news18-kannada Updated:January 28, 2021, 8:55 AM IST
ಎಂ.ಸಿ. ಮನಗೂಳಿ
ಬೆಂಗಳೂರು: ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ ವಿಧಿವಶರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಜ. 9ರಂದು ಇಲ್ಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಎಂ.ಸಿ. ಮನಗೂಳಿ ಇಂದು ನಸುಕಿನ ಜಾವ 1ಗಂಟೆಗೆ ಮೃತಪಟ್ಟಿದ್ದಾರೆ. ವಿಜಯಪುರದ ಸಿಂಧಗಿ ಕ್ಷೇತ್ರದ ಶಾಸಕರಾಗಿದ್ದ ಅವರು ಪತ್ನಿ ಸಿದ್ದಮ್ಮ, ನಾಲ್ವರು ಗಂಡು ಮಕ್ಕಳು, ಒಬ್ಬ ಹೆಣ್ಣುಮಗಳು ಮತ್ತು ಮೊಮ್ಮಕ್ಕಳನ್ನ ಅಗಲಿದ್ದಾರೆ.
ಇಂದು ಮಧ್ಯಾಹ್ನ ಅವರ ಪಾರ್ಥಿವ ಶರೀರವನ್ನು ಸಿಂಧಗಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಆದರೆ, ಅಂತ್ಯಸಂಸ್ಕಾರ ಯಾವಾಗ ನಡೆಸಬೇಕೆಂದು ಇನ್ನೂ ನಿರ್ಧಾರವಾಗಿಲ್ಲ. ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ಮನಗೂಳಿ ನಿಧನಕ್ಕೆ ಹಲವು ಸಂತಾಪ ಸೂಚಿಸಿದ್ದಾರೆ. “ರಾಜಕೀಯ ಮತ್ತು ವೈಯಕ್ತಿಕವಾಗಿ ನನ್ನ ಹಲವು ದಶಕಗಳ ಒಡನಾಡಿಯಾಗಿದ್ದ ಮಾಜಿ ಸಚಿವ, ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾದ ಶ್ರೀ ಎಂ.ಸಿ. ಮನಗೂಳಿ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಭಗವಂತ ಅವರ ಕುಟುಂಬ ಮತ್ತು ಅಪಾರ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿ ಕರುಣಿಸಲಿ” ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: HD Kumarswamy: ಬೆಳಗಾವಿ ಮರಾಠಿಗರದ್ದಲ್ಲ, ವೀರ ಕನ್ನಡಿಗರದ್ದು: ಠಾಕ್ರೆಗೆ ಎಚ್ಡಿ ಕುಮಾರಸ್ವಾಮಿ ತಿರುಗೇಟು
1936, ಸೆಪ್ಟೆಂಬರ್ 29ರಂದು ವಿಜಯಪುರದ ಬಸವನಬಾಗೇವಾಡಿ ತಾಲೂಕಿನ ಮನಗೂಳಿಯಲ್ಲಿ ಜನಸಿದ ಮಲ್ಲಪ್ಪ ಚೆನ್ನವೀರಪ್ಪ ಅವರು SSLC ವರೆಗೂ ವಿದ್ಯಾಭ್ಯಾಸ ಮಾಡಿದ್ದರು. 1989ರಲ್ಲಿ ಸಿಂಧಗಿ ಮತಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ್ದರು. 1994ರಲ್ಲಿ ಜನತಾ ದಳ ಪಕ್ಷದ ಟಿಕೆಟ್ ಪಡೆದು ಅದೇ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆಗೆ ಮೊದಲ ಬಾರಿ ಪ್ರವೇಶ ಮಾಡಿದ್ದರು. ಆಗ ಅಸ್ತಿತ್ವಕ್ಕೆ ಬಂದಿದ್ದ ಜೆಎಚ್ ಪಟೇಲ್ ನೇತೃತ್ವದ ಜನತಾ ದಳ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದರು. ಆ ಬಳಿಕ ನಡೆದ ಸತತ ನಾಲ್ಕು ಚುನಾವಣೆಗಳಲ್ಲಿ ಸೋತಿದ್ದ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಎರಡನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕುಮಾರಸ್ವಾಮ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಅವರು ತೋಟಗಾರಿಕಾ ಸಚಿವರಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು.
ವರದಿ: ಮಹೇಶ ವಿ. ಶಟಗಾರ
Published by:
Vijayasarthy SN
First published:
January 28, 2021, 7:40 AM IST