ಸೇರಿಸಲಿ ಹಾಗಾದ್ರೆ. ಐದು ಎಕರೆ ಜಮೀನು ಅಂತಾರೆ ಎಷ್ಟು ಮಳೆ ಬಂದಿದೆ" ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಸತತ ಬರಗಾಲ‌ ಬರ್ತಾನೇ ಇದೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪ್ರತಿಯೊಬ್ಬರಿಗೂ 7  ಕೆಜಿ ಅಕ್ಕಿ ಕೊಡ್ತಾ ಇದ್ರು. ಈಗ ಅದನ್ನು ಕಡಿಮೆ ಮಾಡಿದ್ದಾರೆ. ಬಿಜೆಪಿ ಸಂಸದರಿಗೆ ಪ್ರಧಾನಿ ಭೇಟಿ ಮಾಡುವ ಧೈರ್ಯ ಇಲ್ಲ. ಕೊರೊನಾ ಕಾಲದಲ್ಲಿ ಆರು ತಿಂಗಳು ಪ್ರಧಾನಿ ಮನೆ ಬಿಟ್ಟು ಆಚೆ ಬಂದಿಲ್ಲ. ನಾವು ಜನರ ಜೊತೆ ಇದ್ವಿ. ರಾಜ್ಯದಲ್ಲಿ ಪ್ರವಾಹ ಬಂದಾಗಲೂ ಬಂದಿಲ್ಲ. ಈಗ ತಮಿಳುನಾಡು ಕೇರಳಕ್ಕೆ ಹೋಗ್ತಾರೆ. ಚುನಾವಣೆ ಬಂದಾಗ ಮಾತ್ರ  ಬರ್ತಾರೆ. ಡಿಜಿ ಹಳ್ಳಿ‌ ಕೆ.ಜಿ ಹಳ್ಳಿ ಗಲಾಟೆ ವಿಚಾರ, ನಾವು ಅಖಂಡ ಶ್ರೀನಿವಾಸ್ ಮೂರ್ತಿ ಪರ ಇದ್ದೇವೆ.

ಸಂಪತ್ ರಾಜ್ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಆಗಬೇಕು. ಪಕ್ಷದಲ್ಲಿ ಶಿಸ್ತುಕ್ರಮ ಜರುಗಿಸುವ ಬಗ್ಗೆ ಪಕ್ಷದ ಅಧ್ಯಕ್ಷರ ಜೊತೆ ನಾನು ಮಾತಾಡ್ತೇನೆ. ನಾನು ಈಗ ಕೆಪಿಸಿಸಿಯಲ್ಲಿ ಕಾರ್ಯಾಧ್ಯಕ್ಷ. ಕಾರ್ಯಧ್ಯಕ್ಷನಾಗಿ ಪಕ್ಷದ ಅಧ್ಯಕ್ಷರ ಜೊತೆ ಮಾತುಕತೆ ನಡೆಸ್ತೇನೆ. ಅಖಂಡ ಶ್ರೀನಿವಾಸ್ ಮೂರ್ತಿ ಅವರಿಗೆ ಪಕ್ಷದಲ್ಲಿ ಅನ್ಯಾಯ ಆಗಲ್ಲ. ಯಾರೇ ತಪ್ಪು ಮಾಡಿದ್ದರು ಅವರ ವಿರುದ್ಧ ಸೂಕ್ತ ಶಿಸ್ತುಕ್ರಮ ಜರುಗಿಸ್ತೇವೆ ಎಂದರು.

ಇದನ್ನೂ ಓದಿ: ಚೀನಾದಲ್ಲಿ ನೂತನ ವಿಚ್ಛೇದನ ಕಾನೂನಿಗೆ ಜನರ ವಿರೋಧ: ಕಾರಣವೇನು ಗೊತ್ತಾ..?

ಕುರುಬ ಎಸ್.ಟಿ ಮೀಸಲಾತಿಗೆ ಒತ್ತಾಯಿಸಿ ಸಚಿವ ಈಶ್ವರಪ್ಪ ಸಮಾವೇಶದ ನೇತೃತ್ವದ ವಹಿಸಿದ್ದು ಸರಿಯಲ್ಲ. ಆಡಳಿತ ಪಕ್ಷದಲ್ಲಿದ್ದು ಬಿಜೆಪಿ ವಿರೋಧ ಪಕ್ಷದ ರೀತಿ ಕೆಲಸ ಮಾಡುತ್ತಿದೆ. ಕುರುಬ ಸಮುದಾಯದ ಮತಗಳು ಕಾಂಗ್ರೆಸ್ ಜೊತೆಗಿವೆ. ಸಿದ್ದರಾಮಯ್ಯ ಅವರ ನಾಯಕತ್ವವನ್ನ ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರನ್ನ ವೀಕ್ ಮಾಡುವ ಪ್ರಯತ್ನಕ್ಕೆ ಈಶ್ವರಪ್ಪ ಕೈ ಹಾಕಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ.

ಸಿದ್ದರಾಮಯ್ಯ ಅವರನ್ನ ಬಿಟ್ಟು ಕುರುಬ ಸಮುದಾಯದ ಮತಗಳು ಬಿಜೆಪಿಯ ಕಡೆ ಹೋಗಲ್ಲ. ಲಿಂಗಾಯತ 2 ಎ ಮೀಸಲಾತಿ ಬಗ್ಗೆ ಪಕ್ಷದ ಪ್ರಮುಖ ನಾಯಕರು ಚರ್ಚಿಸಿ ಕಾಂಗ್ರೆಸ್ ನಿಲುವು ವ್ಯಕ್ತಪಡಿಸ್ತೇವೆ ಎಂದರು. ಇದೇ ಸಂದರ್ಭ ನೂರಾರು ಕಾರ್ಯಕರ್ತರು ಪಾಲ್ಗೊಂಡು ಕೇಂದ್ರ ಸರ್ಕಾರದ ಇಂಧನ ಬೆಲೆ ಏರಿಕೆ ಖಂಡಿಸಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
Published by:MAshok Kumar
First published: